* ಆಫ್ಘನ್‌ನಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೂ ಸೈನಿಕ ಸ್ಥಾನ* ವೈರಿ ಐಸಿಸ್‌ನ ಸಂಭವನೀಯ ದಾಳಿ ಎದುರಿಸಲು ಸಿದ್ಧತೆ* ತಾಲಿಬಾನ್‌ ಸೇನೆಗೆ ಆತ್ಮಾಹುತಿ ಬಾಂಬರ್‌ ನೇಮಕ!

ಕಾಬೂಲ್‌(ಜ.07): ತನ್ನ ಸೈನಿಕ ಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ವೈರಿ ಐಸಿಸ್‌ ಸಂಘಟನೆಯಿಂದ ಇರುವ ದಾಳಿಯ ಸಾಧ್ಯತೆಯನ್ನು ತಡೆಗಟ್ಟಲು ಆತ್ಮಾಹುತಿ ಬಾಂಬರ್‌ಗಳನ್ನು ಅಧಿಕೃತವಾಗಿ ಸೈನ್ಯಕ್ಕೆ ಸೇರಿಸಿಕೊಳ್ಳಲು ಅಷ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಆರಂಭಿಸಿದೆ. ಅಮೆರಿಕ ಮತ್ತು ಆಫ್ಘನ್‌ ಸೇನೆಯೊಂದಿಗೆ ನಡೆದ 20 ವರ್ಷಗಳ ಹೋರಾಟದಲ್ಲಿ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್‌ ಬಳಸಿಕೊಂಡಿತ್ತು.

ಈಗ ತಾಲಿಬಾನ್‌ ಮುಖ್ಯ ಗುರಿ ಇರುವುದು ದೇಶದಲ್ಲಿರುವ ಐಸಿಸ್‌ ಉಗ್ರರನ್ನು ಹೊರದಬ್ಬುವುದು. ತಾಲಿಬಾನ್‌ ಅಷ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ 5 ಪ್ರಮುಖ ದಾಳಿಗಳಿಗೆ ಐಸಿಸ್‌ ಕಾರಣವಾಗಿತ್ತು. ಈ ವಿಷಯವನ್ನು ಸ್ವತಃ ತಾಲಿಬಾನ್‌ ಉಪ ವಕ್ತಾರ ಬಿಲಾಲ್‌ ಕರೀಮಿ ಸ್ಪಷ್ಟಪಡಿಸಿದ್ದಾನೆ. ‘ಈ ವಿಶೇಷ ದಳವನ್ನು ಅತ್ಯಾಧುನಿಕ ಮತ್ತು ವಿಶೇಷ ಕಾರ್ಯಾಚರಣೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಇವರಿಗಾಗಿ ವಿಶೇಷ ತರಬೇತಿ ನೀಡಲಾಗುತ್ತದೆ. ಈ ಗುಂಪು ದೇಶದೊಳಗೆ ಮತ್ತು ಗಡಿಯಲ್ಲಿ ಸೈನ್ಯದ ಕಾರ್ಯತಂತ್ರದ ಭಾಗವಾಗಿರಲಿದ್ದಾರೆ’ ಎಂದು ಕರೀಮಿ ಹೇಳಿದ್ದಾನೆ.

ಸುಮಾರು 1.5 ಲಕ್ಷ ಜನರಿಗೆ ಸೇನೆಗೆ ಸೇರಲು ತಾಲಿಬಾನ್‌ ಆಹ್ವಾನ ನೀಡಿದೆ ಎಂದು ಅಲ್‌ ಜಜೀರಾ ಕಳೆದ ನವೆಂಬರ್‌ನಲ್ಲಿ ವರದಿ ಮಾಡಿತ್ತು. ತಾಲಿಬಾನ್‌ ವಿರೋಧಿಗಳ ಹುಡುಕಾಟದ ನಂತರ ಈ ವ್ಯವಸ್ಥೆಯನ್ನು ತಾಲಿಬಾನ್‌ ಜಾರಿಗೊಳಿಸಿದೆ. ಜೊತೆಗೆ ಐಸಿಸ್‌ ನುಸುಳುಕೋರರನ್ನು ಪತ್ತೆ ಹಚ್ಚುವ ಕೆಲಸ ಆರಂಭಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.