ಎಬೋಲಾ ವರ್ಗದ ಮಾರ್‌ಬರ್ಗ್ ವೈರಸ್ ಸ್ಫೋಟ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಮಾರಕ ಎಬೋಲಾ ವೈರಸ್ ವರ್ಗಕ್ಕೆ ಸೇರಿದ ಮಾರ್‌ಬರ್ಗ್ ವೈರಸ್ ಸ್ಫೋಟಗೊಂಡಿದೆ.ತಾಂಜೆನಿಯಾದಲ್ಲಿ ಈ ವೈರಸ್ ಪತ್ತೆಯಾಗಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ತಾಂಜೆನಿಯಾ(ಜ.21) ಎಬೋಲಾ ಗುಂಪಿಗೆ ಸೇರಿದ ಮಾರಕ ವೈರಸ್ ಮಾರ್‌ಬರ್ಗ್ ಇದೀಗ ತಾಂಜೆನಿಯಾದಲ್ಲಿ ಪತ್ತೆಯಾಗಿದೆ. 2 ವರ್ಷಗಳ ಬಳಿಕ ಮತ್ತೆ ತಾಂಜೆನಿಯಾದಲ್ಲಿ ಈ ವೈರಸ್ ಪತ್ತೆಯಾಗಿದೆ. ಸದ್ಯ 9 ಮಂದಿಯಲ್ಲಿ ಮಾರ್‌ಬರ್ಗ್ ವೈರಸ್ ಕಾಣಿಸಿಕೊಂಡಿದೆ. 9 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಅತ್ಯಂತ ಮಾರಕ ವೈರಸ್ ಆಗಿದ್ದು, ಸದ್ಯಕ್ಕೆ ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಈ ವೈರಸ್ ಪತ್ತೆಯಾದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇಷ್ಟೇ ಅಲ್ಲ ತಾಂಜೆನಿಯಾ ಪ್ರವಾಸ ರದ್ದುಗೊಳಿಸುವಂತೆ ಮನವಿ ಮಾಡಿದೆ.
ಮಾರ್‌ಬರ್ಗ್ ವೈರಸ್ ಮಾರಾಣಾಂತಕವಾಗಿದೆ. ಇದಕ್ಕೆ ಲಸಿಕೆ ಅಥವಾ ಇತರ ಔಷಧಗಳು ಲಭ್ಯವಿಲ್ಲ. ಸೋಂಕು ತಗುಲಿದ ರೋಗಿಯಿಂದ ಅತೀ ವೇಗವಾಗಿ ಇತರರಿಗೆ ಹರಡಲಿದೆ. ಹೀಗಾಗಿ ರೋಗಿಗಳ ಚಿಕಿತ್ಸೆಯೂ ಸವಾಲಾಗಿದೆ. ಜನವರಿ ತಿಂಗಳ ಆರಂಭದಲ್ಲಿ ಮಾರ್‌ಬರ್ಗ್ ತಾಂಜೆನಿಯಾದಲ್ಲಿ ಸ್ಫೋಟಗೊಂಡಿದೆ. ಇದುವರೆಗೆ 8 ಮಂದಿ ಮಾರ್‌ಬರ್ಗ್ ವೈರಸ್‌ಗೆ ಮೃತಪಟ್ಟಿದ್ದಾರೆ. ಮಾರ್‌ಬರ್ಗ್ ವೈರಸ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ.
2023ರಲ್ಲಿ ಇದೇ ತಾಂಜೆನಿಯಾದಲ್ಲಿ ಮಾರ್‌ಬರ್ಗ್ ಕಾಣಿಸಿಕೊಂಡಿತ್ತು. 2021ರಲ್ಲಿ ಘಾನದಲ್ಲಿ ಈ ವೈರಸ್ ಪತ್ತೆಯಾಗಿತ್ತು. ಆದರೆ ಹರಸಾಹಸ ಪಟ್ಟು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಆದರೆ ಸದ್ಯ ತಾಂಜೇನಿಯಾದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ. ದಿನದಿಂದ ದಿನಕ್ಕೆ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ತಾಂಜೆನಿಯಾ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರವಹಿಸಿದೆ.
ಎಬೋಲಾ ರೀತಿ ಅತ್ಯಂತ ಅಪಾಯಕಾರಿ, ಸಾಂಕ್ರಾಮಿಕ ಮಾರ್ಬರ್ಗ್ ವೈರಸ್ ಪತ್ತೆ, ಘಾನಾದಲ್ಲಿ 2 ಸಾವು!
ಮಾರ್‌ಬರ್ಗ್ ವೈರಸ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೇ ವೇಳೆ ತಾಂಜೆನಿಯಾದಲ್ಲಿ ಮಾರ್ಗಸೂಚಿ ಪ್ರಕಟಿಸಲಾಗಿದೆ. ತಾಂಜೆನಿಯಾದ ಪಕ್ಕದಲ್ಲಿರುವ ರ್ವಾಂಡಾ ಹಾಗೂ ಬುರುಂಡಿಯಲ್ಲೂ ಮಾರ್‌ಬರ್ಗ್ ವೈರಸ್ ಪತ್ತೆಯಾಗಿದೆ. ಐವರಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಈ ಹಿಂದೆ ಭಾರಿ ಆತಂಕ ಸೃಷ್ಟಿಸಿದ್ದ ಎಬೋಲಾ ಜಾತಿಗೆ ಸೇರಿದ ವೈರಸ್ ಇದಾಗಿದೆ. ಗಂಟಲು ನೋವು, ಕೆಮ್ಮು,ಶೀತ, ಜ್ವರ, ಮೈಕೈ ನೋವು, ಚರ್ಮದಲ್ಲಿ ತುರಿಕೆ ಆರಂಭಿಕ ಲಕ್ಷಣಗಳಾಗಿವೆ. ಎರಡರಿಂದ ಮೂರು ದಿನಗಳಲ್ಲಿ ರೋಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲಿದೆ. ಎದೆ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳಲಿದೆ. ಈ ಸೋಂಕು ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ತೀವ್ರ ಜ್ವರ ಕಾಣಿಸಿಕೊಂಡು ಅಸ್ವಸ್ಥರಾಗಲಿದ್ದಾರೆ.