Ukraine Conflict: ಕೀವ್ ಸೇರಿ 40 ಉಕ್ರೇನಿ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ
Russi Ukraine War: ಕಳೆದ 24 ಗಂಟೆಗಳಲ್ಲಿ ರಾಜಧಾನಿ ಕೀವ್ ಸೇರಿದಂತೆ ಉಕ್ರೇನಿನ 40 ನಗರಗಳ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿವೆ
ಮಾಸ್ಕೋ (ಅ. 14): ಕಳೆದ 24 ಗಂಟೆಗಳಲ್ಲಿ ರಾಜಧಾನಿ ಕೀವ್ ಸೇರಿದಂತೆ ಉಕ್ರೇನಿನ 40 ನಗರಗಳ ಮೇಲೆ ರಷ್ಯಾದ ಕ್ಷಿಪಣಿಗಳು ದಾಳಿ ನಡೆಸಿವೆ. ಇದೇ ವೇಳೆ ಉಕ್ರೇನ್ ವಾಯುಪಡೆ ಕೂಡಾ ರಷ್ಯಾದ 25 ಕ್ಷಿಪಣಿಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿವೆ ಎಂದು ಉಕ್ರೇನ್ ಸೇನಾಧಿಕಾರಿ ಹೇಳಿದ್ದಾರೆ.ಕೀವ್ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್ ನಿರ್ಮಿತ ಕಾಮಿಕೇಜ್ ಡ್ರೋನ್ (ಸ್ಫೋಟಕ ಡ್ರೋನ್) ಬಳಸಿ ದಾಳಿ ನಡೆಸಿದೆ. ಕ್ರಿಮಿಯಾ ಸೇತುವೆ ಧ್ವಂಸಗೊಂಡಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಕಳೆದ 4 ದಿನಗಳಿಂದ ಉಕ್ರೇನಿನ ನಗರಗಳ ಮೇಲೆ ಸತತ ಕ್ಷಿಪಣಿ ಬಾಂಬ್ ಮಳೆಯನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಕೀವ್‌ನ ಪ್ರಮುಖ ಮೂಲಭೂತ ಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಕೀವ್ ಗವರ್ನರ್ ಓಲೆಕ್ಸಿ ಕುಲೇಬಾ ಹೇಳಿದ್ದಾರೆ.
ಉಕ್ರೇನಿನ ಮೈಕೋಲೈವ್ ಮೇಲೆ ನಡೆಸಿದ ಶೆಲ್ ಬಾಂಬ್ ದಾಳಿಯಲ್ಲಿ 5 ಅಂತಸ್ತಿನ ಬೃಹತ್ ಕಟ್ಟಡ ಧರೆಗುರುಳಿದೆ. ಕಪ್ಪುಸಮುದ್ರದ ತೀರದಲ್ಲಿರುವ ಸದರ್ನ್ ಬಗ್ ರಿವರ್ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿ ಬಾಂಬ್‌ಗಳ ದಾಳಿಯಿಂದ ತೀವ್ರ ಹಾನಿಯಾಗಿದೆ. ಸೋಮವಾರ ರಷ್ಯಾ ನಡೆಸಿದ ದಾಳಿಯಲ್ಲಿ ಒಟ್ಟು 19 ಉಕ್ರೇನಿಯನ್‌ರು ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ರಷ್ಯಾ ‘ಅತಿಕ್ರಮಣ’ ವಿರುದ್ಧ ವಿಶ್ವಸಂಸ್ಥೆ ಗೊತ್ತುವಳಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ ಆರಂಭಿವುದುದನ್ನು ವಿರೋಧಿಸುವ ಖಂಡನಾ ಗೊತ್ತವಳಿಯನ್ನು ವಿಶ್ವಸಂಸ್ಥೆ (United Nations) ಅಂಗೀಕರಿಸಿದೆ ಹಾಗೂ ಕೂಡಲೇ ಉಕ್ರೇನ್ ಪ್ರದೇಶದಲ್ಲಿ ಮಾಡಿಕೊಂಡಿರುವ ಅತಿಕ್ರಮಣಗಳನ್ನು ತೆರವು ಮಾಡುವಂತೆ ಸೂಚಿಸಿದೆ. 193 ದೇಶಗಳ ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಮತದಾನ ನಡೆದಾಗ 143 ದೇಶಗಳು ವಿಶ್ವಸಂಸ್ಥೆ ಗೊತ್ತುವಳಿ ಪರ ಹಾಗೂ 5 ದೇಶಗಳು ವಿರುದ್ಧ ಮತ ಹಾಕಿವು. ಆದರೆ ಭಾರತ ಸೇರಿ ತಟಸ್ಥ ಧೋರಣೆ ಅನುರಸರಿಸುತ್ತಿರುವ 35 ದೇಶಗಳು ಮತದಾನದಿಂದ ದೂರ ಉಳಿದವು.
ಅಮೆರಿಕಾ ಅಧ್ಯಕ್ಷರ ಕೈಯಲ್ಲಿ 24 ಗಂಟೆಯೂ ಇರತ್ತೆ ಜಗತ್ತನ್ನೇ ಧ್ವಂಸ ಮಾಡಬಲ್ಲ ಫುಟ್‌ಬಾಲ್
ಉಕ್ರೇನ್ ನ್ಯಾಟೋ ಸೇರಿದರೆ 3ನೇ ವಿಶ್ವಯುದ್ಧ ಖಚಿತ: ರಷ್ಯಾ ಎಚ್ಚರಿಕೆ: ಉಕ್ರೇನ್ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನ್ಯಾಟೋ -NATO) ಸೇರಿದರೆ ಇದು 3ನೇ ವಿಶ್ವಯುದ್ಧಕ್ಕೆ (World War 3) ಕಾರಣವಾಗುತ್ತದೆ ಎಂದು ರಷ್ಯಾ (Russia) ಎಚ್ಚರಿಕೆ ನೀಡಿದೆ. ಉಕ್ರೇನಿನ 4 ಪ್ರಾಂತ್ಯಗಳನ್ನು ರಷ್ಯಾ ತನ್ನ ತೆಕ್ಕೆಗೆ ಸೇರಿಸಿಕೊಂಡ ಬೆನ್ನಲ್ಲೇ ಉಕ್ರೇನಿನ (Ukraine) ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ತಮ್ಮ ದೇಶಕ್ಕೆ ಫಾಸ್ಟ್ ಟ್ರಾಕ್ ನ್ಯಾಟೋ ಸದಸ್ಯತ್ವವನ್ನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ರಷ್ಯಾದ ಭದ್ರತಾ ಸಂಸ್ಥೆಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೋವ್ ಕಿಡಿಕಾರಿದ್ದು, ‘ಈ ಹೆಜ್ಜೆಯನ್ನಿಡುವ ಮೂಲಕ 3ನೇ ವಿಶ್ವಯುದ್ಧಕ್ಕೆ ಉಕ್ರೇನ್ ನಾಂದಿ ಹಾಡುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದು ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಪಾಶ್ಚಿಮಾತ್ಯ ದೇಶಗಳು ಉಕ್ರೇನಿಗೆ ಸಹಾಯ ಮಾಡುವುದನ್ನು ರಷ್ಯಾ ಅವುಗಳೇ ನೇರವಾಗಿ ಯುದ್ಧಕ್ಕಿಳಿಯುತ್ತಿವೆ ಎಂದೇ ಪರಿಗಣಿಸುತ್ತದೆ. ಅಲ್ಲದೇ ಉಕ್ರೇನ್ ಅನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವ ಮೂಲಕ ನ್ಯಾಟೋ ರಾಷ್ಟ್ರಗಳೇ ಸ್ವತಃ ಆತ್ಮಹತ್ಯೆಯತ್ತ ಹೆಜ್ಜೆ ಇಡುತ್ತಿವೆ ಎಂಬ ಅರಿವು ಅವರಿಗಿರಲಿ. ನ್ಯಾಟೋ ಅಥವಾ ಅಮೆರಿಕದಿಂದ ನಿಯಂತ್ರಿಸಲ್ಪಡುವ ಯಾವುದೇ ಒಪ್ಪಂದದಲ್ಲಿ ಉಕ್ರೇನ್ ಸದಸ್ಯತ್ವ ಪಡೆದುಕೊಳ್ಳುವುದನ್ನು ರಷ್ಯಾ ಸಹಿಸಿಕೊಳ್ಳುವುದಿಲ್ಲ’ ಎಂದು ರಷ್ಯಾ ತನ್ನ ನಿಲುವನ್ನು ಪುನರುಚ್ಚರಿಸಿದೆ.