ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಗಡಿಯಲ್ಲಿ ಎರಡೂ ದೇಶಗಳು ದಾಳಿ-ಪ್ರತಿದಾಳಿ ನಡೆಸಿವೆ. ಈ ವೇಳೆ ಅಫ್ಘಾನಿಸ್ತಾನದ 15 ನಾಗರಿಕರು ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್‌: ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಗಡಿಯಲ್ಲಿ ಎರಡೂ ದೇಶಗಳು ದಾಳಿ-ಪ್ರತಿದಾಳಿ ನಡೆಸಿವೆ. ಈ ವೇಳೆ ಅಫ್ಘಾನಿಸ್ತಾನದ 15 ನಾಗರಿಕರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ 40 ಆಫ್ಘನ್‌ ಸೈನಿಕರನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್‌ ಹೇಳಿಕೊಂಡಿದೆ. ಇತ್ತ ಪಾಕಿಸ್ತಾನದ ಹಲವಾರು ಭದ್ರತಾ ಹೊರಠಾಣೆಗಳು, ಟ್ಯಾಂಕ್‌ಗಳು ಮತ್ತು ಸೈನಿಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿದ್ದಾಗಿ ಅಫ್ಘಾನಿಸ್ತಾನ ಹೇಳಿಕೆ ನೀಡಿದೆ. ಭೀಕರ ಸಂಘರ್ಷಕ್ಕೆ ಉದಾಹರಣೆಯಂತೆ ರಸ್ತೆಯಲ್ಲೇ ಯುದ್ಧ ಟ್ಯಾಂಕರ್‌ಗಳು ಸಂಚರಿಸುತ್ತಿರುವ ವಿಡಿಯೋಗಳು ವೈರಲ್‌ ಆಗಿದೆ.

ಈ ನಡುವೆ ತಾಲಿಬಾನ್‌ ದಾಳಿಗೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಸರ್ಕಾರ, ತಾಲಿಬಾನ್‌ ಸರ್ಕಾರದೊಂದಿಗೆ ಮಾತುಕತೆ ಬಯಸಿದೆ. ಆದರೆ ಪಾಕ್‌ ಸಚಿವರ ದೇಶ ಪ್ರವೇಶಕ್ಕೆ ಆಫ್ಘನ್‌ ಸರ್ಕಾರ ಅನುಮತಿ ನಿರಾಕರಿಸಿದೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಕತಾರ್‌ ಮತ್ತು ಸೌದಿ ಅರೇಬಿಯಾಕ್ಕೆ ಪಾಕ್‌ ಮೊರೆ ಇಟ್ಟಿದೆ.

ಅದರ ಬೆನ್ನಲ್ಲೇ ತಾಲಿಬಾನ್ ಆಡಳಿತ ಬುಧವಾರ ಸಂಜೆಯಿಂದ ಜಾರಿಗೆ ಬರುವಂತೆ 48 ಗಂಟೆಗಳ ತಾತ್ಕಾಲಿ ಕದನ ವಿರಾಮಕ್ಕೆ ಒಪ್ಪಿದೆ. ಈ ಅವಧಿಯಲ್ಲಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

ಸಂಘರ್ಷ ತಂದಿಟ್ಟ ಟಿಟಿಪಿ

ಇಸ್ಲಾಮಾಬಾದ್‌: ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್‌- ಇ- ತಾಲಿಬಾನ್‌ ಪಾಕಿಸ್ತಾನವು (ಟಿಟಿಪಿ) ಪಾಕ್‌ ಮತ್ತು ಅಫ್ಘಾನಿಸ್ತಾನದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ‘ಪಾಕಿಸ್ತಾನ ತಾಲಿಬಾನ್‌’ ಎಂದೇ ಕುಖ್ಯಾತಿ ಪಡೆದಿರುವ ಈ ಸಂಘಟನೆ ಪಾಕ್‌ ಸರ್ಕಾರವನ್ನು ಕಿತ್ತೆಸೆದು, ಕಟ್ಟರ್‌ ಇಸ್ಲಾಮಿಕ್‌ ನಿಯಮದಡಿ ಅಧಿಕಾರಕ್ಕೇರುವ ಗುರಿ ಹೊಂದಿದೆ.

2007ರಿಂದ ಪೇಶಾವರ ಶಾಲೆಯ ನರಮೇಧ ಸೇರಿ ಹಲವು ಉಗ್ರಕೃತ್ಯಗಳನ್ನು ಎಸಗಿದೆ. ಈ ಸಂಘಟನೆಗೆ ಅಪ್ಘಾನಿಸ್ತಾನ ಆಶ್ರಯ ಕೊಟ್ಟಿದೆ ಎಂಬುದು ಪಾಕ್‌ನ ಆರೋಪ. ಕಳೆದ ವಾರ, ಟಿಟಿಪಿ ಮುಖ್ಯಸ್ಥ ನೂರ್‌ ವಾಲಿ ಮೆಹಸೂದ್‌ ಕಾಬುಲ್‌ನಲ್ಲಿ ಸಂಚರಿಸುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಅವನನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.