ತಾಲಿಬಾನ್‌ಗೆ ಹೆದರಿ ಆಫ್ಘನ್ ಯೋಧರು ನೆರೆ ದೇಶಕ್ಕೆ ಪರಾರಿ!
* ತಾಲಿಬಾನ್ ದಾಳಿಗೆ ಹೆದರಿ ಕನಿಷ್ಠ 1000ಕ್ಕೂ ಹೆಚ್ಚು ಯೋಧರು ನೆರೆ ದೇಶಕ್ಕೆ ಪರಾರಿ
* ನೆರೆಯ ಕಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಅಫ್ಝನ್ ಯೋಧರು
* ಅಮೆರಿಕ ಸೇನೆ ಹಿಂದಕ್ಕೆ ಸರಿಯುತ್ತಲೇ, ಆಷ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ
ಕಾಬೂಲ್(ಜು.07): ಯೋಧರಿಗೆ ಹೆದರಿ ಉಗ್ರರು ಪರಾರಿಯಾಗುವುದು ಗೊತ್ತು. ಆದರೆ ಆಷ್ಘಾನಿಸ್ತಾನದಲ್ಲಿ ಅದು ಉಲ್ಟಾಆಗಿದೆ. ಅಲ್ಲಿ ತಾಲಿಬಾನ್ ದಾಳಿಗೆ ಹೆದರಿ ಕನಿಷ್ಠ 1000ಕ್ಕೂ ಹೆಚ್ಚು ಯೋಧರು, ನೆರೆಯ ಕಜಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಳಿಕ ಉಗ್ರರನ್ನು ಮಟ್ಟಹಾಕಲು ಆಷ್ಘಾನಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಡುಬಿಟ್ಟಿದ್ದ ಅಮೆರಿಕ, ಇದೀಗ ಆ ದೇಶದಿಂದ ಪೂರ್ಣ ಪ್ರಮಾಣದಲ್ಲಿ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದೆ. ಹೀಗೆ ಅಮೆರಿಕ ಸೇನೆ ಹಿಂದಕ್ಕೆ ಸರಿಯುತ್ತಲೇ, ಆಷ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ದೊಡ್ಡ ಪ್ರಮಾಣದಲ್ಲಿ ತನ್ನ ಪ್ರಾಬಲ್ಯ ವಿಸ್ತರಣೆಗೆ ಮುಂದಾಗಿದ್ದಾರೆ. ಈಗಾಗಲೇ ದೇಶದ 421 ಜಿಲ್ಲೆಗಳ ಪೈಕಿ 300ಕ್ಕೂ ಹೆಚ್ಚು ಜಿಲ್ಲೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಇತ್ತೀಚಿನವರೆಗೂ ಅಮೆರಿಕ ಸೇನೆ ಬೀಡುಬಿಟ್ಟಿದ್ದ ದೇಶದ ಉತ್ತರದ ಭಾಗಗಳನ್ನು ಮತ್ತೆ ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಉಗ್ರರು ದಿನೇ ದಿನೇ ಒಂದೊಂದು ಗಡಿ ದಾಟಿದಂತೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರು ಯಾವುದೇ ಪ್ರತಿರೋಧ ತೋರದೇ ನೆರೆಯ ಕಜಕಿಸ್ತಾನಕ್ಕೆ ಪರಾರಿಯಾಗುತ್ತಿದ್ದಾರೆ. ಅಷ್ಘಾನಿಸ್ತಾನದ ಜೊತೆಗೆ ಬಹುತೇಕ ಭಾಷೆ, ಸಂಸ್ಕೃತಿ ಹಂಚಿಕೊಂಡಿರುವ ಕಜಕಿಸ್ತಾನ ಕೂಡಾ ನೆರೆ ದೇಶದ ಯೋಧರನ್ನು ಗೌರವಯುತವಾಗಿ ತನ್ನ ದೇಶದೊಳಗೆ ಬಿಟ್ಟುಕೊಂಡಿದೆ ಎಂದು ವರದಿಯಾಗಿದೆ.