* ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ತಾಲಿಬಾನಿಗಳ ಸಿದ್ಧತೆ * ಪಾಕ್‌ಗೆ ಹಸ್ತ​ಕ್ಷೇಪ ಮಾಡ​ಲು ಬಿಡ​ಲ್ಲ: ತಾಲಿಬಾನ್‌

ಇಸ್ಲಾಮಾಬಾದ್‌(ಸೆ.07): ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯೆಯೇ, ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಲೆ. ಜನರಲ್‌ ಫೈಝ್‌ ಹಮೀದ್‌ ತಮ್ಮ ನಾಯಕ ಮುಲ್ಲಾ ಅಬ್ದುಲ್‌ ಘನಿ ಬರದಾರ್‌ನನ್ನು ಭೇಟಿಯಾಗಿದ್ದಾರೆ ಎಂದು ತಾಲಿಬಾನ್‌ ಖಚಿತಪಡಿಸಿದೆ.

ಆದರೆ ಆಫ್ಘನ್‌ನ ಆಂತರಿಕ ವ್ಯವಹಾರಗಳಲ್ಲಿ ಮಾತ್ರ ಪಾಕಿಸ್ತಾನ ಸೇರಿದಂತೆ ಯಾವುದೇ ದೇಶ ಮೂಗು ತೂರಿಸುವುದನ್ನು ಸಹಿಸುವುದಿಲ್ಲ ಎಂದು ತಾಲಿಬಾನ್‌ ಇದೇ ವೇಳೆ ಹೇಳಿದೆ.

ಈ ಬಗ್ಗೆ ಸೋಮವಾರ ಮಾತನಾಡಿದ ತಾಲಿಬಾನ್‌ ವಕ್ತಾರ ಜಬೀಉಲ್ಲಾ ಮುಜಾಹಿದ್‌, ‘ಐಎಸ್‌ಐ ಮುಖ್ಯಸ್ಥ ಹಮೀದ್‌ ನಮ್ಮ ನಾಯಕ ಮುಲ್ಲಾ ಬರಾದರ್‌ನನ್ನು ಭೇಟಿಯಾಗಿದ್ದು ಹೌದು. ಆದರೆ ಪಾಕಿಸ್ತಾನ ಸೇರಿದಂತೆ ಯಾವುದೇ ದೇಶವು ನಮ್ಮ ದೇಶದ ಆಂತರಿಕ ವಿಷಯದಲ್ಲಿ ತಲೆ ಹಾಕುವುದನ್ನು ತಾಲಿಬಾನ್‌ ಸಹಿಸಲ್ಲ’ ಎಂದಿದ್ದಾನೆ.

ತನ್ಮೂಲಕ ತಾಲಿಬಾನ್‌ ಆಹ್ವಾನದ ಮೇರೆಗೆ ಐಎಸ್‌ಐ ಮುಖ್ಯಸ್ಥ ಹಮೀದ್‌ ಕಾಬೂಲ್‌ ಭೇಟಿ ನೀಡಿದ್ದಾರೆ ಎಂಬ ವರದಿಯನ್ನು ತಾಲಿಬಾನ್‌ ಅಲ್ಲಗೆಳೆದಿದೆ.