ಬೀಜಿಂಗ್(ಜ.12): ವಿಶ್ವದ ಮೊದಲ ಕೊರೋನಾ ಪ್ರಕರಣ ಚೀನಾದಲ್ಲಿ ಪತ್ತೆಯಾಗಿ ಒಂದು ವರ್ಷ ಉರುಳಿದ ಬಳಿಕ ವೈರಸ್‌ನ ಮೂಲದ ತನಿಖೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ತಂಡವೊಂದು ಗುರುವಾರ ಚೀನಾಕ್ಕೆ ಭೇಟಿ ನೀಡಲಿದೆ.

ಡಬ್ಲ್ಯುಎಚ್‌ಒ ಪರಿಣತರು ತನ್ನ ದೇಶಕ್ಕೆ ಭೇಟಿ ನೀಡುತ್ತಿದೆ ಎಂದು ಚೀನಾ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್‌ ಕೂಡ ಇದನ್ನು ಖಚಿತಪಡಿಸಿದ್ದು, ಕೊರೋನಾದ ಮೂಲ ಹಾಗೂ ಪ್ರಸರಣ ಮಾರ್ಗದ ಕುರಿತು ಜಾಗತಿಕ ಅಧ್ಯಯನ ನಡೆಸಬೇಕು ಎಂದು ವಿಜ್ಞಾನಿಗಳಿಗೆ ಚೀನಾ ಬೆಂಬಲ ನೀಡಿಕೊಂಡು ಬಂದಿದೆ ಎಂದಿದ್ದಾರೆ.

ಡಬ್ಲ್ಯುಎಚ್‌ಒ ವಿಜ್ಞಾನಿಗಳಿಗೆ ಚೀನಾದ ವುಹಾನ್‌ ವೈರಾಲಜಿ ಸಂಸ್ಥೆಗೆ ತೆರಳಲು ಅನುಮತಿ ಸಿಗುತ್ತದೆಯೇ ಎಂಬುದು ಖಚಿತಪಟ್ಟಿಲ್ಲ. ಈ ತಂಡ ಎಲ್ಲೆಲ್ಲಿಗೆ ಭೇಟಿ ಕೊಡಲಿದೆ ಎಂಬುದನ್ನೂ ಚೀನಾ ಬಹಿರಂಗಪಡಿಸಿಲ್ಲ. ಡಬ್ಲ್ಯುಎಚ್‌ಒ ತಂಡದಲ್ಲಿ 10 ವಿಜ್ಞಾನಿಗಳು ಇರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಕೊರೋನಾ ವೈರಾಣು ವುಹಾನ್‌ನ ವೈರಾಣು ಸಂಸ್ಥೆಯಿಂದ ಸೋರಿಕೆಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗ್ರಹಿಸಿದ್ದರು. ಅಲ್ಲದೆ ಕೊರೋನಾ ವೈರಸ್ಸನ್ನು ಚೀನಾ ವೈರಸ್‌ ಎಂದು ಕರೆದಿದ್ದರು. ಟ್ರಂಪ್‌ ಆರೋಪವನ್ನು ಚೀನಾ ನಿರಾಕರಿಸಿತ್ತು.