ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿರುವುದು ವಿಶ್ವದಲ್ಲೇ ಚರ್ಚೆಗೀಡಾಗಿದೆ. ಮತ್ತೊಂದು ಯುದ್ಧ ಆರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಊಹಾಪೋಹಗಳಿಗೆ ಪುಷ್ಠಿ ನೀಡುವಂತೆ ಚೀನಾ ತೈವಾನ್‌ ಬಳಿಯ ಸಮುದ್ರದಲ್ಲಿ ಮಿಲಿಟರಿ ಅಭ್ಯಾಸ ನಡೆಸುತ್ತಿದೆ. 

ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಚೀನಾ ಅಮೆರಿಕದ ವಿರುದ್ಧ ಕೆಂಡ ಕಾರುತ್ತಿದೆ. ಅಲ್ಲದೆ, ಅವರು ತೈವಾನ್‌ನಿಂದ ಅಮೆರಿಕಕ್ಕೆ ಹೋಗುತ್ತಿದ್ದಂತೆ ಕಮ್ಯೂನಿಸ್ಟ್‌ ರಾಷ್ಟ್ರವಾದ ಚೀನಾ ಇತ್ತ ತೈವಾನ್‌ ಅನ್ನು ಸುತ್ತುವರಿದು ಗುರುವಾರ ಶಸ್ತ್ರಾಭ್ಯಾಸವನ್ನು ಆರಂಭಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಬುಧವಾರ ಪೆಲೋಸಿ ತೈವಾನ್‌ನಿಂದ ತೆರಳಿದ ಬೆನ್ನಲ್ಲೇ ಈ ಮಿಲಿಟರಿ ಅಭ್ಯಾಸ ನಡೆಯುತ್ತಿದೆ. ತೈವಾನ್‌ಗೆ ಪೆಲೋಸಿ ಭೇಟಿ ನಿಡಿದ್ದಕ್ಕೆ ಅಮೆರಿಕಕ್ಕೆ ಬೆದರಿಕೆ ಹಾಕಿದ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಸರ್ಕಾರ, ತೈವಾನ್‌ ನಮ್ಮ ಭೂಮಿಯ ಪ್ರದೇಶ ಎಂದು ಕಿಡಿ ಕಾರಿತ್ತು.

ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಉನ್ನತ ಮಟ್ಟದ ಅಮೆರಿಕ ಅಧಿಕಾರಿ ಎನಿಸಿಕೊಂಡಿದ್ದಾರೆ ಪೆಲೋಸಿ. ಅಲ್ಲದೆ, ಪ್ರಜಾಸತ್ತಾತ್ಮಕ ಮಿತ್ರ ರಾಷ್ಟ್ರವನ್ನು ನಾವು ಬಿಟ್ಟು ಕೊಡುವುದಿಲ್ಲ ಎಂಬುದು ಈ ಭೇಟಿಯ ಮೂಕ ಸ್ಪಷ್ಟವಾಗಿದೆ ಎಂದೂ ಪೆಲೋಸಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬೀಜಿಂಗ್ ಆಡಳಿತ ತಕ್ಕ ಶಿಕ್ಷೆ ನೀಡುವುದಾಗಿ ಶಪಥ ಮಾಡಿತ್ತು. ಅದಾದ ನಂತರ ತೈವಾನ್‌ ಸುತ್ತಮುತ್ತಲ ಸಮುದ್ರ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿತು. ಈ ಪ್ರದೇಶ ವಿಶ್ವದ ಅತ್ಯಂತ ಜನನಿಬಿಡ ಜಲಮಾರ್ಗಗಳಲ್ಲಿ ಒಂದಾಗಿದೆ ಎಂಬುದು ಗಮನಾರ್ಹ. 

ಇದನ್ನು ಓದಿ: ಚೀನಾಗೆ ಸೆಡ್ಡು ನೀಡಲು ಭಾರತ - ಅಮೆರಿಕದಿಂದ ಮತ್ತೆ ಜಂಟಿ ಸಮರಾಭ್ಯಾಸ

ಚೀನಾದ ಈ ಮಿಲಿಟರಿ ಅಭ್ಯಾಸದ ವೇಳೆ ಲೈವ್‌ ಫೈರಿಂಗ್ ಅನ್ನು ಸಹ ನಡೆಸಲಾಗಿದೆ ಎಂದೂ ಚೀನಾದ ಮಾಧ್ಯಮ ವರದಿ ಮಾಡಿದೆ. "ಈ ಯುದ್ಧ ಅಭ್ಯಾಸಕ್ಕಾಗಿ ತೈವಾನ್‌ ದ್ವೀಪದ ಸುತ್ತಲಿನ 6 ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಈ ಅವಧಿಯಲ್ಲಿ, ಸಂಬಂಧಿತ ಹಡಗುಗಳು ಮತ್ತು ವಿಮಾನಗಳು ಆ ಜಲ ಮತ್ತು ವಾಯುಪ್ರದೇಶಗಳನ್ನು ಪ್ರವೇಶಿಸಬಾರದು" ಎಂದು ಚೀನಾ ಸರ್ಕಾರದ ಪ್ರಾಯೋಜಿತ CCTV ವರದಿ ಮಾಡಿದೆ. ಈ ಯುದ್ಧ ಅಭ್ಯಾಸಗಳು ತೈವಾನ್‌ನ ಸುತ್ತಲಿನ ಬಹು ವಲಯಗಳಲ್ಲಿ ನಡೆಯುತ್ತಿದೆ. ಅಲ್ಲದೆ, ತೈವಾನ್‌ ಗಡಿ ತೀರದಿಂದ ಕೇವಲ 20 ಕಿಲೋಮೀಟರ್ (12 ಮೈಲುಗಳು) ಒಳಗೆ ಸಹ ಈ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದು, ಭಾನುವಾರ ಮಧ್ಯಾಹ್ನ ಈ ಶಸ್ತ್ರಾಭ್ಯಾಸ ಮುಕ್ತಾಯಗೊಳ್ಳುತ್ತದೆ ಎಂದು ಹೇಳಲಾಗಿದೆ. 

ಬೀಜಿಂಗ್‌ನ ಮಿಲಿಟರಿಯು ಈ ಪ್ರದೇಶದಲ್ಲಿ "ದೀರ್ಘ-ಶ್ರೇಣಿಯ ಲೈವ್ ಮದ್ದುಗುಂಡುಗಳ ಗುಂಡಿನ ದಾಳಿ" ಎಂದು ಘೋಷಿಸಿದೆ. ಈ ವೇಳೆ ಚೀನಾ ಸೇನೆಯು ತೈವಾನ್ ಜಲಸಂಧಿಗೆ ಸ್ಪೋಟಕಗಳನ್ನು ಹಾರಿಸಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮದ ಪತ್ರಕರ್ತರು ಹೇಳಿದ್ದಾರೆ. ಹಲವಾರು ಸಣ್ಣ ಸ್ಪೋಟಕಗಳನ್ನು ಹತ್ತಿರದ ಮಿಲಿಟರಿ ಸ್ಥಾಪನೆಗಳ ಸಾಮೀಪ್ಯದಿಂದ ಆಕಾಶಕ್ಕೆ ಹಾರಿದೆ ಎಂದೂ ವರದಿಯಾಗಿದೆ. 

ಇನ್ನು, ಚೀನಾದ ಈ ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತೈವಾನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. "ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಯುದ್ಧವನ್ನು ಬಯಸದಿದ್ದರೂ, ಯುದ್ಧಕ್ಕೆ ತಯಾರಿ ಮಾಡುವ ತತ್ವವನ್ನು ಎತ್ತಿಹಿಡಿಯುತ್ತದೆ ಮತ್ತು ಸಂಘರ್ಷವನ್ನು ಹೆಚ್ಚಿಸುವುದಿಲ್ಲ ಹಾಗೂ ವಿವಾದಗಳನ್ನು ಉಂಟುಮಾಡುವುದಿಲ್ಲ" ಎಂದು ತೈವಾನ್‌ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಅಭ್ಯಾಸಗಳು "ಅಭೂತಪೂರ್ವ" ಮತ್ತು ಕ್ಷಿಪಣಿಗಳು ಮೊದಲ ಬಾರಿಗೆ ತೈವಾನ್‌ನ ಮೇಲೆ ಹಾರುತ್ತವೆ ಎಂದು ಬೀಜಿಂಗ್‌ನ ರಾಜ್ಯ-ಚಾಲಿತ ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಹೇಳಿದೆ. ತೈವಾನ್ ಜಲಸಂಧಿಯಾದ್ಯಂತ "ಪಿಎಲ್‌ಎ ಅಥವಾ ಪೀಪಲ್ಸ್‌ ಲಿಬರೇಷನ್‌ ಆರ್ಮಿ (People’s Liberation Army) ಲೈವ್ ದೀರ್ಘ-ಶ್ರೇಣಿಯ ಫಿರಂಗಿಗಳನ್ನು ಪ್ರಾರಂಭಿಸಿರುವುದು ಇದೇ ಮೊದಲು" ಎಂದು ಚೀನಾದ ಪತ್ರಿಕೆ ಹೇಳಿದೆ.

ಸೇನಾ ಕಾರ್ಯಾಚರಣೆಯ ಸೂಚನೆ, 21 ಚೀನಾ ಯುದ್ಧವಿಮಾನ ತೈವಾನ್‌ ಪ್ರವೇಶ!

ಇನ್ನು, "ತೈವಾನ್ ಜಲಸಂಧಿಯಲ್ಲಿ ಆಕ್ರಮಣಕಾರಿ ಮಿಲಿಟರಿ ಚಟುವಟಿಕೆಗಾಗಿ ಭೇಟಿಯನ್ನು ನೆಪವಾಗಿ ಬಳಸಿಕೊಳ್ಳಲು ಯಾವುದೇ ಸಮರ್ಥನೆ ಇಲ್ಲ" ಎಂದು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಗುಂಪು ಹೇಳಿಕೆಯೊಂದರಲ್ಲಿ ಈ ಮಿಲಿಟರಿ ಅಭ್ಯಾಸಗಳನ್ನು ಖಂಡಿಸಿದೆ.