Asianet Suvarna News Asianet Suvarna News

Humanity Exists: ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಎದೆಹಾಲು ನೀಡಿದ ಅಪರಿಚಿತರು

ಮಾರಕ ಕೋವಿಡ್‌ ಜಗತ್ತಿನಾದ್ಯಂತ ತನ್ನ ಹಾವಳಿ ಮುಂದುವರೆಸಿದೆ ಇದುವರೆಗೂ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿಯೂ ಇದರ ಜೊತೆ ಕೆಲವು ಮನ ಮಿಡಿಯುವ ಮಾನವೀಯ ಘಟನೆಗಳು ಬೆಳಕಿಗೆ ಬರುತ್ತಿವೆ. ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡ ಹಸುಗೂಸಿಗೆ ಅಪರಿಚಿತರು ಎದೆಹಾಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Strangers donate breast milk to newborn who lost mother in COVID-19 akb
Author
Bangalore, First Published Dec 2, 2021, 7:49 PM IST
  • Facebook
  • Twitter
  • Whatsapp

ಮಿಸ್ಸೋರಿ(ಡಿ. 2) : ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಅತೀ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ತಾಯಿಯ ಎದೆ ಹಾಲಿಗೆ ಪೂರಕವಾದ ಆಹಾರ ಮತ್ತೊಂದಿಲ್ಲ.  ಆದರೆ ಹಾಲು ಕುಡಿಯುವ ಕೂಸು ಅಮ್ಮನ ಕಳೆದುಕೊಂಡರೆ ಮಾಡುವುದೇನು? ಹೌದು 5 ತಿಂಗಳ ಮಗುವೊಂದು ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡಿದೆ. ಪರಿಣಾಮ ಅಪರಿಚಿತ ತಾಯಂದಿರು ಸೇರಿ ಆ ಮಗುವಿಗೆ ಎದೆ ಹಾಲನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.  ಅಮೆರಿಕಾದ ಮಿಸ್ಸೋರಿ(Missouri)ಯಲ್ಲಿ ಈ ಘಟನೆ ನಡೆದಿದೆ.

ಆರು ಮಕ್ಕಳ ತಾಯಿಯಾಗಿರುವ ಮೆಗನ್‌ ರಿಚರ್ಡ್‌( Megan Richards)ಕಳೆದ ತಿಂಗಳು ಕೋವಿಡ್‌ನಿಂದಾಗಿ ಪ್ರಾಣ ಬಿಟ್ಟಿದ್ದರು. ಇದರಿಂದ ಇವರ 5 ತಿಂಗಳ ಮಗು ಅನಾಥವಾಗಿತ್ತು. ಬದುಕಿದ್ದಾಗ ಮೆಗನ್‌, ತನ್ನ ಮಗುವಿಗೆ ಒಂದು ವರ್ಷ ಆಗುವವರೆಗೆ ಎದೆ ಹಾಲುಣಿಸಬೇಕು ಎಂದು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಮೆಗನ್‌ ಪತಿ ಹಾಗೂ ಸಹೋದರಿ ಸೇರಿ ಎದೆ ಹಾಲಿಗಾಗಿ ಅಭಿಯಾನ ಶುರು ಮಾಡಿದರು. ಈ ಅಭಿಯಾನಕ್ಕೆ ಓಗೊಟ್ಟ ಅಲ್ಲಿನ ತಾಯಂದಿರು ಎದೆಹಾಲು ದಾನ ಮಾಡಲು ಮುಂದಾಗಿದ್ದು, ಇದುವರೆಗೆ 400 ಔನ್ಸ್‌ ಎದೆಹಾಲು ದಾನವಾಗಿ ಬಂದಿದೆ. ಇದನ್ನು ಪ್ರಿಜರ್‌ನಲ್ಲಿಟ್ಟು ಸಂಗ್ರಹಿಸಿ ಮಗುವಿಗೆ ಬೇಕಾದಾಗ ನೀಡಲಾಗುತ್ತಿದೆ. 

ಎದೆಹಾಲುಣಿಸುವುದರಿಂದ ಮಗುವಿಗೆ ಮಾತ್ರವಲ್ಲ, ತಾಯಿಗೂ ಹಲವು ಪ್ರಯೋಜನಗಳಿವೆ

ಬರುವ ಜುಲೈಗೆ ಮೆಗನ್‌ 5 ತಿಂಗಳ ಮಗುವಿಗೆ ಒಂದು ವರ್ಷವಾಗಲಿದೆ. ಅಲ್ಲಿಯವರೆಗೆ ಮಗುವಿಗೆ ಎದೆಹಾಲು ನೀಡಬೇಕೆಂದರೆ ಸುಮಾರು 10,000 ಔನ್ಸ್‌ನಷ್ಟು ಎದೆಹಾಲು ಬೇಕಾಗುವುದು. ಆದರೆ ಎದೆಹಾಲು ನೀಡುವುದಾಗಿ ಇನ್ನು 300 ಮೇಲ್‌ಗಳು ಬಂದಿರುವುದಾಗಿ ಮೆಗನ್‌ ಸಹೋದರಿ ಬ್ರಿಟಾನಿ ಎಪ್ಪೆನೌರ್(Brittany Eppenauer) ಹೇಳಿದ್ದಾರೆ. ಅಲ್ಲದೇ ನಮಗೆ ಮೊದಲು ದಾನವಾಗಿ ಬಂದ ಎದೆಹಾಲನ್ನು ಮೆಗನ್‌ ಎಂಬ ಮತ್ತೊಬ ಮಹಿಳೆ ನೀಡಿದ್ದರು. ಇತರ ತಾಯಂದಿರು ಕೂಡ ಎದೆಹಾಲು ನೀಡಿ ಸಹೋದರಿಯ ಮಗುವನ್ನು ಉಳಿಸಲು ಬಯಸುತ್ತಿರುವ ಈ ಕಾರ್ಯ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಆಕೆ ಹೇಳಿದರು. 

32 ವರ್ಷದ ಮೆಗನ್‌ ಕಳೆದ ನವಂಬರ್‌ 15ರಂದು ನಿಧನರಾಗಿದ್ದಾರೆ. 5 ತಿಂಗಳ ಕಂದ ಸೇರಿದಂತೆ ಐವರು ಮಕ್ಕಳನ್ನು ಹೊಂದಿದ್ದರು. 'ಅವಳೊಬ್ಬಳು ಪರಿಪೂರ್ಣ ತಾಯಿಯಾಗಿದ್ದಳು. ಮಕ್ಕಳ ಬಗ್ಗೆ ತೀವ್ರ ಕಾಳಜಿಯನ್ನು ಆಕೆ ಹೊಂದಿದ್ದಳು. ಮಗುವಿಗೆ ಎದೆಹಾಲು ನೀಡುವುದು ಅವಳಿಗೆ ಅತೀ ಮುಖ್ಯವೆನಿಸಿತ್ತು. ಅವಳ ಆಸೆ ಆದಾಗಿದ್ದರಿಂದ ನನಗೂ ಆಕೆಯ ಆಸೆ ಈಡೇರಿಸಿವುದು ಮುಖ್ಯವಾಗಿತ್ತು. ಅವಳು ಅನಾರೋಗ್ಯಕ್ಕೆ ಒಳಗಾದಾಗ ನಾನು ಅವಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಎಂದು ಮೇಗನ್ ಅವರ ಪತಿ ಮೈಕೆಲ್ ರಿಚರ್ಡ್ಸ್(Michael Richards) ಬೇಸರ ವ್ಯಕ್ತಪಡಿಸಿದರು."

ಎದೆ ಹಾಲು ಉಣಿಸದ ತಾಯಂದಿರಿಗೆ ಖಿನ್ನತೆಯ ಅಪಾಯ

ಕೋವಿಡ್‌ ನಿಂದಾಗಿ ಅನೇಕ ಹಸುಗೂಸುಗಳು ತಾಯಿಯನ್ನು ಕಳೆದು ಕೊಂಡಿವೆ. ರಾಜ್ಯದಲ್ಲಿಏಪ್ರಿಲ್‌ನಿಂದೀಚೆಗೆ 44 ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಷ್ಟೇ ಅಲ್ಲ ನೂರಾರು ಮಕ್ಕಳು ತಂದೆ ಅಥವಾ ತಾಯಿ ಪೈಕಿ ಒಬ್ಬರನ್ನು ಕಳೆದುಕೊಂಡು ಹೆತ್ತವರ ಪ್ರೀತಿಯಿಂದ ವಂಚಿತರಾಗಿದ್ದಾರೆ.ನವಜಾತ ಶಿಶು, ಹಾಲುಗಲ್ಲದ ಹಸುಳೆ, ಪ್ರಪಂಚದ ಜ್ಞಾನವನ್ನೇ ಅರಿಯದ ಕಂದಮ್ಮಗಳೂ ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿವೆ. ಈ 44 ಮಕ್ಕಳಲ್ಲಿ 22 ಮಕ್ಕಳು ಹೆತ್ತವರ ಒಂದೇ ಕುಡಿಯಾಗಿದ್ದರೆ ಇನ್ನುಳಿದ 22 ಮಕ್ಕಳಿಗೆ ಸಹೋದರ ಅಥವಾ ಸಹೋದರಿ ಇದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 14 ದಿನದ ಹಸುಗೂಸು ಅನಾಥವಾಗಿದೆ.

ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ರಾಜ್ಯ ಸರ್ಕಾರ ಬಾಲ ಸೇವಾ ಯೋಜನೆ(Child Service Plan)ಯನ್ನು ಘೋಷಿಸಿದೆ. ಹೆತ್ತವರ ಕಳೆದುಕೊಂಡ ಮಕ್ಕಳಿಗೆ ಮಾಸಿಕ 3500 ರು. ನೀಡುವುದು. 10 ವರ್ಷದೊಳಗಿನ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡುವುದು. 21 ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ 1 ಲಕ್ಷ ರುಪಾಯಿಯನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಿದೆ.

Follow Us:
Download App:
  • android
  • ios