ಕೊಲಂಬೋ: ಬೌದ್ಧ ಧರ್ಮೀಯರೇ ಅಧಿಕವಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಗೋಹತ್ಯೆ ನಿಷೇಧದ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಿ ಮಹಿಂದ ರಾಜಪಕ್ಸೆ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕುರಿತು ಪ್ರಧಾನಿ ರಾಜಪಕ್ಸ ಕೆಲ ಸಮಯದ ಹಿಂದೆಯೇ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದರು. ಅದನ್ನು ಲಂಕಾದ ಆಡಳಿತಾರೂಢ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷದ ಸಂಸದೀಯ ಸಮಿತಿಯು ಸೆ.8ರಂದು ಅಂಗೀಕರಿಸಿತ್ತು. ಅದನ್ನು ಇದೀಗ ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ. ಇದರ ಮುಂದಿನ ಭಾಗವಾಗಿ ಶೀಘ್ರವೇ ಸಂಪುಟವು ಪ್ರಾಣಿಗಳ ಕಾಯ್ದೆಗೆ ತಿದ್ದುಪಡಿ ತರುವ ಮತ್ತು ಗೋಹತ್ಯೆ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಕೆಲಸವನ್ನು ಮಾಡಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸಚಿವ ಕೆಹೆಲಿಯಾ ರಂಬುಕ್‌ವೆಲ್ಲಾ ತಿಳಿಸಿದ್ದಾರೆ.

ನಿಷೇಧ ಏಕೆ?: ಲಂಕಾ ಕೃಷಿ ಪ್ರದಾನ ದೇಶ. ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ. ಆದರೆ ದೇಶದಲ್ಲಿ ಗೋಹತ್ಯೆ ಹೆಚ್ಚಾದ ಬಳಿಕ ಕೃಷಿ ಚಟುವಟಿಕೆಗಳಿಗೆ ಗೋವುಗಳ ಕೊರತೆ ಕಾಣಿಸುತ್ತಿದೆ. ಜೊತೆಗೆ ಗೋಹತ್ಯೆಯಿಂದಾಗಿ ಜನರ ಇತರೆ ಆದಾಯದ ಮೂಲಕ ಸ್ಥಗಿತಗೊಂಡಿದೆ. ಹೀಗಾಗಿ ಗೋಹತ್ಯೆಗೆ ನಿಷೇಧ ಹೇರಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ ಕೃಷಿ ಚಟುವಟಿಕೆಗೆ ಬಳಕೆ ಮಾಡಲಾಗದ ವಯಸ್ಸಾದ ಗೋವುಗಳ ನಿರ್ವಹಣೆಗೆ ಸರ್ಕಾರವೇ ವಿಶೇಷ ಯೋಜನೆ ರೂಪಿಸಲಿದೆ.

ಸೇವನೆಗೆ ನಿಷೇಧ ಇಲ್ಲ:

ದೇಶದಲ್ಲಿ ಗೋಹತ್ಯೆ ನಿಷೇಧಿಸಿದ್ದರೂ, ಸೇವನೆಗೆ ನಿಷೇಧ ಹೇರಿಲ್ಲ. ಹೀಗಾಗಿ ದೇಶದ ಗೋಮಾಂಸ ಬೇಡಿಕೆಯನ್ನು ಪೂರೈಸಲು ವಿದೇಶಗಳಿಂದ ಆಮದು ಮಾಡಿಕೊಂಡು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ಹೇಳಿದೆ.

2012ರ ಜನಗಣತಿ ಪ್ರಕಾರ ಲಂಕಾದ 2 ಕೋಟಿ ಜನಸಂಖ್ಯೆ ಪೈಕಿ ಶೇ.70.10ರಷ್ಟುಬೌದ್ಧ ಧರ್ಮೀಯರು, ಶೇ.12.58 ಹಿಂದೂಗಳು, ಶೇ.9.66 ಮುಸ್ಲಿಮರು, ಶೇ.7.62ರಷ್ಟುಕ್ರೈಸ್ತರು ಮತ್ತು ಶೇ.0.03ರಷ್ಟುಇತರರು ಇದ್ದಾರೆ.

ಕರ್ನಾಟಕದಲ್ಲಿ ನಿಷೇಧಕ್ಕೆ ಮೀನಮೇಷ

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಸರ್ಕಾರಗಳು ಇದನ್ನು ಜಾರಿ ಮಾಡಿಲ್ಲ. ಇತ್ತೀಚೆಗೆ ಪಶುಸಂಗೋಪನೆ ಸಚಿವ ಪ್ರಭು ಚವಾಣ್‌ ಅವರು ಗೋಹತ್ಯೆ ನಿಷೇಧಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದೇವೆ ಎಂದು ಹೇಳಿದ್ದರು.