* ಆಸ್ತಿ ಮತ್ತು ಸಂಪತ್ತಿನ ಒಡೆತನ ವ್ಯಕ್ತಿಗಳ ಬದಲಿಗೆ ಸಾಮುದಾಯಿಕ ಒಡೆತನದಲ್ಲಿರಬೇಕು* ರಷ್ಯಾವು ಕಮ್ಯೂನಿಸ್ಟ್ ಸಿದ್ಧಾಂತದೊಂದಿಗೆ ಮುನ್ನಡೆಯುತ್ತಿರುವ ಸಮಾಜವಾದಿ ರಾಷ್ಟ್ರ* ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಮ್ಯೂನಿಸ್ಟ್ ಅಲ್ಲ, ರಾಷ್ಟ್ರೀಯವಾದಿಯೂ ಅಲ್ಲ
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಆಸ್ತಿ ಮತ್ತು ಸಂಪತ್ತಿನ ಒಡೆತನ ವ್ಯಕ್ತಿಗಳ ಬದಲಿಗೆ ಸಾಮುದಾಯಿಕ ಒಡೆತನದಲ್ಲಿರಬೇಕು ಎಂದು ಪ್ರತಿಪಾದಿಸುವ ಸಿದ್ಧಾಂತವೇ ಕಮ್ಯೂನಿಸಂ. ರಷ್ಯಾವು ಕಮ್ಯೂನಿಸ್ಟ್ ಸಿದ್ಧಾಂತದೊಂದಿಗೆ ಮುನ್ನಡೆಯುತ್ತಿರುವ ಸಮಾಜವಾದಿ ರಾಷ್ಟ್ರ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಮ್ಯೂನಿಸ್ಟ್ ಅಲ್ಲ, ರಾಷ್ಟ್ರೀಯವಾದಿಯೂ ಅಲ್ಲ. ತಾನು ಯಾವುದೇ ಸಿದ್ಧಾಂತ ಹೊಂದಿಲ್ಲ ಎಂಬಂತೆ ಅವರು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳುತ್ತಾರೆ. ಭವಿಷ್ಯದ ತಲೆಮಾರುಗಳು ಅವರನ್ನು ‘ಪುಟಿನಿಸಮ್’ನಿಂದಲೇ ಗುರುತಿಸಿಕೊಳ್ಳಲಿದ್ದಾರೆ. ಹಿಂಸೆ, ಫ್ಯಾಸಿಸಂ ಹಾಗೂ ಒಲಿಗಾರ್ಕಿಕಲ್ ಕ್ಯಾಪಿಟಲಿಸಂನಿಂದ (ಸ್ವಾರ್ಥ ಉದ್ದೇಶಗಳಿಂದ ಕೂಡಿದ ಸಣ್ಣ, ಸ್ವಾರ್ಥಿ ಅಥವಾ ಭ್ರಷ್ಟ ಗುಂಪಿನ ನಿರಂಕುಶ ಅಧಿಕಾರ) ಗುರುತಿಸಿಕೊಂಡಿರುವುದೇ ‘ಪುಟಿನಿಸಮ್’.
ಪುಟಿನ್ ಎಂತಹ ವ್ಯಕ್ತಿ? ಬೌದ್ಧಿಕವಾಗಿ ಎಷ್ಟು ಬಡವ ಅಥವಾ ಶ್ರೀಮಂತ? ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ 50 ದಿನಗಳನ್ನು ದಾಟಿ ಮುಂದುವರಿದಿದ್ದು, ಪುಟಿನ್ ಅವರು ಎಂಥ ಕ್ರೌರ್ಯದ ಮುಖ ಹೊಂದಿದ್ದಾರೆ ಎಂಬುದು ಇಡೀ ಜಗತ್ತಿಗೆ ಮನವರಿಕೆ ಆಗಿದೆ. ಎರಡನೇ ಪ್ರಶ್ನೆಗೆ ಉತ್ತರಗಳು ಹಲವಿರಬಹುದು. ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಅಥವಾ ರಾಜಕಾರಣಿಗಳಲ್ಲಿ ಒಬ್ಬರಿರಬಹುದು ಎಂದು ಭಾವಿಸಲಾಗಿದೆ. ಮಾಜಿ ಗುಪ್ತಚರ ಅಧಿಕಾರಿಯಾಗಿರುವ 69 ವರ್ಷ ವಯಸ್ಸಿನ ಪುಟಿನ್ ಮಹಾ ಬಲಶಾಲಿ ಹಾಗೂ ಶ್ರೀಮಂತ ಎಂದು ಅವರ ವಿರೋಧಿಗಳು ಹಾಗೂ ವಿಶ್ಲೇಷಕರು ಸಹ ಹೇಳಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿರುವ ಎಲೊನ್ ಮಸ್ಕ್ ಅವರೇ, ತಾನು ಪುಟಿನ್ ಅವರಷ್ಟು ಶ್ರೀಮಂತ ಅಲ್ಲ ಎಂದು ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು! ಮಸ್ಕ್ ಅವರು ಹೇಳಿರುವ ಪ್ರಕಾರ ಅವರ ಸಂಪತ್ತು 260 ಶತಕೋಟಿ ಡಾಲರ್. ಪುಟಿನ್‌ರದ್ದು ಇನ್ನೂ ಹೆಚ್ಚು.
ಪುಟಿನ್ ಅವರ ಸಂಪತ್ತು ತೆರೆದ ಪುಸ್ತಕವಲ್ಲ. ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಆಗಿರಬಹುದು ಎಂದು ಹಲವು ಮಾಧ್ಯಮಗಳೂ ವರದಿ ಮಾಡಿವೆ. ಅವರು ಕಳೆದ ಎರಡು ದಶಕಗಳಿಂದ ಅಧಿಕಾರದಲ್ಲಿದ್ದಾರೆ. ಪುಟಿನ್ ಅವರ ವಾರ್ಷಿಕ ವೇತನ 1,40,000 ಡಾಲರ್ ಎಂದು ಸೋವಿಯತ್ ಅಧಿಕಾರದ ಸಂಕೇತವಾಗಿರುವ ‘ಕ್ರೆಮ್ಲಿನ್ (ರಷ್ಯಾದ ಆಡಳಿತ ಸಂಕೀರ್ಣ)’ ಘೋಷಿಸಿದ್ದ ಬಗ್ಗೆ ಉದ್ಯಮ ನಿಯತಕಾಲಿಕೆ ‘ಫಾರ್ಚೂನ್’ ಹಿಂದೊಮ್ಮೆ ವರದಿ ಮಾಡಿತ್ತು. ಪುಟಿನ್ ಘೋಷಿತ ಆಸ್ತಿ 800 ಚದರ ಅಡಿಯ ಅಪಾರ್ಟ್‌ಮೆಂಟ್, ಮೂರು ಕಾರುಗಳು ಹಾಗೂ ಒಂದು ಟ್ರೇಲರ್. ಇದು ಸಾರ್ವಜನಿಕ ಬಳಕೆಗಾಗಿ ಇರುವುದು ಎನ್ನಲಾಗಿದೆ. ಆದರೆ, ಸ್ವತ್ತು ನಿರ್ವಹಣಾ ಕಂಪನಿ ‘ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್’ ಸೇರಿದಂತೆ ಅನೇಕ ಮೂಲಗಳು ಪುಟಿನ್ ವೈಯಕ್ತಿಕ ಆಸ್ತಿಯ ಬಗ್ಗೆ ಬೇರೆಯದೇ ಮಾಹಿತಿ ನೀಡಿವೆ. ಇವುಗಳ ಪ್ರಕಾರ, ಪುಟಿನ್ ವೈಯಕ್ತಿಕ ಆಸ್ತಿ 2017ರಲ್ಲಿ200 ಶತಕೋಟಿ ಡಾಲರ್. ಇದು ಊಹಾಪೋಹ ಆಧಾರಿತ ವರದಿಯಲ್ಲ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೇಲೆ ರಷ್ಯಾ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸಲು ಅಮೆರಿಕದಲ್ಲಿ ರಚಿಸಲಾಗಿದ್ದ ನ್ಯಾಯಾಂಗ ಸಮಿತಿಗೆ ‘ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್’ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬಿಲ್ ಬ್ರೌಡರ್ ನೀಡಿದ್ದ ಹೇಳಿಕೆ ಆಧಾರದಲ್ಲಿ ಪ್ರಕಟಗೊಡಿತ್ತು. ಪುಟಿನ್ ಸರ್ಕಾರ ಮಾಡಿದ ಭಯಾನಕ ಅಪರಾಧದ ಪರಿಣಾಮವಾಗಿ ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದೂ ಬ್ರೌಡರ್ ಹೇಳಿದ್ದರು. ‘ಹರ್ಮಿಟೇಜ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್’ ಹಿಂದೆ ರಷ್ಯಾದಲ್ಲಿ ಅತಿದೊಡ್ಡ ಹೂಡಿಕೆದಾರ ಕಂಪನಿಯಾಗಿತ್ತು. ವೈಭವೋಪೇತ ಜೀವನ ಶೈಲಿಯ ಆಧಾರದಲ್ಲಿಯೂ ಪುಟಿನ್ ಶ್ರೀಮಂತಿಕೆಯನ್ನು ಅಳೆಯಲಾಗಿದೆ. ಅವರು ಧರಿಸುವ ಲಕ್ಸುರಿ ವಾಚ್‌ಗಳು 60,000 ಡಾಲರ್‌ನಿಂದ 5,00,000 ಡಾಲರ್ ಬೆಲೆ ಬಾಳುವಂಥದ್ದು ಎನ್ನಲಾಗಿದೆ. ಪುಟನ್‌ರ ಅರಮನೆಯಂತಹ ಮಹಲು ಮತ್ತು ಅತ್ಯದ್ಭುತ ಮೂಲಸೌಕರ್ಯ ಹೊಂದಿರುವ ನಿವಾಸದ ವಿಡಿಯೊವನ್ನು ‘ಸಿಎನ್‌ಎನ್’ ವಾಹಿನಿ ಬಿಡುಗಡೆ ಮಾಡಿತ್ತು. ಚರ್ಚ್ ಮಾದರಿಯಲ್ಲಿ ಈ ಮಹಲನ್ನು ನಿರ್ಮಿಸಲಾಗಿದೆ. ಅದರಲ್ಲಿ 1,90,000 ಚದರ ಅಡಿಯ ಈಜು ಕೊಳ, ಐಸ್ ಹಾಕಿ ಟ್ರ್ಯಾಕ್, ಕ್ಯಾಸಿನೊ ಹಾಗೂ ನೈಟ್ ಕ್ಲಬ್ ಇದೆ ಎಂದು ವಾಹಿನಿ ವರದಿ ಮಾಡಿತ್ತು. ರಷ್ಯಾದ ಪ್ರತಿಪಕ್ಷ ನಾಯಕರೂ ಪುಟಿನ್ ಮಹಲಿನ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.
ಈ ಮಹಲು ಮಾತ್ರವಲ್ಲದೆ ಇನ್ನೂ 19 ನಿವಾಸಗಳು, 700 ಕಾರುಗಳು, 58 ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಪುಟಿನ್ ಒಡೆತನದಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಪೈಕಿ ಒಂದು ವಿಮಾನ, ‘ಫ್ಲೈಂಗ್ ಕ್ರೆಮ್ಲಿನ್'ನ ಮೌಲ್ಯವೇ 716 ದಶಲಕ್ಷ ಡಾಲರ್. ಇದರಲ್ಲಿರುವ ಶೌಚಾಲಯವು ಚಿನ್ನದಿಂದ ಮಾಡಲ್ಪಟ್ಟದ್ದಾಗಿದೆ! 'ದಿ ಗಾರ್ಡಿಯನ್' ಪತ್ರಿಕೆ ಇತ್ತೀಚೆಗೆ ಇಟಲಿಯಲ್ಲಿರುವ ಆರು ಮಹಡಿಗಳ ಐಷಾರಾಮಿ ವಿಹಾರ ನೌಕೆಯೊಂದರ ಚಿತ್ರವನ್ನು ಪ್ರಕಟಿಸಿತ್ತು. ಇದು ಪುಟಿನ್ ಒಡೆತನದ್ದು ಎನ್ನಲಾಗಿದೆ. ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ ಈ ನೌಕೆಯ ಒಳಗೆ ಒಂದು ಸಣ್ಣ ಪ್ರಪಂಚವನ್ನೇ ಕಾಣಬಹುದಾಗಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಇಟಲಿ ಸಂಸತ್ತನ್ನು ಉದ್ದೇಶಿಸಿ ಇತ್ತೀಚೆಗೆ ಮಾತನಾಡಿದ್ದಾಗ ಐಷಾರಾಮಿ ವಿಹಾರ ನೌಕೆಯನ್ನು ಜಪ್ತಿ ಮಾಡುವಂತೆ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಇಟಲಿ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ.
ವಿಶೇಷವೆಂದರೆ, ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿರುವ ಪಾಶ್ಚಿಮಾತ್ಯ ರಾಷ್ಟ್ರಗಳು ಪುಟಿನ್ ಅವರನ್ನು ಉಳಿಸಿವೆ. ಅವರ ಸಂಪತ್ತಿನ ಬಗ್ಗೆ ಚರ್ಚೆಯಾಗಿದೆಯಷ್ಟೇ ವಿನಹ ಅವುಗಳನ್ನು ಜಪ್ತಿ ಮಾಡಲಾಗಿಲ್ಲ. ಇದಕ್ಕೆ ರಾಜಕೀಯ ಕಾರಣಗಳನ್ನು ನೀಡಲಾಗಿದೆ. ಪುಟಿನ್ ಸಂಪುಟ ಸಹೋದ್ಯೋಗಿಗಳು, ರಷ್ಯಾದ ಅನೇಕ ಅಧಿಕಾರಿಗಳ ಮೇಲೆ ಪ್ರಯಾಣ ನಿಷೇಧ ಸೇರಿದಂತೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಪುಟಿನ್ ಮಾತ್ರ ಇವೆಲ್ಲದರಿಂದ ಹೊರತಾಗಿದ್ದಾರೆ. ಪುಟಿನ್ ಸಂಪತ್ತಿನ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಳಿ ಸಾಕಷ್ಟು ಪುರಾವೆಗಳು ಇಲ್ಲದೆಯೂ ಇರಬಹುದು.
ಪುಟಿನ್ ಮುಖದ ಭಾವನೆಗಳನ್ನು ಗುರುತಿಸುವುದು ಕಷ್ಟಸಾಧ್ಯ. ಅವರ ಅಭಿವ್ಯಕ್ತಿ ಸದಾ ಸ್ತಬ್ಧವಾಗಿರುತ್ತದೆ. ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ನಸುಕಂದು ಮಚ್ಚೆಗಳನ್ನು ತೊಡೆದುಹಾಕಲು ಪುಟಿನ್ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಸ್ಮೆಟಿಕ್ ಸರ್ಜರಿ ವ್ಯಕ್ತಿತ್ವವನ್ನು ವ್ಯಾಖ್ಯಾನಿಸಲಾರದು. ಪುಟಿನ್ ವಿಷಯದಲ್ಲಂತೂ ಇದು ಸ್ಪಷ್ಟ.
