ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪಮೋದಿ ವಿರುದ್ಧ ಆರೋಪಿಸಿದ ಲಂಕಾ ಅಧಿಕಾರಿ ರಾಜೀನಾಮೆ

ಕೊಲಂಬೊ(ಜೂ,14): ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಸಂಸ್ಥೆಗೆ ಶ್ರೀಲಂಕಾದ ಪವನ ವಿದ್ಯುತ್‌ ಯೋಜನೆಯನ್ನು ನೀಡುವಂತೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರಿಗೆ ಹೇಳಿದ್ದರು ಎಂದು ಆರೋಪಿಸಿದ ಸಿಲೋನ್‌ ವಿದ್ಯುಚ್ಛಕ್ತಿ ಬೋರ್ಡ್‌ ಮುಖ್ಯಸ್ಥರು ತಮ್ಮ ಹೇಳಿಕೆ ಹಿಂಪಡೆದಿದ್ದು, ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಎಂಎಂಸಿ ಫರ್ಡಿನಾಂಡೊ ಅವರು ಸರ್ಕಾರಿ ಸ್ವಾಮ್ಯದ ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದನ್ನು ಸ್ವೀಕರಿಸಿದ್ದೇವೆ ಎಂದು ಸೋಮವಾರ ಶಕ್ತಿ ಸಚಿವ ಕಂಚನಾ ವಿಜೇಸೇಕರ ಹೇಳಿದ್ದಾರೆ.

ಫರ್ಡಿನಾಂಡೊ ಪ್ರಧಾನಿ ಮೋದಿ ವಿರುದ್ಧ ಮಾಡಿದ ಆರೋಪವನ್ನು ಅಧ್ಯಕ್ಷ ರಾಜಪಕ್ಸೆ ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಕುರಿತು ಭಾರತ ಸರ್ಕಾರ ಈವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ

ಏನಿದು ವಿವಾದ?

ಶ್ರೀಲಂಕಾದ ಪವನ ವಿದ್ಯುತ್‌ ಯೋಜನೆಯೊಂದರ ಗುತ್ತಿಗೆಯನ್ನು ಭಾರತದ ಪ್ರಧಾನಿ ನರೆಂದ್ರ ಮೋದಿ ಅವರು ಅದಾನಿ ಗ್ರೂಪ್‌ಗೆ ನೀಡುವಂತೆ ಒತ್ತಡ ಹೇರಿದ್ದರು ಎಂದು ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಚೇರ್ಮನ್‌ ಆರೋಪ ಮಾಡಿ, ನಂತರ ಉಲ್ಟಾಹೊಡೆದ ಘಟನೆ ನಡೆದಿದೆ.

ಶ್ರೀಲಂಕಾದಲ್ಲಿ 500 ಮೆಗಾವ್ಯಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಸ್ಥಾವರ ನಿರ್ಮಿಸಲು ಭಾರತ ಆರ್ಥಿಕ ನೆರವು ನೀಡಿತ್ತು. ನಂತರ ಅದರ ಗುತ್ತಿಗೆಯನ್ನು ಅದಾನಿಗೆ ನೀಡುವಂತೆ ಮೋದಿ ಒತ್ತಡ ಹೇರುತ್ತಿದ್ದಾರೆ ಎಂದು ಅಧ್ಯಕ್ಷ ಗೋಟಬಾಯ ರಾಜಪಕ್ಸೆ ತಮಗೆ ಹೇಳಿದ್ದರು ಎಂದು ಸಿಲೋನ್‌ ಎಲೆಕ್ಟ್ರಿಸಿಟಿ ಬೋರ್ಡ್‌ ಚೇರ್ಮನ್‌ ಎಂಎಂಸಿ ಫರ್ಡಿನಾಂಡೋ ಎಂಬುವರು ಕಳೆದ ವಾರ ಸಂಸದೀಯ ಸಮಿತಿ ಮುಂದೆ ಹೇಳಿದ್ದರು. ಆದರೆ ಎರಡು ದಿನಗಳ ನಂತರ ಉಲ್ಟಾಹೊಡೆದಿರುವ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು, ‘ಭಾವನಾತ್ಮಕ’ ಒತ್ತಡದಲ್ಲಿ ನಾನು ಸುಳ್ಳು ಹೇಳಿದ್ದೆ ಎಂದು ಸಮಿತಿಗೆ ಲಿಖಿತವಾಗಿ ತಿಳಿಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ವಿದ್ಯುತ್‌ ಕಂಪನಿ ಸ್ಥಾಪಿಸುವುದಕ್ಕೆ ಗುತ್ತಿಗೆ ನೀಡುವ ವಿಚಾರ ಶ್ರೀಲಂಕಾದಲ್ಲಿ ವಿವಾದಕ್ಕೆ ಕಾರಣವಾಗಿ ಆ ಕುರಿತು ಸಂಸದೀಯ ಸಮಿತಿ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ, ಸದರಿ ಯೋಜನೆಯ ಗುತ್ತಿಗೆಯನ್ನು ಭಾರತದ ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿಗೆ ನೀಡಲಾಗಿದೆ. ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷ ಗೋಟಬಾಯ ರಾಜಪಕ್ಸೆ, ‘ವಿದ್ಯುತ್‌ ಯೋಜನೆಯ ಗುತ್ತಿಗೆಯನ್ನು ಯಾವುದೇ ಸಂಸ್ಥೆಗೆ ನೀಡುವಂತೆ ಒತ್ತಡ ಬಂದಿತ್ತು ಎಂಬ ಆರೋಪ ಸುಳ್ಳು’ ಎಂದು ಟ್ವೀಟ್‌ ಮಾಡಿದ್ದಾರೆ.