Russia Ukraine Crisis: 498 ಯೋಧರ ಸಾವು, ರಷ್ಯಾದ ಅಧಿಕೃತ ಹೇಳಿಕೆ
ತನ್ನ ಸೈನಿಕರ ಸಾವಿನ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆ
ಈವರೆಗೂ 498 ಯೋಧರ ಸಾವು, 1597 ಸೈನಿಕರಿಗೆ ಗಾಯ
6 ದಿನದಲ್ಲಿ 6000 ರಷ್ಯಾ ಯೋಧರು ಹತ ಎಂದ ಉಕ್ರೇನ್ ಅಧ್ಯಕ್ಷ
ಮಾಸ್ಕೋ (ಮಾ.2): ಕಳೆದ 7 ದಿನಗಳಿಂದ ಉಕ್ರೇನ್ (Ukraine ) ಮೇಲೆ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ನಮ್ಮ ದೇಶದ 498 ಯೋಧರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ (Russian Defense Ministry) ಮಾಹಿತಿ ನೀಡಿದೆ. ಯುದ್ಧ ಆರಂಭವಾದ ಬಳಿಕ ರಷ್ಯಾದ 6000ಕ್ಕೂ ಹೆಚ್ಚು ಯೋಧರನ್ನು ಹತ್ಯೆ ಮಾಡಿದ್ದಾಗಿ ಉಕ್ರೇನ್ ಹೇಳಿಕೊಂಡಿತ್ತಾದರೂ, ರಷ್ಯಾ ಕಡೆಯಿಂದ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಆದರೆ ಬುಧವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾದ ರಕ್ಷಣಾ ಸಚಿವಾಲಯ ನಮ್ಮ 498 ಯೋಧರು ಸಾವನ್ನಪ್ಪಿದ್ದು, 1597 ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಿದೆ.
ಇನ್ನು ರಷ್ಯಾದ ಅಪ್ರಚೋದಿತ ದಾಳಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್ ಈವರೆಗೆ ರಷ್ಯಾದ 6000 ಸೈನಿಕರನ್ನು ಹತ್ಯೆ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ (Volodymyr Zelensky) ಬುಧವಾರ ತಿಳಿಸಿದ್ದಾರೆ. ದೇಶವನ್ನುದೇಶಿಸಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಜೆಲೆನ್‌ಸ್ಕಿ, ‘ರಷ್ಯಾದ ತಾಯಂದಿರು ವಿದೇಶದಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಾವಿಗೀಡಾದ ಸೈನಿಕರ ಸಂಖ್ಯೆಯ ಬಗ್ಗೆ ಯೋಚನೆ ಮಾಡಿ, ಯುದ್ಧ ಆರಂಭವಾದ ನಂತರ ಮೊದಲ 6 ದಿನಗಳಲ್ಲಿ 6 ಸಾವಿರ ರಷ್ಯನ್ ಯೋಧರು ಹತರಾಗಿದ್ದಾರೆ. ಇದರಲ್ಲಿ ಮಂಗಳವಾರ ರಾತ್ರಿ ಹತರಾದ ಯೋಧರನ್ನು ಸೇರಿಸಲಾಗಿಲ್ಲ’ ಎಂದು ಹೇಳಿದ್ದಾರೆ.
ಅಲ್ಲದೇ ರಷ್ಯಾದ 30 ಯುದ್ಧ ವಿಮಾನಗಳು, 31 ಹೆಲಿಕಾಪ್ಟರ್‌ಗಳು, 211 ಟ್ಯಾಂಕ್‌ಗಳನ್ನು ನಾಶ ಮಾಡಲಾಗಿದೆ. ಇದರೊಂದಿಗೆ ರಷ್ಯಾದ ಸೈನಿಕರನ್ನು ಸಾಗಿಸುತ್ತಿದ್ದ 862 ಮಿಲಿಟರಿ ವಾಹನಗಳನ್ನು ನಾಶ ಮಾಡಲಾಗಿದೆ ಎಂದು ಉಕ್ರೇನ್ ಸೇನೆ ಹೇಳಿದೆ. ಆದರೆ ಉಕ್ರೇನ್ ಸೈನಿಕರ ಸಾವಿನ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಉಭಯ ದೇಶಗಳ ಸೈನ್ಯದಲ್ಲಿ ಈವರೆಗೆ 1,500 ಸೈನಿಕರು ಸಾವಿಗೀಡಾಗಿರಬಹುದು ಎಂದು ಪೆಂಟಾಗನ್ ಸೋಮವಾರ ಹೇಳಿತ್ತು. ರಷ್ಯಾ ದಾಳಿಯಲ್ಲಿ 2 ಸಾವಿರ ಉಕ್ರೇನ್ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್ ಸಂಸತ್ತು ಟೆಲಿಗ್ರಾಂ ಪೋಸ್ಟ್‌ನಲ್ಲಿ ತಿಳಿಸಿತ್ತು.
Russia Ukraine Crisis: "ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆಯಾಳು" ಮೋದಿಗೆ ತಿಳಿಸಿದ ಪುಟಿನ್!
ರಷ್ಯಾದಿಂದ ಪರಮಾಣು ಸಬ್‌ಮರೀನ್, ಕ್ಷಿಪಣಿ ನಿಯೋಜನೆ ಆರಂಭ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಉಕ್ರೇನ್ ವಿರುದ್ಧ ದಾಳಿ ನಡೆಸಲು ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸೂಚನೆ ನೀಡಿದ ಬೆನ್ನಲ್ಲೇ, ರಷ್ಯಾ ಸೇನೆ ಪರಮಾಣು ಜಲಾಂತರ್ಗಾಮಿ ನೌಕೆಗಳು ಬಾರೆಂಟ್ಸ್ ಸಮುದ್ರದಲ್ಲಿ ಯುದ್ಧಾಭ್ಯಾಸವನ್ನು ಆರಂಭಿಸಿವೆ. ಅದೇ ರೀತಿ ಸೈಬೀರಿಯಾದ (siberia) ಹಿಮಚ್ಛಾದಿತ ಕಾಡುಗಳಲ್ಲಿ ರಷ್ಯಾದ ಮೊಬೈಲ್ ಕ್ಷಿಪಣಿ ಲಾಂಚರ್‌ಗಳು ಸಂಚರಿಸುತ್ತಿವೆ ಎನ್ನಲಾಗಿದೆ.
ಸಮುದ್ರದಲ್ಲಿ ಬಿರುಗಾಳಿಯಂತಹ ಕಠಿಣ ಪರಿಸ್ಥಿತಿಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಲು ಪರಮಾಣು ಜಲಾಂತರ್ಗಾಮಿ ನೌಕೆಗಳು ಅಭ್ಯಾಸ ಆರಂಭಿಸಿವೆ. ವಾಯುವ್ಯ ರಷ್ಯಾದ ಕೋಲಾ ಪರ್ಯಾಯ ದ್ವೀಪದ ರಕ್ಷಣೆಗೆ ನಿಯೋಜಿಸಲಾಗುವ ಜಲಾಂತರ್ಗಾಮಿ ನೌಕೆಗಳು ಈ ಸಾಮರ್ಥ್ಯ ಹೊಂದಿರುತ್ತವೆ ಎಂದು ರಷ್ಯಾದ ಉತ್ತರದ ನೌಕಾಪಡೆಗಳು ಹೇಳಿವೆ. ಪೂರ್ವ ಸೈಬೀರಿಯಾದ ಇರ್ಕುಟ್ಸ್‌ಕ್ ಕಾಡುಗಳಲ್ಲಿ ಕಾರ್ಯತಂತ್ರದ ಕ್ಷಿಪಣಿ ಪಡೆಗಳ ಘಟಕಗಳು ಯಾರ್ಸ್ ಖಂಡಾಂತರ ಕ್ಷಿಪಣಿ ಲಾಂಚರ್‌ಗಳನ್ನು ರಹಸ್ಯವಾಗಿ ನಿಯೋಜಿಸಿ ತಾಲೀಮು ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ. ರಷ್ಯಾ ಪರಮಾಣು ಜಲಾಂತರ್ಗಾಮಿ ನೌಕೆಗಳು ಹಾಗೂ ಕ್ಷಿಪಣಿಗಳ ಅಭ್ಯಾಸವನ್ನು ಉಕ್ರೇನಿನ ಮೇಲೆ ದಾಳಿ ನಡೆಸಲೆಂದೇ ಆರಂಭಿಸಿದೆ ಎನ್ನಲಾಗುತ್ತಿದ್ದು, ಈ ಕುರಿತು ರಷ್ಯಾ ಸೇನೆ ಯಾವುದೇ ಸ್ಪಷ್ಟನೆ ನೀಡಿಲ್ಲ.
Russia Ukraine Crisis: ರಷ್ಯಾದ ಸೇನಾ ಟ್ಯಾಂಕರ್ ಅನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ!
ಈ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಡುವೆ 2ನೇ ಬಾರಿ ದೂರವಾಣಿ ಮಾತುಕತೆ ಬುಧವಾರ ನಡೆದಿದ್ದು, ಭಾರತೀಯ ಪ್ರಜೆಗಳ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.