ಸಣ್ಣ ವಿಮಾನವೊಂದನ್ನು ಕದ್ದು ಪೈಲಟ್ ಪರಾರಿಯಾಗಿದ್ದ. ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿದ ನಂತರ ಪೈಲಟ್‌ನನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಹಲವು ವಿಮಾನಗಳ ಹಾರಾಟ ರದ್ದಾಗಿದೆ.
ಒಟ್ಟವಾ: ಸಾಮಾನ್ಯವಾಗಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡಲಾಗಿತ್ತು. ಬೈಕ್, ಸ್ಕೂಟಿ, ಸೈಕಲ್, ಕಾರ್ ಕೆಲವೊಮ್ಮೆ ಸರ್ಕಾರಿ ಬಸ್ ಕಳ್ಳತನವಾಗಿರುವ ಪ್ರಕರಣಗಳು ವರದಿಯಾಗಿರುತ್ತವೆ. ಸಿನಿಮಾಗಳಲ್ಲಿ ನಿಲ್ಲಿಸಿದ್ದ ಫೈಟರ್ ಜೆಟ್ ತೆಗೆದುಕೊಂಡು ಹಾರಿ ಹೋಗುವುದನ್ನು ನೋಡಿರುತ್ತೇವೆ. ಆದರೆ ಕೆನಡಾದಲ್ಲಿ ಇಂತಹವುದೇ ಒಂದು ಪ್ರಕರಣ ನಡೆದಿದೆ. ಓರ್ವ ಪೈಲಟ್ ವಿಮಾನದ ಜೊತೆ ಪರಾರಿಯಾಗಿದ್ದನು. ಕೆನಡಾದಲ್ಲಿ ವಿಮಾನ ಲ್ಯಾಂಡ್ ಮಾಡಿದ ಸಂದರ್ಭದಲ್ಲಿ ಪೈಲಟ್‌ನನ್ನು ಬಂಧಿಸಲಾಗಿದೆ. ಮಂಗಳವಾರ ಕೆನಡಾದ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಒಬ್ಬ ಪೈಲಟ್ ಹಾರಿಸಬಹುದಾದ ಸಣ್ಣ ಸೆಸ್ನಾ 172 ವಿಮಾನವನ್ನು ಕಳ್ಳತನ ಮಾಡಲಾಗಿತ್ತು. ಹೈಜಾಕ್ ಆಗಿರುವ ವಿಮಾನ ಕೆನಾಡ ಗಡಿ ಪ್ರವೇಶಿಸಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಮತ್ತು ಏರ್‌ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿದ್ದರು. ವಿಮಾನ ಲ್ಯಾಂಡ್ ಆಗುವ ಮುನ್ನವೇ ಏರ್ಪೋರ್ಟ್ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್
ಕೆನಡಾದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಹೈಜಾಕ್ ಆಗಿದ್ದ ಸಣ್ಣ ವಿಮಾನವು ಇಳಿಯಿತು. ನಂತರ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ವಿಮಾನವನ್ನು ಕದ್ದು ಹಾರಿಸಿದ ಪೈಲಟ್‌ನನ್ನು ಬಂಧಿಸಿದ್ದಾರೆ. ಪೈಲಟ್‌ನನ್ನು ಬಂಧಿಸುತ್ತಿರುವ ವಿಡಿಯೋವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೈಜಾಕ್ ಮಾಡಿದ ಪೈಲಟ್ ಯಾರು?
ಈವರೆಗೆ ಏರ್‌ಪೋರ್ಟ್ ಅಧಿಕಾರಿಗಳಾಗಲಿ ಅಥವಾ ಪೊಲೀಸರು ಹೈಜಾಕ್ ಮಾಡಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಹೈಜಾಕ್ ಆಗಿದ್ದ ವಿಮಾನದಲ್ಲಿ ಈತನೊಬ್ಬನೇ ಇದ್ದ ಎಂದು ವರದಿಯಾಗಿದೆ. ಈ ಪುಟಾಣಿ ವಿಮಾನವನ್ನು ಈತ ಕಳ್ಳತನ ಮಾಡಿದ್ದೇಕೆ? ಇದರ ಹಿಂದಿನ ಉದ್ದೇಶವೇನು? ಕೆನಡಾದ ವ್ಯಾಂಕೋವರ್ ನಲ್ಲಿಯೇ ಲ್ಯಾಂಡ್ ಮಾಡಲು ನಿರ್ಧರಿಸಿದ್ದೇಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಲ್ಯಾಂಡ್ ಮಾಡಿರುವ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಹಲವು ವಿಮಾನ ಹಾರಾಟ ರದ್ದು, ಮಾರ್ಗ ಬದಲಾವಣೆ
ಹೈಜಾಕ್ ಅಗಿರುವ ಸಣ್ಣ ವಿಮಾನವೊಂದು ವ್ಯಾಂಕೋವರ್ ಏರ್‌ಪೋರ್ಟ್‌ನತ್ತ ಬರುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಅಲರ್ಟ್ ಆಗಿದ್ದರು. ಮುಂಜಾಗ್ರತ ಕ್ರಮವಾಗಿ ವ್ಯಾಂಕೋವರ್‌ಗೆ ಬರಬೇಕಿದ್ದ ಒಂಬತ್ತು ವಿಮಾನಗಳನ್ನು ಬೇರೆ ನಿಲ್ದಾಣಕ್ಕೆ ತಿರುಗಿಸಲಾಗಿತ್ತು. ಇಲ್ಲಿಂದ ಟೇಕಾಫ್ ಆಗಿದ್ದ ವಿಮಾನಗಳ ಸಮಯವನ್ನು ಮುಂದೂಡಿಕೆ ಮಾಡಲಾಗಿತ್ತು. ವಿಮಾನ ನಿಲ್ದಾಣ ಮತ್ತು ಪಶ್ಚಿಮ ಕರಾವಳಿ ನಗರದಾದ್ಯಂತ ಹೈ ಅಲರ್ಟ್‌ನಲ್ಲಿತ್ತು. ಕೆಲವು ಗಂಟೆಗಳ ನಂತರ ಮಾತ್ರ ಇತರ ವಿಮಾನಗಳು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಅನುಮತಿ ನೀಡಲಾಗಿದೆ. ಕೆಲ ಸಮಯ ವ್ಯಾಂಕೋವರ್‌ಗೆ ನಿಲ್ದಾಣದಲ್ಲಿ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು.
