Asianet Suvarna News Asianet Suvarna News

ವಾಟ್ಸಾಪ್‌, ಟೆಲಿಗ್ರಾಂಗೆ ಗುಡ್‌ಬೈ: ಪಾಕ್‌ ಉಗ್ರರಿಂದ 2ಜಿ ಆ್ಯಪ್‌ ಬಳಕೆ!

2ಜಿ ಆ್ಯಪ್‌ಗಳಿಗೆ ಪಾಕ್‌ ಉಗ್ರರ ಮೊರೆ!| ಮತ್ತೊಂದು ಪ್ರಾಬ್ಲಂ| ವಾಟ್ಸಾಪ್‌, ಟೆಲಿಗ್ರಾಂ ಕೈಬಿಟ್ಟು ಹೊಸ ರಹಸ್ಯ ಆ್ಯಪ್‌ ಬಳಕೆ| ಯಾರು ಬಳಸುತ್ತಿದ್ದಾರೆಂದೇ ತಿಳಿಯದು

Terror groups in Pak switch to new messaging apps pod
Author
Bangalore, First Published Jan 25, 2021, 7:37 AM IST

ಶ್ರೀನಗರ(ಜ.25): ವಾಟ್ಸಾಪ್‌ ಸಂದೇಶಗಳ ಗೌಪ್ಯತೆ ಕುರಿತು ಜನಸಾಮಾನ್ಯರಲ್ಲಿ ಅನುಮಾನಗಳು ಕಾಡುತ್ತಿರುವ ಹೊತ್ತಿನಲ್ಲೇ ಎಚ್ಚೆತ್ತುಕೊಂಡಿರುವ ಉಗ್ರ ಸಂಘಟನೆಗಳು ವಾಟ್ಸಾಪ್‌ನಂಥ ಆ್ಯಪ್‌ ಬಿಟ್ಟು ಹೊಸ ರಹಸ್ಯ ‘2ಜಿ ಆ್ಯಪ್‌’ಗಳ ಮೊರೆ ಹೋಗಿರುವ ವಿಷಯ ಭದ್ರತಾ ಸಂಸ್ಥೆಗಳ ಗಮನಕ್ಕೆ ಬಂದಿದೆ.

ಇವುಗಳ ಪೈಕಿ ಅಮೆರಿಕ, ಯುರೋಪ್‌ ಮತ್ತು ಟರ್ಕಿ ಕಂಪನಿ ಅಭಿವೃದ್ಧಿಪಡಿಸಿರುವ 3 ಆ್ಯಪ್‌ಗಳ ಬಳಕೆ ಉಗ್ರ ಸಂಘಟನೆಗಳಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಇಂಥ ಆ್ಯಪ್‌ಗಳನ್ನು ಪಾಕ್‌ ಉಗ್ರ ಸಂಘಟನೆಗಳು, ಭಾರತದಲ್ಲಿನ ಯುವಕರನ್ನು ಉಗ್ರ ಕೃತ್ಯಕ್ಕೆ ಸೆಳೆಯಲು ಬಳಸಿಕೊಳ್ಳುತ್ತಿವೆ. ಭದ್ರತಾ ಕಾರಣಕ್ಕಾಗಿ ಈ ಮೂರೂ ಆ್ಯಪ್‌ಗಳ ಹೆಸರನ್ನು ಭದ್ರತಾ ಸಂಸ್ಥೆಗಳು ಗೌಪ್ಯವಾಗಿಟ್ಟಿವೆ.

ರಹಸ್ಯ ಕಾಪಾಡುವ ಆ್ಯಪ್‌ಗಳು:

ಈ ಹೊಸ ಆ್ಯಪ್‌ಗಳಲ್ಲಿ ರವಾನೆಯಾಗುವ ಸಂದೇಶಗಳು ಸಂಪೂರ್ಣವಾಗಿ ಗೂಢಲಿಪಿಯಲ್ಲಿದ್ದು, ಅವು ರವಾನಿಸಲಾದ ಮತ್ತು ತಲುಪಿದ ಮೊಬೈಲ್‌ಗಳಲ್ಲಿ ಮಾತ್ರವೇ ಸಾಮಾನ್ಯ ಭಾಷೆಗೆ ಪರಿವರ್ತನೆಯಾಗುವ ಕಾರಣ, ನಡುವೆ ಅದನ್ನು ಬೇಧಿಸುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಅದರಲ್ಲೂ ಉಗ್ರ ಸಂಘಟನೆಗಳು, ಯುವಕರನ್ನು ಸೆಳೆಯಲು ಬಳಸುತ್ತಿರುವ ಒಂದು ಆ್ಯಪ್‌, ಬಳಕೆದಾರರ ಮೊಬೈಲ್‌ ನಂಬರ್‌, ಇ ಮೇಲ್‌ ವಿಳಾಸವನ್ನೂ ಕೇಳುವುದಿಲ್ಲ. ಈ ಮೂಲಕ ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಗೌಪ್ಯವಾಗಿಯೇ ಇಡುತ್ತಿವೆ.

ಏಕೆ ಈ ಆ್ಯಪ್‌ ಬಳಕೆ?

ಕಾಶ್ಮೀರದಲ್ಲಿ ಕೇವಲ 2ಜಿ ಇಂಟರ್ನೆಟ್‌ ಸೇವೆ ಲಭ್ಯವಿರುವ ಹಿನ್ನೆಲೆಯಲ್ಲಿ ಉಗ್ರರು ಇಂಥ ಆ್ಯಪ್‌ಗಳ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಆ್ಯಪ್‌ಗಳಿಗೆ 3ಜಿ ನೆಟ್‌ವರ್ಕ್ ಅಗತ್ಯವಿಲ್ಲ. ಅತ್ಯಂತ ನಿಧಾನಗತಿಯ (2ಜಿ) ಇಂಟರ್ನೆಟ್‌ ಸಂಪರ್ಕದಲ್ಲೂ ಕೆಲಸ ಮಾಡುತ್ತವೆ. ಹೀಗಾಗಿಯೇ ಉಗ್ರರಿಗೆ ಇವು ಅಚ್ಚುಮೆಚ್ಚು.

ಪತ್ತೆಹಚ್ಚಲಾಗದ ಸಿಮ್‌ಗಳ ಬಳಕೆ!

ಶ್ರೀನಗರ: ಪಾಕಿಸ್ತಾನಿ ಉಗ್ರರು ‘ವರ್ಚುವಲ್‌ ಸಿಮ್‌ ಕಾರ್ಡ್‌’ ಬಳಕೆ ಹೆಚ್ಚಿಸಿರುವುದು ಕೂಡಾ ಗಮನಕ್ಕೆ ಬಂದಿದೆ. ಅಂದರೆ ಮೊಬೈಲ್‌ನಲ್ಲಿ ಸಿಮ್‌ಕಾರ್ಡ್‌ ಇಲ್ಲದಿದ್ದರೂ ಮೊಬೈಲ್‌ಗಳು ಕೆಲಸ ಮಾಡುತ್ತವೆ.

ವಿದೇಶವೊಂದರಲ್ಲಿ ಕುಳಿತು ಸೇವೆ ನೀಡುವ ಕಂಪನಿಗಳು ಇಂಥ ವರ್ಚುವಲ್‌ ಸಿಮ್‌ ಸೃಷ್ಟಿಸಿಕೊಡುತ್ತವೆ. ಇಲ್ಲಿ ಕಂಪ್ಯೂಟರ್‌ಗಳು ಟೆಲಿಫೋನ್‌ ನಂಬರ್‌ ಸೃಷ್ಟಿಸುತ್ತವೆ. ಬಳಿಕ ಬಳಕೆದಾರರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಮೊಬೈಲ್‌ ಮೂಲಕ ಕರೆ ಮಾಡುವ ಹಾಗೂ ಸಂದೇಶ ರವಾನಿಸುವ ಕೆಲಸ ಮಾಡಬಹುದು. ಇದನ್ನು ಬಳಸುವವರು (ಉಗ್ರರು) ಸಿಕ್ಕಿಬೀಳುವ ಸಾಧ್ಯತೆಯೇ ಇರುವುದಿಲ್ಲ.

40 ಸಿಆರ್‌ಪಿಎಫ್‌ ಯೋಧರನ್ನು ಹತ್ಯೆಗೈದ ಪುಲ್ವಾಮಾ ದಾಳಿಯ ತನಿಖೆ ನಡೆಸಿದ ಎನ್‌ಐಎ, ದಾಳಿ ವೇಳೆ ಉಗ್ರರು 40ಕ್ಕೂ ಹೆಚ್ಚು ವರ್ಚವಲ್‌ ಸಿಮ್‌ ಬಳಸಿದ್ದನ್ನು ಪತ್ತೆ ಹಚ್ಚಿತ್ತು.

Follow Us:
Download App:
  • android
  • ios