ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಭಾರತ ಮತ್ತು ಹಿಂದೂ ವಿರೋಧಿ ಹಿಂಸಾಚಾರಕ್ಕೆ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವೇ ಕಾರಣ ಎಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ. ವಿದ್ಯಾರ್ಥಿ ನಾಯಕ ಹತ್ಯೆಯ ನಂತರ ಭುಗಿಲೆದ್ದಿರುವ ಈ ಗಲಭೆಗಳು ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದಿದ್ದಾರೆ
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ತೀವ್ರಗೊಂಡಿರುವ ಭಾರತ ಮತ್ತು ಹಿಂದೂ ವಿರೋಧಿ ಪ್ರತಿಭಟನೆಗಳನ್ನು ಭಾರತದ ರಾಜಾಶ್ರಯದಲ್ಲಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಗೆ ನೇರವಾಗಿಯೇ ಅಥವಾ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಎಎನ್‌ಐ ಮಾಧ್ಯಮ ಸಂಸ್ಥೆಗೆ ಇ-ಮೇಲ್ ಮೂಲಕ ನೀಡಿದ ಸಂದರ್ಶನದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಶೇಖ್ ಹಸೀನಾ “ವ್ಯವಸ್ಥಿತ ಪಿತೂರಿ” ಎಂದು ಖಂಡಿಸಿದ್ದಾರೆ. ಮೊಹಮ್ಮದ್ ಯೂನಸ್ ಸರ್ಕಾರದ ವಿರುದ್ಧ ಅವರು ನಡೆಸಿರುವ ಈ ತೀವ್ರ ವಾಗ್ದಾಳಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಶೇಖ್ ಹಸೀನಾ ದೂರುತ್ತಿರುವುದೇನು?
ಭಾರತ ವಿರೋಧಿ ದ್ವೇಷವನ್ನು ಮೊಹಮ್ಮದ್ ಯೂನಸ್ ಆಡಳಿತವು ಉಗ್ರ ಸಂಘಟನೆಗಳ ನೆರವಿನಿಂದ ಜಾಣ್ಮೆಯಿಂದ ಹರಡುತ್ತಿದೆ. ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿ, ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ನಡೆದ ಹಿಂಸಾಚಾರ ಎಲ್ಲವೂ ಯೂನಸ್ ಸರ್ಕಾರದ ಸಂಚಿನ ಭಾಗವಾಗಿವೆ” ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಇದಲ್ಲದೆ, ಯೂನಸ್ ಅವರು ಅಮಾನವೀಯ ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಸರ್ಕಾರದ ಸೂಕ್ಷ್ಮ ಸ್ಥಾನಗಳಿಗೆ ನೇಮಿಸಿದ್ದಾರೆ. ಶಿಕ್ಷೆಗೊಳಗಾದ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿ, ಅವರಿಂದ ದೇಶದಲ್ಲಿ ಅಶಾಂತಿ ಮತ್ತು ದಂಗೆಗಳನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯನ್ನು ಶೇಖ್ ಹಸೀನಾ ಅತ್ಯಂತ ಹೇಯ ಮತ್ತು ಖಂಡನೀಯ ಕೃತ್ಯ ಎಂದು ವಿವರಿಸಿದ್ದಾರೆ. ಈ ವಿಷಯದಲ್ಲಿ ಭಾರತದ ಆತಂಕಗಳು ಸಂಪೂರ್ಣವಾಗಿ ಸಮರ್ಥನೀಯವಾಗಿವೆ. ಯಾವುದೇ ಜವಾಬ್ದಾರಿಯುತ ಸರ್ಕಾರ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯನ್ನು ಕಾಪಾಡುವ ಕರ್ತವ್ಯ ಹೊಂದಿರುತ್ತದೆ. ಆದರೆ ಯೂನಸ್ ಸರ್ಕಾರ ಉದ್ದೇಶಪೂರ್ವಕವಾಗಿ ಭಾರತದೊಂದಿಗೆ ಇರುವ ರಾಜತಾಂತ್ರಿಕ ಸಂಬಂಧಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿರುವ ಶೇಖ್ ಹಸೀನಾ ಕಿಡಿಕಾರಿದ್ದಾರೆ.
ಭಾರತೀಯ ವೀಸಾ ಸೇವೆ ತಾತ್ಕಾಲಿಕವಾಗಿ ಸ್ಥಗಿತ
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪ್ರತಿಭಟನೆಗಳು ಕೇವಲ ಭಾರತ ವಿರೋಧಿ ಭಾವನೆಗಳನ್ನು ಮಾತ್ರವಲ್ಲದೆ, ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧ ಪೈಶಾಚಿಕ ದಾಳಿಗಳಿಗೆ ಪ್ರೇರಣೆಯಾಗಿದೆ ಎನ್ನಲಾಗಿದೆ. ಈ ಹಿಂಸಾಚಾರದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿನ ಭಾರತೀಯ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಘಟನೆ ಹಿನ್ನೆಲೆ
ಹಸೀನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಟ್ಟರ್ ಇಸ್ಲಾಮಿಕ್ ಯುವ ನಾಯಕನೊಬ್ಬನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಾದ ನಂತರ ಬಾಂಗ್ಲಾದಲ್ಲಿ ಮತ್ತೆ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಭಾರತ ಹಾಗೂ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಹಿಂದೂ ಯುವಕನೊಬ್ಬನನ್ನು ಬಡಿದು ಕೊಂದು ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಭಾರತ ರಾಯಭಾರಿ ಮನೆಯ ಮೇಲೆ ಕಲ್ಲೆಸೆಯಲಾಗಿದೆ. ಭಾರತ ಹಾಗೂ ಹಿಂದು ವಿರೋಧಿ ಘೋಷಣೆಗಳು ಪ್ರತಿಧ್ವನಿಸುತ್ತಿದೆ. ಬಾಂಗ್ಲಾದ ಮೈಮೆನ್ಸಿಂಗ್ ಜಿಲ್ಲೆಯ ದುಬಾಲಿಯಾ ಪ್ಯಾರಾದಲ್ಲಿ ದುಷ್ಕರ್ಮಿಗಳ ಗುಂಪು ಹಿಂದೂ ಯುವಕ ದೀಪು ಚಂದ್ರ ದಾಸ್ (25) ಎಂಬಾತನನ್ನು ಥಳಿಸಿ ಕೊಂದಿತು. ಬಳಿಕ ಆತನ ದೇಹಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆಯಿತು. ಪ್ರವಾದಿ ಮೊಹಮ್ಮದ್ ಪೈಗಂಬರರನ್ನು ನಿಂದಿಸಿದ ಆರೋಪವನ್ನು ದೀಪು ಚಂದ್ರ ದಾಸ್ ಮೇಲೆ ಹೊರಿಸಲಾಯ್ತು. ವಿಕೃತವಾಗಿ ಕೊಂದ ಬಳಿಕ ಹೆಣವನ್ನು ಮರಕ್ಕೆ ನೇತು ಹಾಕಿ ಬೆಂಕಿ ಹಚ್ಚಲಾಯ್ತು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯ್ತು. ಭಾರತೀಯರನ್ನು ಮತ್ತು ಹಿಂದೂಗಳನ್ನು ಟಾರ್ಗೆಟ್ ಮಾಡಲಾಯ್ತು.
ಷರೀಫ್ ಉಸ್ಮಾನ್ ಹಾದಿ ಅವರು 2024ರಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ವಿದ್ಯಾರ್ಥಿ ಚಳುವಳಿಯ ಪ್ರಮುಖ ನಾಯಕನಾಗಿದ್ದರು. ಅಲ್ಲದೆ, ಶೇಖ್ ಹಸೀನಾ ಅವರಿಗೆ ಭಾರತ ರಾಜಕೀಯ ಆಶ್ರಯ ನೀಡಿದ್ದನ್ನು ವಿರೋಧಿಸಿ, ಅವರು ನಿರಂತರವಾಗಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಅವರ ಹತ್ಯೆಯು ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದ್ದು, ಆಡಳಿತವು ಈ ಸ್ಥಿತಿಗತಿಗಳ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಷರೀಫ್ ಉಸ್ಮಾನ್ ಹಾದಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಮೊಹಮ್ಮದ್ ಯೂನಸ್ ಅವರು ಭಾರತ ವಿರೋಧಿ ಭಾವನೆಗಳನ್ನು ಮತ್ತಷ್ಟು ಉರಿ ಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಬಾಂಗ್ಲಾದೇಶದ ಯುವಜನತೆ ಹಾದಿಯವರ ಆದರ್ಶಗಳನ್ನು ಅನುಸರಿಸಬೇಕು. ಅವರು ಗುರುತಿಸಿದ್ದ ಬಾಂಗ್ಲಾದೇಶದ ಶತ್ರುಗಳನ್ನು ನೀವೂ ಗುರುತಿಸಬೇಕು ಎಂದು ಯೂನಸ್ ನೀಡಿದ ಕರೆ ವಿವಾದಕ್ಕೆ ಕಾರಣವಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳಿಗೆ ಮೊಹಮ್ಮದ್ ಯೂನಸ್ ಸರ್ಕಾರದ ಮೌನಸಮ್ಮತಿ ಅಥವಾ ನೇರ ಬೆಂಬಲವಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಪ್ರಸ್ತುತ ಬಾಂಗ್ಲಾದೇಶದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿ ಗಂಭೀರ ಹಂತ ತಲುಪಿದ್ದು, ಇದು ದ್ವಿಪಕ್ಷೀಯ ಸಂಬಂಧಗಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.


