ಜಗತ್ತಿನ ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ಉಕ್ರೇನ್‌ನ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡ ಪರಿಣಾಮ ದೇಶದ ದಕ್ಷಿಣ ಭಾಗದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಹೊರಬಿದ್ದಿವೆ.
ಖೇರ್ಸನ್: ಜಗತ್ತಿನ ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ಉಕ್ರೇನ್‌ನ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡ ಪರಿಣಾಮ ದೇಶದ ದಕ್ಷಿಣ ಭಾಗದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಹೊರಬಿದ್ದಿವೆ. ಅಣೆಕಟ್ಟೆ ಸ್ಫೋಟದಿಂದ ಡಿನೀಪರ್ ನದಿಯ (Dnieper river) ಮಟ್ಟಭಾರೀ ಏರಿಕೆಯಾಗಿದ್ದು, ಖೇರ್ಸನ್ ಸುತ್ತಮುತ್ತಲಿನ 1800ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಕೆಲವರು ರಾತ್ರಿಯಿಡೀ ಮನೆಯ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿದ್ದರೆ, ಸಾವಿರಾರು ಜನರು ಬುಧವಾರ ಕಂಡ ಕಂಡ ವಾಹನ ಹತ್ತಿ ಊರು ತೊರೆದಿದ್ದಾರೆ.
ರಷ್ಯಾದ ನಿಯಂತ್ರಣದಲ್ಲಿರುವ ಉಕ್ರೇನ್‌ನ ಈ ಭಾಗದಲ್ಲಿ ಕಳೆದ 16 ತಿಂಗಳ ಯುದ್ಧದ ಅವಧಿಯಲ್ಲೇ ಇದು ಅತ್ಯಂತ ಭೀಕರ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ. ಒಂದೆಡೆ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೆ, ಅದರ ನಡುವೆಯೇ ಭಾರಿ ಪ್ರಮಾಣದ ಗುಂಡು ಹಾಗೂ ಬಾಂಬ್ ದಾಳಿ ಕೂಡ ನಡೆಯುತ್ತಿದೆ. ಇದು ಜನರನ್ನು ಇನ್ನಷ್ಟುಆತಂಕಕ್ಕೆ ತಳ್ಳಿದೆ. ಸದ್ಯ ಸಾವಿನ ವರದಿಗಳು ಹೊರಬಂದಿಲ್ಲ. ಡಿನೀಪರ್ ನದಿಯಲ್ಲಿ ಪ್ರವಾಹದ ಮಟ್ಟಇನ್ನಷ್ಟು ಏರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜನರನ್ನು ಬಸ್, ರೈಲು ಹಾಗೂ ಮಿಲಿಟರಿ ಟ್ರಕ್‌ಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ಈವರೆಗೆ 1500 ಜನರನ್ನು ಮಾತ್ರ ತೆರವುಗೊಳಿಸಲಾಗಿದೆ. ಡ್ಯಾಮ್‌ನ ನೀರು ಇನ್ನೂ ಒಂದು ದಿನ ಇದೇ ರಭಸದಲ್ಲಿ ಕೆಳಮಟ್ಟಕ್ಕೆ ಹರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ರಷ್ಯಾದ ನಿಯಂತ್ರಣದಲ್ಲಿರುವ ಖೇರ್ಸನ್ ಪ್ರದೇಶದಲ್ಲಿ 900 ಜನರನ್ನು ರಕ್ಷಣೆ ಮಾಡಲಾಗಿದೆ. ತನ್ನ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಉಕ್ರೇನ್ (Ukraine) ಕೂಡ ತೆರವು ಕಾರ್ಯಾಚರಣೆ ನಡೆಸುತ್ತಿದೆ. ರಷ್ಯಾದವರೇ ಡ್ಯಾಮ್ ಸ್ಫೋಟಿಸಿದ್ದಾರೆ ಎಂದು ಉಕ್ರೇನ್‌ನ ಆರೋಪ ಹಾಗೂ ಉಕ್ರೇನಿಯನ್ನರೇ ಡ್ಯಾಮ್ ಸ್ಫೋಟಿಸಿದ್ದಾರೆ ಎಂದು ರಷ್ಯಾದ (Russia) ಪ್ರತ್ಯಾರೋಪ ಮುಂದುವರೆದಿದೆ. ಭಾಗಶಃ ಸ್ಫೋಟಗೊಂಡ ಕಖೋವ್ಕಾ ಅಣೆಕಟ್ಟೆಯನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ, ಅಣೆಕಟ್ಟೆಸಂಪೂರ್ಣ ಕುಸಿಯಲಿದೆ ಎಂದು ತಜ್ಞರು ಹೇಳಿದ್ದಾರೆ. ಆಗ ಇನ್ನಷ್ಟುಪ್ರವಾಹ ಉಂಟಾಗುವ ಸಾಧ್ಯತೆಯಿದೆ.
