ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ, ಕಾರಿನಲ್ಲಿ ಆಗಮಿಸಿದ ಬಂದೂಕುದಾರಿಗಳು ಅಮಾಯಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಜೋಹಾನ್ಸ್‌ಬರ್ಗ್ (ಡಿ.21) ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಭಾರತದ ಹೈದಾರಾಬಾದ್ ಮೂಲದ ಅಪ್ಪ ಮಗ ಸಾಜೀದ್ ಅಕ್ರಮ್, ನವೀದ್ ಅಕ್ರಮ ನಡೆಸಿದ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಆಸ್ಟ್ರೇಲಿಯಾ ಸರ್ಕಾರ ಘೋಷಿಸಿದೆ. ಈ ಘಟನೆ ಬೆನ್ನಲ್ಲೇ ಇದೀಗ ಸೌತ್ ಆಫ್ರಿಕಾದಲ್ಲಿ ಇದೇ ರೀತಿಯ ಗುಂಡಿನ ದಾಳಿ ನಡೆದಿದೆ. ಜೋಹಾನ್ಸ್‌ಬರ್ಗ್ ಹೊರವಲಯದ ಬೆಕ್ಕರ್ಸ್‌ದಾಲ್ ಗೋಲ್ಡ್ ಮೈನಿಂಗ್ ವಲಯದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಬಂದುಕೂದಾರಿಗಳು ಏಕಾಏಕಿ ಅಮಾಯಕರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅಮಾಯಕರ ಮೇಲೆ ಎರಗಿದ ಗುಂಡಿನ ದಾಳಿ
ಸೌತ್‌ವೆಸ್ಟ್ ನಗರದಿಂದ 40 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಬಂದ ಬಂದುಕೂದಾರಿಗಳು ಅಮಾಕರ ಮೇಲೆ ದಾಳಿ ಮಾಡಿದ್ದಾರೆ. ಒರ್ವ ಎಕೆ 46 ಗನ್ ಮೂಲಕ ದಾಳಿ ಮಾಡಿದ್ದಾನೆ. ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಮಾಯಕರ ಹುಡುಕಿ ಹುಡುಕಿ ಹತ್ಯೆ ಮಾಡಲಾಗಿದೆ. ಅಮಾಯಕರ ಹತ್ಯೆ ಮಾಡಿ ಅವರ ಮೊಬೈಲ್ ಫೋನ್‌ಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ ಎಂದು ಸೌತ್ ಆಫ್ರಿಕಾ ಮಾಧ್ಯಮಳು ವರದಿ ಮಾಡಿದೆ.
ಎರಡನೇ ವಾರದಲ್ಲಿ 2ನೇ ಘಟನೆ
ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡುತ್ತಿರುವ ಘಟನೆ ಪದೇ ಪದೆ ಮರುಕಳಿಸುತ್ತಿದೆ. ಸೌತ್ ಆಫ್ರಿಕಾದಲ್ಲಿ ಎರಡೇ ವಾರದಲ್ಲಿ ಎರಡನೇ ಘಟನೆಯಾಗಿದೆ. ಡಿಸೆಂಬರ್ 6ರಂದು ಇದೇ ರೀತಿ ಬಂದುಕೂದಾರಿ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ ಹಲವರು ಮೃತಪಟ್ಟಿದ್ದರು. ಇದೀಗ ಮತ್ತೆ ಗುಂಡಿನ ದಾಳಿ ಘಟನೆ ನಡೆದಿದೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಹಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ದಾಳಿಕೋರರ ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದಾಳಿಕೋರರ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದ ಸಿಸಿಟಿವಿ ದೃಶ್ಯಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಹಲವು ತಂಡಗಳಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಯೋತ್ಪಾದಕ ಕೃತ್ಯವೇ?
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ರೀತಿಯಲ್ಲಿ ಇದೀಗ ಜೋಹಾನ್ಸ್‌ಬರ್ಗ್ ಹೊರವಲಯದಲ್ಲಿ ನಡೆದಿರುವ ಈ ದಾಳಿ ಭಯೋತ್ಪಾದಕ ಕೃತ್ಯವೇ ಅನ್ನೋ ಚರ್ಚೆಗಳು ಶುರುವಾಗಿದೆ. ಆದರೆ ಸೌತ್ ಆಫ್ರಿಕಾ ಪೊಲೀಸರು ಈ ಕುರಿತು ಸ್ಪಷ್ಟನೆ ನೀಡಿಲ್ಲ. ಆದರೆ ಸೌತ್ ಆಫ್ರಿಕಾದಲ್ಲಿ ಕ್ರೈಮ್ ರೇಟ್ ಇತರ ದೇಶಗಳಿಗಿಂತ ಹೆಚ್ಚಾಗಿದೆ. ಪದೇ ಪದೆ ಗುಂಡಿನ ದಾಳಿಗಳು ನಡೆಯುತ್ತಲೇ ಇದೆ. ಇನ್ನು ಕಳ್ಳತನಕ್ಕಾಗಿ ಗುಂಡಿನ ದಾಳಿ ಪ್ರಕರಣಗಳೇ ಹೆಚ್ಚು. ಆದರೆ ಸದ್ಯ ನಡೆದಿರುವ ಘಟನೆ ಕುರಿತು ಪೊಲೀಸರು ಸ್ಪಷ್ಟ ಮಾಹಿತಿ ನೀಡಿಲ್ಲ.


