* ‘ಉಗ್ರರನ್ನು ಹೀರೋಗಳು’ ಎಂದು ಬಣ್ಣಿಸಿದ ಆಫ್ಘನ್‌ ಸಚಿವ* ಆತ್ಮಾಹುತಿ ಬಾಂಬರ್‌ಗಳಿಗೆ ತಾಲಿಬಾನ್‌ ‘ಹುತಾತ್ಮ’ ಪಟ್ಟ!* ಅಮೆರಿಕ, ಮಿತ್ರಪಡೆ ಮೇಲೆ ದಾಳಿ ಮಾಡಿದ್ದ ಉಗ್ರರು* ದಾಳಿಕೋರರ ಕುಟುಂಬಕ್ಕೆ ಹಣ, ನಿವೇಶನ ಘೋಷಣೆ

ಕಾಬೂಲ್‌(ಅ.21): ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್‌(Taliban) ಸರ್ಕಾರ ರಚನೆಗೂ ಮುನ್ನ ಅಮೆರಿಕ(US) ಮತ್ತು ಆಫ್ಘನ್‌ ಸೇನೆ ಮೇಲೆ ಆತ್ಮಾಹುತಿ ದಾಳಿ(Suicide Bomb) ನಡೆಸಿದವರನ್ನು ತಾಲಿಬಾನ್‌ ಸರ್ಕಾರ ‘ಹುತಾತ್ಮರು’(Martyrs) ಎಂದು ಘೋಷಣೆ ಮಾಡಿದೆ. ಅಲ್ಲದೆ ಆತ್ಮಾಹುತಿ ದಾಳಿ ಎಸಗಿದ ಕುಟುಂಬ ಸದಸ್ಯರಿಗೆ ಜಮೀನು, ನಿವೇಶನ, ಬಟ್ಟೆ-ಬರೆ ಹಣಕಾಸು ನೆರವು ಸೇರಿದಂತೆ ಇನ್ನಿತರ ನೆರವು ನೀಡುವುದಾಗಿ ತಾಲಿಬಾನ್‌ ಸರ್ಕಾರ ಭರವಸೆ ನೀಡಿದೆ.

ಅಮೆರಿಕ ಮತ್ತು ಆಫ್ಘನ್‌ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಮುಖಾಂತರ ತಾಲಿಬಾನ್‌(Taliban) ಸರ್ಕಾರ ರಚನೆಗೆ ದಾರಿಮಾಡಿಕೊಟ್ಟಬಾಂಬರ್‌ಗಳ ಕುಟುಂಬಗಳನ್ನು ಹಂಗಾಮಿ ಗೃಹ ಸಚಿವನೂ ಆದ ಕುಖ್ಯಾತ ಭಯೋತ್ಪಾದಕ ಸಿರಾಜುದ್ದೀನ್‌ ಹಕ್ಕಾನಿ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿದ. ಈ ವೇಳೆ ಮಾತನಾಡಿದ ಹಕ್ಕಾನಿ, ‘ಆತ್ಮಾಹುತಿ ದಾಳಿಕೋರರು ಹುತಾತ್ಮರು’ ಎಂದು ಸಂಬೋಧಿಸಿದ. ಅಲ್ಲದೆ ಅವರು ಇಸ್ಲಾಂ(Islam) ಮತ್ತು ದೇಶದ ನಿಜವಾದ ಹೀರೋಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ.

‘ಕೊನೆಗೆ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೆ ಸುಮಾರು 8500 ರು., ಬಟ್ಟೆಬರೆ ನೀಡಲಾಯಿತು. ಜತೆಗೆ ಎಲ್ಲರಿಗೂ ಒಂದು ನಿವೇಶನ ನೀಡುವುದಾಗಿ ಘೋಷಣೆ ಸಚಿವರು ಮಾಡಿದರು’ ಎಂದು ಗೃಹ ಸಚಿವಾಲಯದ ವಕ್ತಾರ ಸಯೀದ್‌ ಖಾಸ್ಟಿಟ್ವೀಟ್‌ ಮಾಡಿದ್ದಾನೆ. ಆದರೆ ಎಷ್ಟುಉಗ್ರರ ಕುಟುಂಬಗಳಿಗೆ ಈ ಸಹಾಯ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ತಾವು ಸಹ ಉತ್ತಮ ಮತ್ತು ಜವಾಬ್ದಾರಿಯುತ ಆಡಳಿತಗಾರರು ಎಂದು ವಿಶ್ವ ಸಮುದಾಯದ ಎದುರು ಗುರುತಿಸಿಕೊಳ್ಳಲು ತಾಲಿಬಾನಿಗಳು ಯತ್ನಿಸುತ್ತಿದ್ದಾರೆ. ಜತೆಗೆ ವಿವಿಧ ರಾಷ್ಟ್ರಗಳ ಜತೆ ರಾಜತಾಂತ್ರಿಕ ಒಪ್ಪಂದಗಳಿಗಾಗಿ ತಾಲಿಬಾನ್‌ನ ಒಂದು ಗುಂಪು ಯತ್ನ ನಡೆಸುತ್ತಿದೆ. ಇದರ ನಡುವೆಯೇ ಆತ್ಮಾಹುತಿ ದಾಳಿಕೋರರನ್ನು ಹುತಾತ್ಮರು ಎಂದು ತಾಲಿಬಾನ್‌ ಘೋಷಿಸಿದ್ದು, ಅದು ಯಾವತ್ತೂ ಬದಲಾಗುವುದಿಲ್ಲ ಎಂಬುದನ್ನು ಸಾಬೀತು ಮಾಡಿದೆ.