ಆಫ್ಘಾನಿಸ್ತಾನದ ಶೇ.85 ಭಾಗ ತಾಲಿಬಾನ್ ವಶಕ್ಕೆ: ಅಮೆರಿಕ ಪಡೆ ವಾಪಾಸ್, ಉಗ್ರರ ಅಟ್ಟಹಾಸ!
* ಅಮೆರಿಕ ಪಡೆ ವಾಪಸ್ ಬಳಿಕ ಉಗ್ರರ ಅಟ್ಟಹಾಸ
* ಆಷ್ಘಾನಿಸ್ತಾನದ ಶೇ.85 ಭಾಗ ತಾಲಿಬಾನ್ ವಶಕ್ಕೆ!
* ಶಾಂತಿಯತ್ತ ಸಾಗುತ್ತಿದ್ದ ದೇಶದಲ್ಲಿ ಮತ್ತೆ ಆತಂಕ
ಮಾಸ್ಕೋ(ಜು.10): ದಶಕಗಳಿಂದ ಆಷ್ಘಾನಿಸ್ತಾನವನ್ನು ಆಂತರಿಕ ಸಂಘರ್ಷದ ಬೀಡಾಗಿ ಮಾಡಿದ್ದ ತಾಲಿಬಾನ್ ಉಗ್ರರು, ಇದೀಗ ಮತ್ತೆ ದೇಶದ ಶೇ.85ರಷ್ಟುಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು, ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳ ನೆರವಿನಿಂದ ಶಾಂತಿಯತ್ತ ಸಾಗುತ್ತಿದ್ದ ದೇಶದಲ್ಲಿ ಮತ್ತೆ ತಾಲಿಬಾನ್ ಆಡಳಿತದ ದೊಡ್ಡ ಆತಂಕ ಹುಟ್ಟುಹಾಕಿದೆ.
ಈ ಕುರಿತು ರಷ್ಯಾದಲ್ಲಿ ಹೇಳಿಕೆ ನೀಡಿರುವ ತಾಲಿಬಾನ್ ಸಂಘಟನೆಯ ವಕ್ತಾರ ಮಲಾವಿ ಶಹಾಬುದ್ದೀನ್ ದೆಲಾವರ್ ‘ಇದೀಗ ದೇಶದ ಶೇ.85ರಷ್ಟುಭಾಗ ನಮ್ಮ ವಶಕ್ಕೆ ಬಂದಿದೆ. ಆದರೆ ನಾವು ಯಾವುದೇ ರಾಜ್ಯದ ಯಾವುದೇ ರಾಜಧಾನಿ ಮೇಲೆ ದಾಳಿ ಮಾಡುವ ಅಥವಾ ಅವುಗಳನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಯತ್ನ ಮಾಡುವುದಿಲ್ಲ. ಜೊತೆಗೆ ಅಮೆರಿಕ ಸೇರಿದಂತೆ ಯಾವುದೇ ಪಡೆಗಳಿಗೂ ನಮ್ಮ ನೆಲವನ್ನು ನೆರೆಯ ಯಾವುದೇ ದೇಶದ ವಿರುದ್ಧ ಬಳಸಿಕೊಳ್ಳಲೂ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ತಾಲಿಬಾನ್‌ಗೆ ಹೆದರಿ ಆಫ್ಘನ್ ಯೋಧರು ನೆರೆ ದೇಶಕ್ಕೆ ಪರಾರಿ!
ಜೊತೆಗೆ ‘ಆಡಳಿತ ಯಂತ್ರ, ಆಸ್ಪತ್ರೆ ಎಲ್ಲವೂ ಹಿಂದಿನಂತೆಯೇ ಕಾರ್ಯನಿರ್ವಹಿಸಲಿದೆ. ನಮಗೆ ಸಂಘರ್ಷ ಬೇಕಿಲ್ಲ. ಆಷ್ಘಾನಿಸ್ತಾನ ಸರ್ಕಾರದ ಜೊತೆಗೆ ಮಾತುಕತೆ ಮೂಲಕ ರಾಜಕೀಯ ಒಪ್ಪಂದಕ್ಕೆ ಬರಲು ನಾವು ಸಿದ್ಧರಿದ್ದೇವೆ. ಜೊತೆಗೆ ಬಂಧನದಲ್ಲಿರುವ ಇನ್ನಷ್ಟುಸಂಖ್ಯೆಯ ನಮ್ಮ ಜೊತೆಗಾರರನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ’ ಎಂದು ದೆಲಾವರ್ ಹೇಳಿದ್ದಾರೆ.
ವಾರದ ಹಿಂದೆ ಕೂಡಾ ತಾಲಿಬಾನ್ ಉಗ್ರರು, ದೇಶದ 421 ಜಿಲ್ಲೆಗಳ ಪೈಕಿ ಮೂರನೇ ಎರಡು ಭಾಗ ನಮ್ಮ ವಶಕ್ಕೆ ಬಂದಿದೆ ಎಂದಿದ್ದರು. ಆದರೆ ಈ ಎರಡೂ ಹೇಳಿಕೆ ಕುರಿತು ಇದುವರೆಗೆ ಆಷ್ಘಾನಿಸ್ತಾನ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಚಿಗುರಿದ ಉಗ್ರರು:
2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯಿಂದ ಕ್ರುದ್ಧವಾಗಿದ್ದ ಅಮೆರಿಕ, ಆಷ್ಘಾನಿಸ್ತಾನದಲ್ಲಿ ತನ್ನ ಪಡೆ ನಿಯೋಜಿಸುವ ಮೂಲಕ ಉಗ್ರರ ಮಟ್ಟಕ್ಕೆ ಯತ್ನಿಸಿತ್ತು. ಸುಮಾರು 20 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಇತ್ತೀಚೆಗೆ ಅಮೆರಿಕ ತನ್ನ ಸೇನೆಯನ್ನು ಆಷ್ಘಾನಿಸ್ತಾನದಿಂದ ಪೂರ್ಣವಾಗಿ ಹಿಂದಕ್ಕೆ ಕರೆಸಿಕೊಂಡಿದೆ. ಅದರ ಬೆನ್ನಲ್ಲೇ ಮತ್ತೆ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಆರಂಭಿಸಿದೆ.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಲವರ್ಧನೆ!
ಯೋಧರೇ ಪರಾರಿ!
ಉಗ್ರರು ಹಂತಹಂತವಾಗಿ ಒಂದೊಂದೇ ಪ್ರಾಂತ್ಯವನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಪರಿಣಾಮ, ಉಗ್ರರಷ್ಟುಕೂಡಾ ಶಸ್ತ್ರ ಸಜ್ಜಿತವಲ್ಲದ ಆಷ್ಘಾನಿಸ್ತಾನದ ಯೋಧರು ಪ್ರತಿರೋಧ ತೋರದೆ ತಮ್ಮ ವಶದಲ್ಲಿದ್ದ ಪ್ರದೇಶಗಳನ್ನು ಉಗ್ರರಿಗೆ ಬಿಟ್ಟುಕೊಡುತ್ತಿದ್ದಾರೆ. ಜೊತೆಗೆ ಕೆಲವು ಗಡಿ ಭಾಗದ ಸೈನಿಕರು ನೆರೆಯ ತಜಕಿಸ್ತಾನಕ್ಕೆ ಪಲಾಯನಗೈದಿದ್ದಾರೆ.