ಸೆನೆಗಲ್ ಅಧ್ಯಕ್ಷ ಫಾಯ್, ತಮ್ಮ ಭಾವಚಿತ್ರಗಳ ಬದಲು ಮಕ್ಕಳ ಚಿತ್ರಗಳನ್ನು ಕಚೇರಿಯಲ್ಲಿ ಇರಿಸಲು ಹೇಳಿದ್ದಾರೆ. ನಾಯಕರು ವೈಭವೀಕರಣಕ್ಕಿಂತ ಹೆಚ್ಚಾಗಿ, ದೇಶ ಸೇವೆಗೆ ಆದ್ಯತೆ ನೀಡಬೇಕು. ಭಾರತದಲ್ಲಿ ರಾಜಕಾರಣಿಗಳ ವೈಯಕ್ತಿಕ ಪ್ರದರ್ಶನ ಹೆಚ್ಚಾಗಿದ್ದು, ಭ್ರಷ್ಟಾಚಾರ ಮುಂದುವರೆದಿದೆ. ಫಾಯ್ ಅವರ ಮೌಲ್ಯಾಧಾರಿತ ನಾಯಕತ್ವವು ಭಾರತಕ್ಕೆ ಮಾದರಿಯಾಗಬಲ್ಲದು, ಇದು ಜನಕೇಂದ್ರಿತ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ. (50 ಪದಗಳು)

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಸೆನೆಗಲ್ ದೇಶದ ಯುವ ಅಧ್ಯಕ್ಷರಾದ ಬಸಿರೌ ದಿಯೊಮೈ ಫಾಯ್ ಒಂದು ಆಸಕ್ತಿಕರ ಹೇಳಿಕೆಯೊಂದನ್ನು ನೀಡಿದ್ದಾರೆ. "ನಿಮ್ಮ ಕಚೇರಿಗಳಲ್ಲಿ ನನ್ನ ಛಾಯಾಚಿತ್ರಗಳನ್ನು ಇಟ್ಟುಕೊಳ್ಳುವುದು ನನಗೆ ಬೇಕಾಗಿಲ್ಲ. ಯಾಕೆಂದರೆ, ನಾನು ದೇವರೂ ಅಲ್ಲ, ಎಲ್ಲರಿಗೂ ಮಾದರಿಯಾದವನೂ ಅಲ್ಲ. ನಾನು ಕೇವಲ ದೇಶದ ಸೇವಕ. ‌ನನ್ನ ಬದಲಿಗೆ, ನೀವು ನಿಮ್ಮ ಮಕ್ಕಳ ಫೋಟೋಗಳನ್ನು ನಿಮ್ಮ ಕಚೇರಿಗಳಲ್ಲಿ ಅಳವಡಿಸಿ. ನೀವು ಏನಾದರೂ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ, ನಿಮ್ಮ ಮಕ್ಕಳ ಚಿತ್ರವನ್ನು ಒಮ್ಮೆ ನೋಡಿ. ಒಂದು ವೇಳೆ ಏನನ್ನಾದರೂ ಕದಿಯುವ, ಭ್ರಷ್ಟಾಚಾರ ಮಾಡುವ ಆಲೋಚನೆ ಮೂಡಿದರೆ, ನಿಮ್ಮ ಕುಟುಂಬದ ಛಾಯಾಚಿತ್ರವನ್ನು ಒಮ್ಮೆ ಚೆನ್ನಾಗಿ ನೋಡಿಕೊಳ್ಳಿ. ಅವರು ದೇಶಕ್ಕೆ ದ್ರೋಹ ಬಗೆದ ದ್ರೋಹಿಯೊಬ್ಬನ ಕುಟುಂಬದವರು ಎನಿಸಿಕೊಳ್ಳಬೇಕೇ ಎಂದು ಯೋಚಿಸಿ" ಎಂದು ಅವರು ಹೇಳಿದ್ದರು.

ಸುನಿತಾ ವಿಲಿಯಮ್ಸ್ ಅಸಾಧಾರಣ ಸಾಹಸ: ಮುಕ್ತಾಯಗೊಳ್ಳಲಿದೆ ಸುದೀರ್ಘ ಬಾಹ್ಯಾಕಾಶ ವಾಸ

ಈ ಮಾತುಗಳು ನಿಜವಾಗಿಯೂ ದೇಶದ ಪ್ರಜೆಗಳಲ್ಲಿ ಸ್ಫೂರ್ತಿ ತುಂಬುವಂತಹದ್ದಾಗಿವೆ. ಫಾಯ್ ಹೇಳಿಕೆ ಅವರಲ್ಲಿರುವ ವಿನಯ, ನಾಯಕತ್ವದಲ್ಲಿನ ಜವಾಬ್ದಾರಿ, ಮತ್ತು ದೇಶದ ನಾಯಕರು ತಮ್ಮ ಸ್ವಾರ್ಥ ಸಾಧನೆ ಮತ್ತು ಅಧಿಕಾರದ ವಾಂಛೆಗಿಂತ, ತಮ್ಮ ಕುಟುಂಬ ಮತ್ತು ದೇಶದ ಹಿತವನ್ನು ರಕ್ಷಿಸಬೇಕು ಎಂಬ ಸಂದೇಶವ‌ನ್ನು ನೀಡಿದೆ. ಅವರ ಹೇಳಿಕೆ ಭಾರತದಲ್ಲಿರುವ ರಾಜಕೀಯ ಅಭ್ಯಾಸಗಳಿಗೆ ಅತ್ಯಂತ ವ್ಯತಿರಿಕ್ತವಾಗಿದೆ. ಇಲ್ಲಿ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಪಕ್ಷಗಳ ಕಟ್ಟಡಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕಾರಣಿಗಳ ಚಿತ್ರಗಳು, ಫ್ಲೆಕ್ಸ್ ಬ್ಯಾನರ್‌ಗಳೇ ರಾರಾಜಿಸುತ್ತಿರುತ್ತವೆ. ಇಂತಹ ಅಭ್ಯಾಸ ರಾಜಕಾರಣಿಗಳ ವೈಯಕ್ತಿಕ ವೈಭವೀಕರಣದ ಸಂಸ್ಕೃತಿಯನ್ನು ಉತ್ತೇಜಿಸಿ, ರಾಜಕಾರಣಿಗಳು ಜನ ಸೇವಕರು ಎನ್ನುವುದಕ್ಕಿಂತಲೂ, ಅವರು ಎಲ್ಲರಿಗಿಂತ ಮಿಗಿಲಾದವರು ಎಂಬ ತಪ್ಪು ಸಂದೇಶ ರವಾನಿಸುತ್ತದೆ. ಬಹಳಷ್ಟು ಭಾರತೀಯ ರಾಜಕಾರಣಿಗಳು ತಮ್ಮ ಸ್ವಯಂ ಪ್ರದರ್ಶನಕ್ಕೆ ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುವುದಕ್ಕೇ ಆದ್ಯತೆ ನೀಡುತ್ತಾರೆ. ಇದು ಉತ್ತಮ ಆಡಳಿತ, ಸೇವೆಗಿಂತಲೂ ಹೆಚ್ಚಾಗಿ, ಅವರ ವೈಯಕ್ತಿಕ ಬ್ರ್ಯಾಂಡಿಂಗ್ ನಡೆಸಲು ಮಾತ್ರವೇ ನೆರವಾಗುತ್ತದೆ.

ಹಲವಾರು ಭ್ರಷ್ಟಾಚಾರ ನಿಗ್ರಹದ ಕ್ರಮಗಳನ್ನು ಕೈಗೊಂಡ ಬಳಿಕವೂ, ಭಾರತೀಯ ರಾಜಕಾರಣದಲ್ಲಿರುವ ಭ್ರಷ್ಟಾಚಾರ ದೇಶಕ್ಕೆ ಬಹುದೊಡ್ಡ ಸವಾಲಾಗಿಯೇ ಮುಂದುವರಿದಿದೆ. ರಾಜಕಾರಣಿಗಳು ಸಾರ್ವಜನಿಕ ನಿಧಿಯ ದುರ್ಬಳಕೆ ನಡೆಸುವುದು, ಅಧಿಕಾರವನ್ನು ಸ್ವಹಿತಕ್ಕಾಗಿ ಬಳಸುವುದು ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕಿದೆ. ಫಾಯ್ ಅವರ ಸಂದೇಶ ಮೌಲ್ಯಯುತ ನಾಯಕತ್ವದ ಅವಶ್ಯಕತೆಯನ್ನು ಎತ್ತಿ ತೋರುತ್ತದೆ. ನಾಯಕರು ತಮ್ಮ ನಿರ್ಧಾರಗಳು ತಮ್ಮ ಕುಟುಂಬ ಮತ್ತು ಸಮಾಜದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಸರಿಯಾಗಿ ಆಲೋಚಿಸಿದರೆ, ಬಹುಶಃ ಅವರು ಹೆಚ್ಚು ಜವಾಬ್ದಾರಿಯುತವಾಗಿ, ಸಂವೇದನೆಯಿಂದ ಕಾರ್ಯ ನಿರ್ವಹಿಸಬಹುದೇನೋ.

ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!

ಕುಟುಂಬ ರಾಜಕಾರಣ ಮತ್ತು ಸ್ವಜನ ಪಕ್ಷಪಾತ ಭಾರತೀಯ ರಾಜಕಾರಣದಲ್ಲಿ ಹಾಸುಹೊಕ್ಕಾಗಿ ಬಂದಿದ್ದು, ಹಲವಾರು ತಲೆಮಾರುಗಳು ಉರುಳಿದರೂ ರಾಜಕೀಯ ಕುಟುಂಬಗಳು ತಮ್ಮ ಪಾರಮ್ಯ ಮೆರೆಯುವುದನ್ನು ಮುಂದುವರಿಸಿವೆ. ಇದರ ಪರಿಣಾಮವಾಗಿ, ಉತ್ತಮ, ಯುವ ನಾಯಕತ್ವ ಮತ್ತು ವೈವಿಧ್ಯಮಯ ಆಲೋಚನೆಗಳು ನಮಗೆ ಲಭಿಸುವುದೇ ಇಲ್ಲ. ಫಾಯ್ ನಾಯಕತ್ವ ನಾಯಕರ ಆರಾಧನೆಯನ್ನು ವಿರೋಧಿಸಿದ್ದು, ಸೇವಾಧಾರಿತವಾದ ವಿಧಾನವನ್ನು ಅನುಸರಿಸುತ್ತದೆ. ಈ ಮೂಲಕ ಕುಟುಂಬ ರಾಜಕಾರಣದ ಬದಲಿಗೆ, ಅರ್ಹತೆ ಮತ್ತು ಸೇವಾಧಾರಿತ ರಾಜಕಾರಣ ನಡೆಸಲು ಸಾಧ್ಯವಾಗುತ್ತದೆ.

ಭಾರತೀಯ ರಾಜಕಾರಣದಲ್ಲಿರುವ ಇನ್ನೊಂದು ಸಮಸ್ಯೆಯೆಂದರೆ, ಒಡೆದು ಆಳುವ ಕಾರ್ಯತಂತ್ರ. ಇಲ್ಲಿನ ನಾಯಕರು ಜನರನ್ನು ಜಾತಿ, ಧರ್ಮ ಅಥವಾ ಪ್ರಾದೇಶಿಕ ಗುರುತಿನ ಆಧಾರದಲ್ಲಿ ವಿಭಜಿಸಿ, ಆ ಮೂಲಕ ತಮ್ಮ ಮತಗಳನ್ನು ಹೆಚ್ಚಿಸಲು, ಅವುಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಾರೆ. ಇದು ಸಾಮಾಜಿಕ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ ಹೊರತು, ಜನರಲ್ಲಿ ಐಕ್ಯತೆ ಮೂಡಿಸಲು ಸಾಧ್ಯವಿಲ್ಲ. ನಾಯಕತ್ವದ ಕುರಿತಂತೆ ಫಾಯ್ ಅವರ ಆಲೋಚನೆಗಳು ದೇಶ ಸೇವೆ ಮತ್ತು ಮೌಲ್ಯಾಧಾರಿತ ಆಡಳಿತವನ್ನು ಆಧರಿಸಿದ್ದು, ಇದು ಭಾರತದ ರಾಜಕಾರಣಕ್ಕೆ ನಿಜಕ್ಕೂ ಮಾರ್ಗದರ್ಶಿ ವಿಧಾನವಾಗಬಹುದು. ಇದು ಭಾರತೀಯ ಸಮಾಜವನ್ನು ಹೆಚ್ಚು ಒಗ್ಗಟ್ಟಿರುವ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜವನ್ನಾಗಿಸಲು ನೆರವಾಗಬಹುದು.

ಒಟ್ಟಾರೆಯಾಗಿ, ಬಸಿರೌ ದಿಯೊಮೈ ಫಾಯ್ ಅವರ ಮಾತುಗಳು ನಾಯಕರು ಸಮಗ್ರತೆ, ಜವಾಬ್ದಾರಿ ಹಾಗೂ ಸಾರ್ವಜನಿಕ ಸೇವೆಗ ಆದ್ಯತೆ ನೀಡಬೇಕು ಎಂಬ ಸಂದೇಶ ರವಾನಿಸಿವೆ. ಅವರ ರಾಜಕೀಯ ವಿಧಾನ ಹೆಚ್ಚು ಮೌಲ್ಯಾಧಾರಿತವಾಗಿದ್ದು, ಭಾರತದ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೋಲಿಸಿದರೆ ಸಂಪೂರ್ಣ ಭಿನ್ನವಾಗಿದೆ. ಒಂದು ವೇಳೆ ಭಾರತೀಯ ರಾಜಕಾರಣಿಗಳು ಒಂದಷ್ಟು ವಿನಯ, ಮತ್ತು ನೈಜ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡರೆ, ಅದರಿಂದ ನೈತಿಕವಾದ, ಜನ ಕೇಂದ್ರಿತವಾದ ರಾಜಕೀಯ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾದೀತು. ಸ್ವಂತ ಲಾಭಕ್ಕಿಂತಲೂ ಸಾರ್ವಜನಿಕ ಹಿತಕ್ಕೆ ಆದ್ಯತೆ ನೀಡಿದರೆ, ಆಗ ಹೆಚ್ಚು ಸದೃಢವಾದ, ಒಗ್ಗಟ್ಟು ಹೊಂದಿರುವ ದೇಶವನ್ನು ನಿರ್ಮಿಸಲು ಸಾಧ್ಯವಾದೀತು.