ದೇಶದ್ರೋಹ ಆರೋಪಿ ರಷ್ಯಾ ವಿಜ್ಞಾನಿ ನಿಗೂಢ ಸಾವು!
* ವಿದೇಶಗಳ ಪರ ಗೂಢಚಾರಿಕೆ ನಡೆಸುತ್ತಿರುವ ಹಾಗೂ ದೇಶದ್ರೋಹದ ಆರೋಪ
* ಗಂಭೀರ ಆರೋಪ ಹೊತ್ತಿದ್ದ ರಷ್ಯಾ ವಿಜ್ಞಾನಿ ನಿಗೂಢ ಸಾವು
* ಆಸ್ಪತ್ರೆಯಿಂದ ಕರೆದೊಯ್ದು ಜೈಲಿಗೆ ಹಾಕಿದ ಬೆನ್ನಲ್ಲೇ ಸಾವು
ಮಾಸ್ಕೋ(ಜು.06): ವಿದೇಶಗಳ ಪರ ಗೂಢಚಾರಿಕೆ ನಡೆಸುತ್ತಿರುವ ಹಾಗೂ ದೇಶದ್ರೋಹದ ಆರೋಪ ಹೊತ್ತಿದ್ದ ರಷ್ಯಾದ ಪ್ರಖ್ಯಾತ ವಿಜ್ಞಾನಿ ಡಿಮಿಟ್ರಿ ಕೋಲ್ಕರ್ (54) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದೇಶದ್ರೋಹ ಆರೋಪದಲ್ಲಿ ಬಂಧಿತನಾದ ಎರಡೇ ದಿನಕ್ಕೆ ಅವರು ಅಸುನೀಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಡಿಮಿಟ್ರಿ ಅವರನ್ನು ಸೈಬೀರಿಯಾದ ಆಸ್ಪತ್ರೆಯಿಂದ ಬಲವಂತವಾಗಿ ಕರೆದೊಯ್ದ ಅಧಿಕಾರಿಗಳು, ವಿಜ್ಞಾನಿಯನ್ನು ಮಾಸ್ಕೋದ ಜೈಲಿಗೆ ಹಾಕಿದ 2ನೇ ದಿನಕ್ಕೇ ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ ಅವರನ್ನು ಹತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಲೇಸರ್ ವಿಶೇಷಜ್ಞರಾಗಿದ್ದ ಡಿಮಿಟ್ರಿ, ರಷ್ಯಾದ ಹಲವು ರಹಸ್ಯಗಳನ್ನು ಚೀನಾದ ಜೊತೆ ಹಂಚಿಕೊಂಡಿರಬಹುದು ಎಂದು ರಷ್ಯಾ ಸರ್ಕಾರ ಶಂಕಿಸಿತ್ತು. ಅದನ್ನು ಡಿಮಿಟ್ರಿ ಬಲವಾಗಿ ತಳ್ಳಿಹಾಕಿದ್ದರು. ಇದರ ಹೊರತಾಗಿಯೂ ಕ್ಯಾನ್ಸರ್‌ಗೆ ತುತ್ತಾಗಿ ನಡೆದಾದಲೂ ಆಗದ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಮಿಟ್ರಿ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು. ಬಳಿಕ ಅವರನ್ನು ಲೆಫೋರ್ಟೋವೋ ಜೈಲಿಗೆ ಹಾಕಲಾಗಿತ್ತು. ಆದರೆ ಅಲ್ಲಿ ಅವರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಉಗ್ರರ ಆಶ್ರಯ, ತರಬೇತಿಗೆ ಅಪ್ಘಾನಿಸ್ತಾನ ಬಳಕೆ ಬೇಡ: ಬ್ರಿಕ್ಸ್ ಘೋಷಣೆ
ಅಪ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಒಡ್ಡಲು ಅಥವಾ ದಾಳಿ ಮಾಡಲು ಹಾಗೂ ಉಗ್ರರಿಗೆ ಆಶ್ರಯ ಮತ್ತು ತರಬೇತಿ ನೀಡಲು ಬಳಸಿಕೊಳ್ಳಬಾರದು ಎಂದು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಗುರುವಾರ ಹಮ್ಮಿಕೊಂಡ ವಾರ್ಷಿಕ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿವೆ.
‘ಶಾಂತಿಯುತ, ಸುರಕ್ಷಿತ ಹಾಗೂ ಸ್ಥಿರವಾದ ಅಪ್ಘಾನಿಸ್ತಾನವನ್ನು ಬೆಂಬಲಿಸುತ್ತೇವೆ ಹಾಗೂ ಅಪ್ಘಾನಿಸ್ತಾನದ ಸಾರ್ವಭೌಮತೆ, ಸ್ವಾತಂತ್ರ್ಯ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತೇವೆ’ ಎಂದು ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಒಳಗೊಂಡಿರುವ ಬ್ರಿಕ್ಸ್ ಸಮೂಹವು ಒತ್ತಿ ಹೇಳಿದೆ.
ಇದೇ ವೇಳೆ, ರಷ್ಯಾ ಹಾಗೂ ಉಕ್ರೇನ್ ಕೂಡಾ ಯುದ್ಧ ನಿಲ್ಲಿಸಿ ಮಾತುಕತೆ ಮೂಲಕ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಬ್ರಿಕ್ಸ್ ರಾಷ್ಟ್ರಗಳು ಕರೆ ನೀಡಿವೆ.
ಬ್ರಿಕ್ಸ್ ವಾರ್ಷಿಕ ಸಭೆಯನ್ನು ಚೀನಾ ಆಯೋಜಿಸಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.