ವಾಷಿಂಗ್ಟನ್(ಫೆ.13): ಕೊಲಂಬಿಯಾದ ಟಾಟಾಕೋವಾ ಮರುಭೂಮಿ ಮತ್ತು ವೆನೆಜುವೆಲಾದ ಉರುಮಾಕೊ ಪ್ರದೇಶದಲ್ಲಿ ಸ್ಟುಪೆಂಡೆಮಿಸ್ ಜಿಯಾಗ್ರಫಿಕಸ್ ಎಂದು ಕರೆಯಲ್ಪಡುವ ಆಮೆಯ ಹೊಸ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

4 ಮೀಟರ್ ಉದ್ದ ಮತ್ತು 1.25  ಟನ್ ಗಾತ್ರದ ಬೃಹತ್ ಆಮೆಯ ಪಳಿಯುಳಿಕೆ ಇದಾಗಿದ್ದು, ಇದುವರೆಗೂ ಪತ್ತೆಯಾದ ಆಮೆ ಪ್ರಭೇದದಲ್ಲೇ ಅತ್ಯಂತ ದೊಡ್ಡ ಆಮೆ ಎಂದು ಹೇಳಲಾಗಿದೆ.

ಸುಮಾರು 13 ದಶಲಕ್ಷ ವರ್ಷಗಳಿಂದ 7 ದಶಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಈ ಬೃಹತ್ ಆಮೆ, ಕಾರಿನ ಗಾತ್ರವನ್ನು ಹೊಂದಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

'ಸೆಕ್ಸ್ ಮಷೀನ್' ಖ್ಯಾತಿಯ ಡೈಗೋಗೆ ಪ್ಲೇ ಬಾಯ್ ಲೈಫಿಂದ ಮುಕ್ತಿ!

ಸ್ಟುಪೆಂಡೆಮಿಸ್ ಗಂಡು ಆಮೆಯ ಕ್ಯಾರಪೇಸ್‌ನ ಎರಡೂ ಬದಿಗಳಲ್ಲಿ ಗಟ್ಟಿಮುಟ್ಟಾದ ಕೊಂಬುಗಳಿದ್ದು, ಇದು ಕುತ್ತಿಗೆಗೆ ಬಹಳ ಹತ್ತಿರದಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಈ ಕುರಿತು ಸೈನ್ಸ್ ಅಡ್ವಾನ್ಸಸ್ ಜರ್ನಲ್’ನಲ್ಲಿ  ಬೊಗೋಟಾದ ಯೂನಿವರ್ಸಿಡಾಡ್ ಡೆಲ್ ರೊಸಾರಿಯೋದ ಪ್ಯಾಲಿಯಂಟಾಲಜಿಸ್ಟ್ ಎಡ್ವಿನ್ ಕ್ಯಾಡೆನಾ ಸಂಶೋಧನಾ ವರದಿ ಪ್ರಕಟಿಸಿದ್ದಾರೆ.

ಸುಮಾರು 70 ದಶಲಕ್ಷ ವರ್ಷಗಳ ಹಿಂದೆ ಡೈನೋಸಾರ್‌ಗಳ ಯುಗದ ಕೊನೆಯಲ್ಲಿ ವಾಸಿಸುತ್ತಿದ್ದ ಈ  ಸ್ಟುಪೆಂಡೆಮಿಸ್ ಪ್ರಭೇದದ ಆಮೆಗಳು ಸುಮಾರು 4.6 ಮೀಟರ್ ಉದ್ದವಾಗಿದ್ದವು ಎನ್ನಲಾಗಿದೆ.

1970 ರ ದಶಕದಲ್ಲಿ ಮೊದಲ ಸ್ಟುಪೆಂಡೆಮಿಸ್ ಪಳೆಯುಳಿಕೆಗಳನ್ನು ಪತ್ತೆ ಹಚ್ಚಲಾಗಿತ್ತಾದರೂ, ಇದೀಗ ಪತ್ತೆಯಾಗಿರುವ ಪಳಿಯುಳಿಕೆಗಳು ಈ ಕುರಿತಾದ ಮಾನವನ ಜ್ಞಾನವನ್ನು ವಿಸ್ತರಿಸಿದೆ ಎಂದು ಎಡ್ವಿನ್ ಕ್ಯಾಡೆನಾ ಹೇಳಿದ್ದಾರೆ.

ಸ್ಟುಪೆಂಡೆಮಿಸ್ ಜಾತಿಯ ಆಮೆಗಳ ಎಲ್ಲಾ ಅಂಗರಚನಾ ಲಕ್ಷಣಗಳನ್ನು ಒಟ್ಟುಗೂಡಿಸಿದರೆ, ಇವು ಸಿಹಿ ನೀರು ಸರೋವರದ ಆಳದಲ್ಲಿ ವಾಸಿಸುತ್ತಿದ್ದವು ಎಂಬುದು ಸ್ಪಷ್ಟವಾಗುತ್ತದೆ ಎಂದು ಕ್ಯಾಡೆನಾ ಸ್ಪಷ್ಟಪಡಿಸಿದ್ದಾರೆ.