ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಓಹಿಯೋ ನಿವಾಸದ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದಾಳಿ ನಡೆದಾಗ ವ್ಯಾನ್ಸ್‌ ಕುಟುಂಬ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

ನ್ಯೂಯಾರ್ಕ್‌ (ಜ.5): ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಒಬ್ಬನ ಬಂಧನವಾಗಿದೆ. ಓಹಿಯೋದಲ್ಲಿರುವ ಜೆಡಿ ವ್ಯಾನ್ಸ್‌ ಅವರ ಮೇಲೆ ದಾಳಿ ನಡೆದಿದ್ದು, ಘಟನೆಯ ಬೆನ್ನಲ್ಲಿಯೇ ಅಮೆರಿಕದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯ ಸಮಯದಲ್ಲಿ ವ್ಯಾನ್ಸ್ ಕುಟುಂಬವು ಮನೆಯಲ್ಲಿ ಇದ್ದಿರಲಿಲ್ಲ. ಇನ್ನು ಗುಂಡಿನ ದಾಳಿ ನಡೆಸಿದ ವ್ಯಕ್ತಿ ಉಪಾಧ್ಯಕ್ಷರ ನಿವಾಸಕ್ಕೆ ಪ್ರವೇಶಿಸಿದ್ದ ಎನ್ನುವುದನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ ಎಂದು ಫೆಡರಲ್ ಕಾನೂನು ಜಾರಿ ಮೂಲವನ್ನು ಉಲ್ಲೇಖಿಸಿ ವರದಿಯಾಗಿದೆ.

ವೈರಲ್‌ ಆಗಿರುವ ಪೋಟೋದಲ್ಲಿ ಜೆಡಿ ವ್ಯಾನ್ಸ್‌ ಅವರ ಮನೆಯ ಕಿಟಿಕಿಯ ಗಾಜುಗಳಿಗೆ ಹಾನಿಯಾಗಿದ್ದನ್ನು ತೋರಿಸಿವೆ. ಕಾನೂನು ಜಾರಿ ಅಧಿಕಾರಿಯ ಪ್ರಕಾರ, ವಶಕ್ಕೆ ಪಡೆದಿರುವ ವ್ಯಕ್ತಿ ವ್ಯಾನ್ಸ್ ಅಥವಾ ಅವರ ಕುಟುಂಬವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದನೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಮೆರಿಕ ಸರ್ಕಾರವು ವೆನೆಜುವೆಲಾದ ಮೇಲೆ ದಾಳಿ ಮಾಡಿ, ಅಧ್ಯಕ್ಷನನ್ನು ಬಂಧನ ಮಾಡಿರುವುದಕ್ಕೆ ಜಗತ್ತಿನಿಂದ ಟೀಕೆಗಳು ಎದುರಿಸುತ್ತಿರುವ ಸಮಯದಲ್ಲಿ ಘಟನೆ ನಡೆದಿದೆ. ಅಮೆರಿಕದ ಕ್ರಮವನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಟೀಕಿಸಲಾಗಿದೆ.

ಶ್ವೇತಭವನದಿಂದ ಇನ್ನೂ ಪ್ರಕಟವಾಗದ ಮಾಹಿತಿ

ಸಿನ್ಸಿನಾಟಿಯ ಓಹಿಯೋದಲ್ಲಿ ಅವರ ನಿವಾಸವಿದ್ದು, ಭಾನುವಾರ ಮುಂಜಾನೆ 12.15ರ ಸುಮಾರಿಗೆ ಒಬ್ಬ ವ್ಯಕ್ತಿ ಜೆಡಿ ವಾನ್ಸ್‌ ಮನೆಯ ಸಮೀಪ ಓಡುತ್ತಿದ್ದ ಎಂದು ಹೇಳಲಾಗಿದೆ. ಶಂಕಿತ ವ್ಯಕ್ತಿಗೆ ಉಪಾಧ್ಯಕ್ಷರ ಮನೆಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಘಟನೆಯನ್ನು ಜೆಡಿ ವ್ಯಾನ್ಸ್ ಅಥವಾ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂದು ಕಂಡುಹಿಡಿಯಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ಈ ವಿಷಯದ ಬಗ್ಗೆ ಮಾಧ್ಯಮಗಳು ಶ್ವೇತಭವನ ಮತ್ತು ರಹಸ್ಯ ಸೇವೆಯಿಂದ ಮಾಹಿತಿ ಕೋರಿವೆ, ಆದರೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವ್ಯಾನ್ಸ್ ಕಳೆದ ವಾರದಿಂದ ಸಿನ್ಸಿನಾಟಿಯಲ್ಲಿದ್ದರು ಆದರೆ ಭಾನುವಾರ ಮಧ್ಯಾಹ್ನ ನಗರವನ್ನು ತೊರೆದರು. ಸುಮಾರು 2.3 ಎಕರೆ ವಿಸ್ತೀರ್ಣದ ಮನೆಗಾಗಿ ಅವರು ಸುಮಾರು $1.4 ಮಿಲಿಯನ್ ಖರ್ಚು ಮಾಡಿದ್ದಾರೆ.

Scroll to load tweet…

ಕುಟುಂಬದೊಂದಿಗೆ ಓಹಿಯೋದಲ್ಲಿ ವಾಸವಿರುವ ಜೆಡಿ ವ್ಯಾನ್ಸ್‌

ವೈಟ್ ಹೌಸ್ ವೆಬ್‌ಸೈಟ್ ಪ್ರಕಾರ, ಜೆ.ಡಿ. ವ್ಯಾನ್ಸ್ ತಮ್ಮ ಕುಟುಂಬದೊಂದಿಗೆ ಓಹಿಯೋದ ಸಿನ್ಸಿನಾಟಿಯಲ್ಲಿ ವಾಸಿಸುತ್ತಿದ್ದಾರೆ. ಅವರು 1984 ಆಗಸ್ಟ್ 2 ರಂದು ಅಮೆರಿಕದ ಓಹಿಯೋ ರಾಜ್ಯದಲ್ಲಿ ಸ್ಕಾಟಿಷ್-ಐರಿಶ್ ಕುಟುಂಬದಲ್ಲಿ ಜನಿಸಿದರು. ಜೆಡಿ ಅವರ ತಾಯಿ ಬೆವರ್ಲಿ ಐಕಿನ್ಸ್ ಮತ್ತು ಅವರ ಎರಡನೇ ಪತಿ ಡೊನಾಲ್ಡ್ ಬೌಮನ್ ಅವರ ಮಗ. ಜೆಡಿ ಜನಿಸಿದಾಗ, ಅವರ ಕುಟುಂಬ ಅತೀವ ಕಷ್ಟದಲ್ಲಿತ್ತು. ತಮ್ಮ ಬಾಲ್ಯವನ್ನು ಕಡುಬಡತನದಲ್ಲೇ ಕಳೆದಿದ್ದಾಗಿ ವ್ಯಾನ್ಸ್‌ ಹೇಳಿದ್ದರು.

ಜೆಡಿ ಕೆಲವೇ ತಿಂಗಳುಗಳ ಮಗುವಾಗಿದ್ದಾಗ, ಅವರ ಪೋಷಕರು ವಿಚ್ಛೇದನ ಪಡೆದರು. ಎರಡು ವರ್ಷಗಳ ನಂತರ, ಬೆವರ್ಲಿ ಬಾಬ್ ಹ್ಯಾಮೆಲ್ ಅವರನ್ನು ವಿವಾಹವಾದರು. ಇದರ ನಡುವೆ, ಜೆಡಿಯ ತಾಯಿ ಬೆವರ್ಲಿ ಆರ್ಥಿಕ ತೊಂದರೆಗಳಿಂದಾಗಿ ಡ್ರಗ್ಸ್ ಮತ್ತು ಮದ್ಯದ ವ್ಯಸನಿಯಾದರು. ಹೀಗಾಗಿ ಜೆಡಿ ತನ್ನ ಬಾಲ್ಯವನ್ನು ತನ್ನ ತಾಯಿಯ ಅಜ್ಜ ಜೇಮ್ಸ್ ವ್ಯಾನ್ಸ್ ಮತ್ತು ಅವರ ತಾಯಿಯ ಅಜ್ಜಿ ಬೋನಿ ವ್ಯಾನ್ಸ್ ಅವರೊಂದಿಗೆ ಕಳೆದರು. "ಹಿಲ್ಬಿಲ್ಲಿ ಎಲಿಜಿ: ಎ ಮೆಮೊಯಿರ್ ಆಫ್ ಎ ಫ್ಯಾಮಿಲಿ ಅಂಡ್ ಕಲ್ಚರ್ ಇನ್ ಕ್ರೈಸಿಸ್" ಎಂಬ ತನ್ನ ಬಾಲ್ಯದ ಪುಸ್ತಕದಲ್ಲಿ, ಜೆಡಿ ಈ ಬಗ್ಗೆ ಬರೆದುಕೊಂಡಿದ್ದು, "ನನ್ನ ತಾಯಿಯ ಆಗಾಗ್ಗೆ ಮನೆ ಬದಲಾವಣೆಗಳು ನನಗೆ ಇಷ್ಟವಾಗಲಿಲ್ಲ. ನನ್ನ ಅಜ್ಜಿಯ ಮನೆಯಲ್ಲಿ ಉಳಿಯುವುದು ನನಗೆ ಇಷ್ಟವಾಯಿತು' ಎಂದಿದ್ದರು.