ನವದೆಹಲಿ(ಸೆ.05) ತೈಪೇಯಿ: ಭಾರತ-ಚೀನಾ ನಡುವೆ ಯುದ್ಧಸದೃಶ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಚೀನಾದ ಸುಖೋಯ್‌-35 ಯುದ್ಧವಿಮಾನವನ್ನು ತೈವಾನ್‌ನ ವಾಯುಪಡೆ ಹೊಡೆದುರುಳಿಸಿದೆ ಎಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. ಇದನ್ನು ಸ್ವತಃ ತೈವಾನ್‌ ಅಲ್ಲಗಳೆದಿದ್ದು, ಜನರಲ್ಲಿ ಗೊಂದಲ ಮೂಡಿಸಲು ಹರಡುವ ಇಂತಹ ಸುಳ್ಳು ಸುದ್ದಿಗಳನ್ನು ಖಂಡಿಸುವುದಾಗಿ ಹೇಳಿದೆ. ಈ ಕುರಿತ ವರದಿಗಳು ಸುಳ್ಳು ಎಂದು ಚೀನಾ ಕೂಡ ಸ್ಪಷ್ಟನೆ ನೀಡಿದೆ.

ತೈವಾನ್‌ ಮತ್ತು ಭಾರತದ ಸೋಷಿಯಲ್‌ ಮೀಡಿಯಾಗಳಲ್ಲಿ ಶುಕ್ರವಾರ ಚೀನಾದ ಸುಖೋಯ್‌ ಯುದ್ಧವಿಮಾನವನ್ನು ತೈವಾನ್‌ನ ವಾಯುಪಡೆ ಹೊಡೆದುರುಳಿಸಿದೆ ಎಂದು ಸಾಕಷ್ಟುಫೋಟೋ ಹಾಗೂ ವಿಡಿಯೋಗಳು ಪೋಸ್ಟ್‌ ಆಗಿವೆ. ತೈವಾನ್‌ನ ದಿ ಜ್ಯೂಯಿಷ್‌ ಪ್ರೆಸ್‌ ಕೂಡ ದಕ್ಷಿಣ ಚೀನಾದ ಸ್ವಾಯತ್ತ ಪ್ರದೇಶವಾಗಿರುವ ಹಾಗೂ ವಿಯೆಟ್ನಾಂನ ಗಡಿಯಲ್ಲಿರುವ ಗಾಂಗ್ಸಿ ಎಂಬ ಪ್ರದೇಶದಲ್ಲಿ ಚೀನಾದ ಯುದ್ಧವಿಮಾನ ಪತನಗೊಂಡಿದೆ ಎಂದು ವರದಿ ಮಾಡಿದೆ. ಈ ಪ್ರದೇಶ ವಿಯೆಟ್ನಾಂನ ಗಡಿಯಲ್ಲಿ ಬರುತ್ತದೆ. ದಕ್ಷಿಣ ಚೀನಾ ಸಮುದ್ರದಲ್ಲಿರುವ ‘ತೈವಾನ್‌ ಕೊಲ್ಲಿ’ಯ ತನ್ನ ವಾಯುಸೀಮೆಯೊಳಗೆ ಪ್ರವೇಶಿಸಿದ ಕಾರಣಕ್ಕೆ ತೈವಾನ್‌ನ ವಾಯುಪಡೆಯೇ ಈ ವಿಮಾನವನ್ನು ಹೊಡೆದುರುಳಿಸಿದೆ ಎಂದು ವದಂತಿಗಳು ಹರಡಿದ್ದವು.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ತೈವಾನ್‌ನ ವಾಯುಪಡೆ, ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲವೆಂದೂ, ತಾನು ಚೀನಾದ ಯುದ್ಧವಿಮಾನವನ್ನು ಹೊಡೆದುರುಳಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಕಾಕತಾಳೀಯವೆಂಬಂತೆ ಕಳೆದ ತಿಂಗಳಷ್ಟೇ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ನಲ್ಲಿ ಸೆ.4ರಿಂದ ತೈವಾನ್‌ ಕೊಲ್ಲಿಯಲ್ಲಿ ಚೀನಾ ತನ್ನ ಮಿಲಿಟರಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ವರದಿಯಾಗಿತ್ತು. ಅದನ್ನು ತೈವಾನ್‌ ತೀಕ್ಷ$್ಣವಾಗಿ ವಿರೋಧಿಸಿತ್ತು. ಈಗ ಅದೇ ದಿನ ಚೀನಾದ ಯುದ್ಧವಿಮಾನವು ಧಗಧಗ ಹೊತ್ತಿ ಉರಿದು ಪತನಗೊಳ್ಳುವ ವಿಡಿಯೋ ಹರಿದಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಚೀನಾ ಬಳಿ ಇತ್ತೀಚಿನ ವರ್ಷಗಳಲ್ಲಿ ರಷ್ಯಾದಿಂದ ಖರೀದಿಸಿದ 24 ಸುಖೋಯ್‌-35 ಅತ್ಯಾಧುನಿಕ ಯುದ್ಧವಿಮಾನಗಳಿವೆ. ಈ ವಿಮಾನಗಳು ಭಾರತದ ಬಳಿಯೂ ಇವೆ. ಇನ್ನು, ವಿಮಾನ ಪತನಗೊಂಡಿದೆ ಎನ್ನಲಾದ ಗಾಂಗ್ಸಿ ಪ್ರದೇಶವು ತೈವಾನ್‌ನಿಂದ 1000 ಕಿ.ಮೀ. ದೂರದಲ್ಲಿದ್ದು, ತೈವಾನ್‌ ಬಳಿ ಇಷ್ಟುದೂರ ಹಾರಬಲ್ಲ ಯಾವುದೇ ಕ್ಷಿಪಣಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.