ಕ್ರೈಮಿಯಾ ಪರ್ಯಾಯ ದ್ವೀಪದಲ್ಲಿ ರಷ್ಯಾದ ಅಂಟೊನೊವ್-26 ಮಿಲಿಟರಿ ಸಾರಿಗೆ ವಿಮಾನವು ಪರ್ವತಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಸಾವನ್ನಪ್ಪಿದ್ದು, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಮಾಸ್ಕೋ (ಮಾ.1): ರಷ್ಯಾದ ಅಂಟೊನೊವ್-26 (An-26) ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾ ಪರ್ಯಾಯ ದ್ವೀಪದ ಕಡಿದಾದ ಪರ್ವತದ ಕಂದಕಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 29 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ಬೆಳಿಗ್ಗೆ ಖಚಿತಪಡಿಸಿದೆ. ರಷ್ಯಾದ ಮಾಧ್ಯಮ ಸಂಸ್ಥೆ 'ಟಾಸ್' (Tass) ವರದಿಯ ಪ್ರಕಾರ, ಬ್ಲ್ಯಾಕ್‌ ಸೀ ಪಕ್ಕದಲ್ಲಿರುವ ಕ್ರೈಮಿಯಾ ಪ್ರಾಂತ್ಯದಲ್ಲಿ ಈ ವಿಮಾನ ಪತನ ಸಂಭವಿಸಿದೆ. ವಿಮಾನದಲ್ಲಿದ್ದ 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ನಿಗದಿತ ಹಾರಾಟ ನಡೆಸುತ್ತಿದ್ದ ವಿಮಾನವು ಬೆಟ್ಟದ ತುದಿಗೆ ಡಿಕ್ಕಿ ಹೊಡೆದು ಪಪಾತಕ್ಕೆ ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಾಂತ್ರಿಕ ದೋಷವೇ ಕಾರಣ?

ಪ್ರಾಥಮಿಕ ವರದಿಗಳ ಪ್ರಕಾರ, ತಾಂತ್ರಿಕ ದೋಷವೇ ಈ ದುರಂತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ವಿಮಾನವು ಕಂದಕಕ್ಕೆ ಅಪ್ಪಳಿಸಿದ ತೀವ್ರತೆಗೆ ಯಾರು ಕೂಡ ಬದುಕುಳಿದಿಲ್ಲ ಎಂದು ರಷ್ಯಾದ ಆರ್‌ಐಎ (RIA) ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯವು ಅಧಿಕೃತ ತನಿಖೆಗೆ ಆದೇಶಿಸಿದೆ.

ಹಳೆಯ ಮಾದರಿಯ ವಿಮಾನ

An-26 ಮಾದರಿಯ ವಿಮಾನಗಳು 1960ರ ದಶಕದ ಉತ್ತರಾರ್ಧದಿಂದ ಸೇವೆಯಲ್ಲಿದ್ದು, ಇವುಗಳನ್ನು ಮುಖ್ಯವಾಗಿ ಸರಕು ಸಾಗಣೆ ಮತ್ತು ಮಿಲಿಟರಿ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಆದರೆ, ಕಳೆದ ಒಂದು ದಶಕದಲ್ಲಿ ಈ ಮಾದರಿಯ ವಿಮಾನಗಳು ಹಲವಾರು ಬಾರಿ ಭೀಕರ ಅಪಘಾತಗಳಿಗೆ ಈಡಾಗಿವೆ.

2022: ಉಕ್ರೇನ್‌ನ ಜಪೋರಿಝಿಯಾ ಪ್ರದೇಶದಲ್ಲಿ An-26 ಪತನಗೊಂಡು ಒಬ್ಬರು ಸಾವನ್ನಪ್ಪಿದ್ದರು.

2020: ಉಕ್ರೇನ್‌ನಲ್ಲಿ ತರಬೇತಿ ವಿಮಾನ ಪತನಗೊಂಡು 26 ಜನರು ಮೃತಪಟ್ಟಿದ್ದರು.

2020: ದಕ್ಷಿಣ ಸುಡಾನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ರಷ್ಯನ್ನರು ಸೇರಿದಂತೆ ಎಂಟು ಜನರು ಬಲಿಯಾಗಿದ್ದರು.

2017: ಪಶ್ಚಿಮ ಆಫ್ರಿಕಾದ ಕೋಟ್ ಡಿ ಐವರಿ ಎಂಬಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡು ನಾಲ್ವರು ಮೃತಪಟ್ಟಿದ್ದರು.