* ಅಮೆರಿಕಕ್ಕೆ ಆದ ಗತಿಯೇ ಆದೀತು* ನಿಮ್ಮ ಸೇನೆ ಕಳಿಸಿದರೆ ಹುಷಾರ್‌: ಭಾರತಕ್ಕೆ ತಾಲಿಬಾನ್‌ ಎಚ್ಚರಿಕೆ* ಆದರೆ ಭಾರತದ ಅಭಿವೃದ್ಧಿ ಯೋಜನೆಗೆ ಸ್ವಾಗತ

ಕಾಬೂಲ್‌(ಆ.15): ಅಷ್ಘಾನಿಸ್ತಾನದ ಸರ್ಕಾರಕ್ಕೆ ನೆರವು ನೀಡಲು ಅಥವಾ ದೇಶದಲ್ಲಿ ನಡೆಯುತ್ತಿರುವ ‘ದಂಗೆಯನ್ನು’ ನಿಯಂತ್ರಿಸಲು ಭಾರತ ತನ್ನ ಸೇನೆಯನ್ನೇನಾದರೂ ಕಳಿಸಿದರೆ ಒಳ್ಳೆಯದಾಗುವುದಿಲ್ಲ ಎಂದು ತಾಲಿಬಾನ್‌ ಉಗ್ರರು ನೇರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಕತಾರ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ತಾಲಿಬಾನ್‌ ವಕ್ತಾರ, ‘ಅಷ್ಘಾನಿಸ್ತಾನದಲ್ಲಿ ಭಾರತ ಸರ್ಕಾರ ಅಣೆಕಟ್ಟು, ರಸ್ತೆ ಮುಂತಾದ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿದೆ. ಅದನ್ನು ನಾವು ಶ್ಲಾಘಿಸುತ್ತೇವೆ. ಆದರೆ, ಅಷ್ಘಾನಿಸ್ತಾನಕ್ಕೆ ಸೇನೆ ಕಳಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಬೇರೆ ದೇಶದವರು ಅಷ್ಘಾನಿಸ್ತಾನಕ್ಕೆ ಸೇನೆ ಕಳಿಸಿದರೆ ಏನಾಗುತ್ತದೆ ಎಂಬುದನ್ನು ಈಗಾಗಲೇ ನೋಡಿದ್ದೀರಿ. ಇದು ಎಲ್ಲರಿಗೂ ತೆರೆದ ಪುಸ್ತಕವಿದ್ದಂತೆ’ ಎಂದು ಅಮೆರಿಕ ಪಡೆಗಳು ಕಾಲುಕೀಳುತ್ತಿರುವುದನ್ನು ಪರೋಕ್ಷವಾಗಿ ಹೇಳಿದ್ದಾನೆ.

ಇದೇ ವೇಳೆ, ಬೇರೆ ದೇಶಗಳ ರಾಜತಾಂತ್ರಿಕರಿಗೆ ಹಾಗೂ ದೂತಾವಾಸಗಳಿಗೆ ತಾಲಿಬಾನ್‌ ಕಡೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನೂ ಆತ ನೀಡಿದ್ದಾನೆ. ಭಾರತ ಈಗಾಗಲೇ ಕಾಬೂಲ್‌ನಿಂದ ತನ್ನ ರಾಜತಾಂತ್ರಿಕರನ್ನು ಏರ್‌ಲಿಫ್ಟ್‌ ಮಾಡಿ ಕರೆದುಕೊಂಡು ಬಂದಿದೆ.