ಲಾಸ್‌ ಏಂಜಲೀಸ್‌(ಏ.16): ವಾಸನೆ ಹಾಗೂ ರುಚಿಯನ್ನು ಗುರುತಿಸಲು ಸಾಧ್ಯವಾಗದಿರುವುದು ಕೊರೋನಾ ವೈರಸ್‌ ತಗಲಿರುವುದರ ಪ್ರಮುಖ ಲಕ್ಷಣ ಎಂಬುದು ಹೊಸ ಅಧ್ಯಯನದಲ್ಲಿ ಸಾಬೀತಾಗಿದೆ. ಹೀಗಾಗಿ ಇನ್ನುಮುಂದೆ ಕೊರೋನಾ ಶಂಕಿತರ ತಪಾಸಣೆಯಲ್ಲಿ ಈ ಎರಡು ಅಂಶಗಳನ್ನು ವೈದ್ಯರು ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆಗಳಿವೆ.

ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!

ಇಂಟರ್‌ನ್ಯಾಷನಲ್‌ ಫೋರಮ್‌ ಆಫ್‌ ಅಲರ್ಜಿ ಆ್ಯಂಡ್‌ ರೈನಾಲಜಿಯ ಜರ್ನಲ್‌ನಲ್ಲಿ ಅಮೆರಿಕದ ಸ್ಯಾನ್‌ ಡಿಯಾಗೋದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಕೊರೋನಾ ಸೋಂಕಿನ ಮೊದಲ ಪ್ರಮುಖ ಲಕ್ಷಣ ಜ್ವರ. ಎರಡನೆಯ ಪ್ರಮುಖ ಲಕ್ಷಣ ಸುಸ್ತು ಹಾಗೂ ಮೂರನೆಯದು ವಾಸನೆ ಮತ್ತು ರುಚಿ ತಿಳಿಯದಿರುವುದು.

ವಾಸನೆ ಮತ್ತು ರುಚಿ ಗುರುತಿಸಲಾಗದವರಿಗೆ ಈ ಲಕ್ಷಣ ಇಲ್ಲದಿರುವವರಿಗಿಂತ ಕೊರೋನಾ ಸೋಂಕು ತಗಲಿರುವ ಸಾಧ್ಯತೆ 10 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಕೊರೋನಾದ ಇನ್ನಿತರ ಲಕ್ಷಣಗಳೆಂದರೆ ನೆಗಡಿ, ಕೆಮ್ಮು ಹಾಗೂ ತೀವ್ರವಾದ ಉಸಿರಾಟದ ತೊಂದರೆ.