ಕೊಲೊಂಬೊ(ಆ.9): ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಇನ್ನು ಈ ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಗೆ ಶನಿವಾರ ಖುದ್ದು ಮಹಿಂದಾ ರಾಜಪಕ್ಸೆ ಕರೆ ಮಾಡಿ ಆಹ್ವಾನಿಸಿದ್ದರು. ಆದರೆ ಕೊರೋನಾತಂಕ ಹಿನ್ನೆಲೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

ಹೌದು ಈ ಸಂಬಂಧ ಖುದ್ದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿ ಮಾಡಿದ್ದು, ಶ್ರೀಲಂಕಾದ ನೂತನ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಕರೆ ಮಾಡಿರುವುದಕ್ಕೆ ಬಹಳ ಖುಷಿಯಾಯ್ತು. ಅವರು ನಾಳೆ(ಶನಿವಾರ) ನಡೆಯಲಿರುವ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ ಕೊರೋನಾ ವೈರಸ್ ಹಿನ್ನೆಲೆ ಕೊಲಂಬೋಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾನು ಶ್ರೀಲಂಕಾಗೆ ತೆರಳುತ್ತೇನೆ ಎಂದಿದ್ದಾರೆ.

ಇನ್ನು ರಾಜಧಾನಿ ಕೊಲೊಂಬೊದ ಬೌದ್ಧ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಮಹಿಂದಾ ಅವರ ಕಿರಿಯ ಸಹೋದರ ಮತ್ತು ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಸೆ ಪ್ರಮಾಣ ವಚನ ಬೋಧಿಸಿದ್ದಾರೆ.