ಇಸ್ಲಮಾಬಾದ್(ಜ.10): ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್‌ನಲ್ಲಿ ಶನಿವಾರ ರಾತ್ರಿ ತಾಂತ್ರಿಕ ದೋಷ ಎದುರಾಗಿದ್ದು, ವಿದ್ಯುತ್‌ ವ್ಯತ್ಯಯದಿಂದಾಗಿ ಪಾಕಿಸ್ತಾನವಿಡೀ ಕತ್ತಲಲ್ಲಿ ಮುಳುಗಿದೆ.

ಪಾಕಿಸ್ತಾನದಲ್ಲಿ ವಿದ್ಯುತ್ ಪೂರೈಕೆಯಲ್ಲಿ ದಿಢೀರ್‌ ಸಮಸ್ಯೆ ಉಂಟಾಗಿದ್ದು, ದೇಶದ ಪ್ರಮುಖ ನಗರದೆಲ್ಲೆಡೆ ಕತ್ತಲು ಆವರಿಸಿದೆ. ಕರಾಚಿ, ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಮುಲ್ತಾನ್‌ ಮತ್ತು ಇತರ ಪ್ರಮುಖ ನಗರಗಳ ನಾಗರಿಕರು ವಿದ್ಯುತ್‌ ಪೂರೈಕೆ ಇಲ್ಲದೇ ಕಂಗಾಲಾಗಿದ್ದಾರೆ.

ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ವ್ಯವಸ್ಥೆಯ ಹಠಾತ್‌ ಸ್ಥಗಿತದ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ಎನ್‌ಟಿಡಿಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸರಣೆಯಲ್ಲಿನ ಆವರ್ತನ ಸಂಖ್ಯೆಯು 50ರಿಂದ ದಿಢೀರ್‌ ಸೊನ್ನೆಗೆ ಕುಸಿದಿದೆ. ಹೀಗಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಕುಸಿತಕ್ಕೆ ಕಾರಣವೇನು ಎಂಬುದನ್ನು ನಾವು ಪತ್ತೆ ಮಾಡುತ್ತಿದ್ದೇವೆ ಎಂದು ಇಂಧನ ಸಚಿವ ಒಮರ್‌ ಅಯೂಬ್‌ ಟ್ವೀಟ್‌ ಮಾಡಿದ್ದಾರೆ. 

ಅತ್ತ ಇಸ್ಲಾಮಾಬಾದ್‌ನ ಉಪ ಆಯುಕ್ತ ಹಮ್ಜಾ ಶಫ್ಕತ್‌, 'ರಾತ್ರಿ 11.41 ಕ್ಕೆ ಸಿಂಧ್ ಪ್ರಾಂತ್ಯದ ಗುಡ್ಡು ವಿದ್ಯುತ್ ಸ್ಥಾವರದಲ್ಲಿ ದೋಷ ಕಂಡುಬಂದಿದೆ. ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ಕಂಪನಿಯ ವಿದ್ಯುತ್‌ ಮಾರ್ಗಗಳು ಟ್ರಿಪ್‌ ಆಗಿವೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ವಿದ್ಯುತ್ ವ್ಯತ್ಯಯ ಭಾರತ ಹಾಗೂ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ #blackout ಭಾರೀ ಟ್ರೆಂಡ್ ಆಗಿದೆ.