ಜೆರುಸಲೇಂ(ಮೇ.06): ವಿಶ್ವಾದ್ಯಂತ 2.5 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್‌ ಸಂಹಾರಕ್ಕೆ ಇಸ್ರೇಲ್‌ ವಿಜ್ಞಾನಿಗಳು ಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಆವಿಷ್ಕರಿಸುವಲ್ಲಿ ಸಫಲರಾಗಿದ್ದಾರೆ. ಪ್ರತಿಕಾಯಗಳ ಅಭಿವೃದ್ಧಿ ಹಂತ ಮುಕ್ತಾಯಗೊಂಡಿದ್ದು, ಪೇಟೆಂಟ್‌ ಪಡೆಯುವುದು ಹಾಗೂ ಸಮೂಹ ಉತ್ಪಾದನೆ ಹಂತ ಮಾತ್ರ ಬಾಕಿ ಇದೆ ಎಂದು ಸ್ವತಃ ರಕ್ಷಣಾ ಸಚಿವ ನಾಫ್ತಾಲಿ ಬೆನೆಟ್‌ ಘೋಷಿಸಿದ್ದಾರೆ.

ಕೊರೋನಾಗೆ ಲಸಿಕೆ ಕಂಡುಹಿಡಿಯಲು ವಿಶ್ವಾದ್ಯಂತ 100ಕ್ಕೂ ಅಧಿಕ ಪ್ರಯೋಗಗಳು ನಡೆಯುತ್ತಿರುವಾಗಲೇ, ಇಸ್ರೇಲ್‌ ವಿಜ್ಞಾನಿಗಳು ಆ್ಯಂಟಿಬಾಡಿ ಅಭಿವೃದ್ಧಿಪಡಿಸಿರುವುದರಿಂದ ಕೊರೋನಾಗೆ ಔಷಧ ಸಿಗುವ ದಿನಗಳು ಸಮೀಪಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗುಡ್‌ ನ್ಯೂಸ್ : ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿ!

ಇಸ್ರೇಲ್‌ನ ಜೈವಿಕ ಸಂಶೋಧನಾ ಸಂಸ್ಥೆ (ಐಐಬಿಆರ್‌)ಗೆ ಭೇಟಿ ನೀಡಿದ ಬೆನೆಟ್‌ ಅವರು, ವಿಜ್ಞಾನಿಗಳು ಆ್ಯಂಟಿಬಾಡಿ ಆವಿಷ್ಕರಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಇಸ್ರೇಲ್‌ ವಿಜ್ಞಾನಿಗಳ ಪ್ರತಿಕಾಯಗಳನ್ನು ಕ್ಲಿನಿಕಲ್‌ ಟ್ರಯಲ್‌ಗೆ ಒಳಪಡಿಸಲಾಗಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೂಲಗಳ ಪ್ರಕಾರ, ಒಂದಷ್ಟುಪ್ರಯೋಗಕ್ಕೆ ಒಳಪಡಿಸಲಾಗಿದೆ. ಶೀಘ್ರದಲ್ಲೇ ಈ ಕುರಿತ ಪ್ರಬಂಧವನ್ನು ವಿಜ್ಞಾನಿಗಳು ಮಂಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹೇಗೆ ಕೆಲಸ ಮಾಡುತ್ತೆ?:

ಈ ಆ್ಯಂಟಿಬಾಡಿಗಳನ್ನು ರೋಗಿಗಳ ದೇಹಕ್ಕೆ ಸೇರಿಸಿದರೆ ಅವು ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತವೆ. ಬಳಿಕ ಕೊರೋನಾ ವೈರಾಣುವನ್ನು ನಿಷ್ಕಿ್ರಯಗೊಳಿಸುತ್ತವೆ.