Asianet Suvarna News Asianet Suvarna News

ಹೋಟೆಲ್‌ ಕೋಣೆಯಲ್ಲಿ ಮೃತಪಟ್ಟ ತೈವಾನ್‌ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿ

ಚೀನಾ - ತೈವಾನ್‌ ನಡುವೆ ಯುದ್ದ ಆರಂಭವಾಗಬಹುದು ಎಂಬ ಸೂಚನೆಗಳ ಬೆನ್ನಲ್ಲೇ ದ್ವೀಪ ರಾಷ್ಟ್ರದಲ್ಲಿ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಈ ಸಾವಿನ ಬಗ್ಗೆ ಅಧಿಕಾರಿಗಳು ಇನ್ನೂ ಕಾರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ. 

taiwan defence top official death amid heightened tensions with china ash
Author
Bangalore, First Published Aug 6, 2022, 1:01 PM IST

ಅಮೆರಿಕದ ಹೌಸ್‌ ಸ್ಪೀಕರ್‌ ಏಷ್ಯಾದ ತೈವಾನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಚೀನಾ - ತೈವಾನ್‌ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ದ್ವೀಪ ರಾಷ್ಟ್ರದ ಸುತ್ತಮುತ್ತ ಚೀನಾ ಯುದ್ಧಾಭ್ಯಾಸ ನಡೆಸುತ್ತಿದ್ದು, ಜಪಾನ್‌ ಪ್ರದೇಶದಲ್ಲೂ ಮಿಸೈಲ್‌ಗಳನ್ನು ಹಾರಿಸಿದ ವರದಿಯನ್ನು ನೀವು ನೋಡಿರಬಹುದು. ಈ ಮಧ್ಯೆ, ತೈವಾನ್‌ನಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ತೈವಾನ್‌ ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿ ಶನಿವಾರ, ಆಗಸ್ಟ್‌ 6 ರ ಬೆಳಗ್ಗೆ ಹೋಟೆಲ್‌ ಕೋಣೆಯೊಂದರಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ತೈವಾನ್‌ ರಕ್ಷಣಾ ಸಚಿವಾಲಯದ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಉಪ ಮುಖ್ಯಸ್ಥರು ಶನಿವಾರ ಬೆಳಗ್ಗೆ ಹೋಟೆಲ್‌ ರೂಮ್‌ವೊಂದರಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಸುದ್ದಿ ಸಂಸ್ಥೆ ಮಾಹಿತಿ ನೀಡಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ. ಮಿಲಿಟರಿ ನಡೆಸುತ್ತಿರುವ ತೈವಾನ್‌ನ ರಾಷ್ಟ್ರೀಯ ಚುಂಗ್- ಶಾನ್‌ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಡೆಪ್ಯುಟಿ ಮುಖ್ಯಸ್ಥರಾದ ಔ ಯಾಂಗ್ ಲಿ -ಹ್ಸಿಂಗ್ ದಕ್ಷಿಣ ತೈವಾನ್‌ನಲ್ಲಿ ಹೋಟೆಲ್‌ನ ಕೊಠಡಿಯೊಂದರಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಇನ್ನು, ಅಧಿಕಾರಿಗಳು ಈ ಸಾವಿಗೆ ಕಾರಣವೇನೆಂದು ಪತ್ತೆ ಹಚ್ಚುತ್ತಿರುವುದಾಗಿಯೂ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಇದನ್ನು ಓದಿ: ಚೀನಾದ ಪತ್ರಕರ್ತನನ್ನು ಮದುವೆಯಾಗಿದ್ದಾರಾ ಅಮೆರಿಕದ ನ್ಯಾನ್ಸಿ ಪೆಲೋಸಿ..?

ಪಿಂಗ್‌ಟಂಗ್ ಕೌಂಟಿಯ ಹೆಂಗ್‌ಚುನ್‌ನಲ್ಲಿರುವ ಹೋಟೆಲ್‌ನಲ್ಲಿ ಓಯಾಂಗ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತೈವಾನ್‌ನ ರಾಷ್ಟ್ರೀಯ ಚುಂಗ್- ಶಾನ್‌ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ದೃಢಪಡಿಸಿದೆ. ಇನ್ನು, ಹೃದಯ ತೊಂದರೆಯಿಂದ ಮೃತಪಟ್ಟಿದ್ದಾರೆಂದು ಕೆಲ ವರದಿಗಳು ಹೇಳುತ್ತಿವೆ. "ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಮತ್ತು ಆಂಜಿನಾ ಪೆಕ್ಟೋರಿಸ್ ಸಾವಿಗೆ ಕಾರಣವೆಂದು ವಿಧಿವಿಜ್ಞಾನ ಪರೀಕ್ಷೆಯು ಕಂಡುಕೊಂಡಿದೆ" ಎಂದು ಚುಂಗ್ ಶಾನ್‌ ಸಂಸ್ಥೆ ಹೇಳಿದೆ.

ಔ ಯಾಂಗ್ ಲಿ -ಹ್ಸಿಂಗ್ ಅವರು ಈ ವರ್ಷವಷ್ಟೇ ಅಧಿಕಾರ ವಹಿಸಿಕೊಂಡಿದ್ದರು ಹಾಗೂ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದೆ. ಅಲ್ಲದೆ, ತೈವಾನ್‌ನ ಪಿಂಗ್ಟ್‌ಟುಂಗ್‌ಗೆ ಅವರು ತಮ್ಮ ಕಾರ್ಯನಿಮಿತ್ತ ಭೇಟಿ ನೀಡಿದ್ದರು ಎಂದೂ ತೈವಾನ್‌ ಮಾಧ್ಯಮಗಳು ವರದಿ ಮಾಡಿವೆ. 

ಇದನ್ನೂ ಓದಿ: ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ ಬಳಿ ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ

ಬೀಜಿಂಗ್ ಸಮರಾಭ್ಯಾಸದಲ್ಲಿ ತೈವಾನ್‌ನ ಮುಖ್ಯ ದ್ವೀಪದ ಮೇಲೆ ನೇರವಾಗಿ ಹಲವಾರು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಶುಕ್ರವಾರ ತಿಳಿಸಿದೆ. ಆದರೆ, ಗುಪ್ತಚರ ಹೇಳಿಕೆಯನ್ನು ಉಲ್ಲೇಖಿಸಿ ತೈಪೆ ವಿಮಾನ ಮಾರ್ಗಗಳನ್ನು ಖಚಿತಪಡಿಸಲು ಅಥವಾ ನಿರಾಕರಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಚೀನಾದಿಂದ ಹೆಚ್ಚುತ್ತಿರುವ ಮಿಲಿಟರಿ ಬೆದರಿಕೆಯ ಹಿನ್ನೆಲೆಯಲ್ಲಿ ದ್ವೀಪದ ಸರ್ಕಾರವು ತನ್ನದೇ ಆದ ಕ್ಷಿಪಣಿ ಉತ್ಪಾದನೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದೆ. ದ್ವೀಪ ರಾಷ್ಟ್ರವು ಕೆಲ ವರ್ಷಗಳಿಂದ ಚೀನಾದ ಹೆಚ್ಚಾದ ಮಿಲಿಟರಿ ಆತಂಕದ ನಡುವೆ ತನ್ನ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತಿದೆ.  ಈ ಹಿನ್ನೆಲೆ, ಮಿಲಿಟರಿ-ಮಾಲೀಕತ್ವದ ಸಂಸ್ಥೆಯು ತನ್ನ ವಾರ್ಷಿಕ ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವನ್ನು ಈ ವರ್ಷ 500ರ ಸನಿಹಕ್ಕೆ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 

Follow Us:
Download App:
  • android
  • ios