* ಸೋವಿಯತ್ ಯುದ್ಧದಲ್ಲಿ ಹೋರಾಡಿದ್ದ, ಪಂಜಶೀರ್‌ನ ಸಿಂಹ ಎಂದು ಖ್ಯಾತನಾಗಿದ್ದ ಆಫ್ಘನ್ ನಾಯಕ ಅಹ್ಮದ್ ಶಾ* 20ನೇ ಜಯಂತಿಯ ವವೇಳೆ ಅಹ್ಮದ್ ಶಾ ಸಮಾಧಿ ಧ್ವಂಸಗೊಳಿಸಿದ ತಾಲಿಬಾನ್‌ಗಳು
ಕಾಬೂಲ್(ಸೆ.11): ಸೋವಿಯತ್ ಯುದ್ಧದಲ್ಲಿ ಹೋರಾಡಿದ್ದ, ಪಂಜಶೀರ್‌ನ ಸಿಂಹ ಎಂದು ಖ್ಯಾತನಾಗಿದ್ದ ಆಫ್ಘನ್ ನಾಯಕ ಅಹ್ಮದ್ ಶಾ ಮಸೂದ್‌ನ ಸಮಾಧಿಯನ್ನು ಆತನ 20ನೇ ಜಯಂತಿಯ ಸಮಯದಲ್ಲಿ ತಾಲಿಬಾನ್‌ಗಳು ಒಡೆದುಹಾಕಿದ್ದಾರೆ. ಇವರ ಪುತ್ರ ಈಗ ಪಂಜಶೀರ್ ಸೈನ್ಯ ಮುನ್ನಡೆಸುತ್ತಿದ್ದು, ಈ ಕಾರಣಕ್ಕೇ ತಾಲಿಬಾನ್ ಈ ಕೃತ್ಯ ನಡೆಸಿದೆ ಎನ್ನಲಾಗಿದೆ.
ತಾಲಿಬಾನ್ ಉಗ್ರಗಾಮಿಗಳು ಸಮಾಧಿಯನ್ನು ಒಡೆದುಹಾಕುತ್ತಿರುವ ಫೋಟೋಗಳನ್ನು ಸ್ಥಳೀಯ ಮಾಧ್ಯಮವೊಂದು ಪೋಸ್ಟ್ ಮಾಡಿದೆ. ಪಂಜಶೀರ್ ವಶಪಡಿಸಿಕೊಂಡ ನಂತರ ತಾಲಿಬಾನ್ ಈ ಕೃತ್ಯ ಎಸಗಿದೆ. ಸೋವಿಯತ್ ಯುದ್ಧದ ಸಮಯದಲ್ಲಿ ಹಾಗೂ 1990ರ ದಶಕದಲ್ಲಿ ಅಷ್ಘಾನಿಸ್ತಾನವನ್ನು ರಕ್ಷಿಸಲು ಪಂಜಶೀರ್‌ನ ಅಹ್ಮದ್ ಷಾ ಮಸೂದ್ ಹೋರಾಡಿದ್ದರು. ಹೀಗಾಗಿ ಅಷ್ಘಾನಿಸ್ತಾನದ ಜನರಲ್ಲಿ ಅವರ ಬಗ್ಗೆ ಗೌರವ ಭಾವನೆ ಮೂಡಿತ್ತು. ತಾಲಿಬಾನಿಗಳು ಅವರ ಸಮಾಧಿಯನ್ನು ಒಡೆದು ಹಾಕಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.
ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಸಹೋದರನ ಹತ್ಯೆ!
ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಮತ್ತೊಂದೆಡೆ ಕ್ರೌರ್ಯ ಮುಂದುವರಿಸಿದ್ದಾರೆ. ಪಂಜಶೀರ್ ಸಂಪೂರ್ಣ ವಶಪಡಿಸಲು ತಾಲಿಬಾನ್ ಉಗ್ರರು ಭಾರಿ ಶಸ್ತ್ರಾಸ್ತ್ರ ಜೊತೆ ದಾಳಿ ಮಾಡಿದ್ದಾರೆ. ಸೆಪ್ಟೆಂಬರ್ 9ರ ರಾತ್ರಿ ಪಂಜಶೀರ್ ಮೇಲೆ ದಾಳಿ ಮಾಡಿದ ತಾಲಿಬಾನ್ ಉಗ್ರರು, ಆಫ್ಘಾನಿಸ್ತಾನ ಮಾಜಿ ಅಧ್ಯಕ್ಷ, ತಾಲಿಬಾನ್ ವಿರುದ್ದ ಯುದ್ಧ ಸಾರಿದ ಅಮರುಲ್ಲಾ ಸಲೇಹ್ ಸಹೋದರನ ಸೆರೆ ಹಿಡಿದು ಹತ್ಯೆ ಮಾಡಿದ್ದಾರೆ ಎಂದು ರಾಯ್‌ಟರ್ಸ್ ವರದಿ ಮಾಡಿದೆ.
