* ‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ* 8ರಿಂದ 12ರ ಮಕ್ಕಳ ಮೇಲೆ ಸ್ಪುಟ್ನಿಕ್‌ ಲಸಿಕೆ ಪ್ರಯೋಗ* ಅಡ್ಡ ಪರಿಣಾಮಗಳು ಇಲ್ಲ, ಸೆಪ್ಟೆಂಬರ್‌ನಲ್ಲಿ ಬಿಡುಗಡೆ

ಸ್ಪುಟ್ನಿಕ್‌(ಜೂ.15): ಮಾಸ್ಕೋ: ಕೋವಿಡ್‌ ನಿಗ್ರಹಕ್ಕಾಗಿ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಲಸಿಕೆ ಎಂಬ ಹಿರಿಮೆ ಹೊಂದಿರುವ ‘ಸ್ಪುಟ್ನಿಕ್‌​-5’ ಈಗ ಮತ್ತೊಂದು ಪ್ರಯೋಗದಲ್ಲೂ ಯಶಸ್ವಿಯಾಗಿದೆ. ಲಸಿಕೆಯ ನೇಸಲ್‌ ಸ್ಪ್ರೇ (ಮೂಗಿನ ಮೂಲಕ ಸ್ಪ್ರೇ) ಮಾದರಿ ಯಶ ಕಂಡಿದೆ ಎಂದು ಸ್ಪುಟ್ನಿಕ್‌-5 ಉತ್ಪಾದಿಸುವ ಕಂಪನಿಯಾದ ‘ಗಮಲೇಯಾ’ ಪ್ರಕಟಿಸಿದೆ.

ಚುಚ್ಚುಮದ್ದಿನ ಲಸಿಕೆ ರೂಪದಲ್ಲಿ ನೀಡುತ್ತಿರುವ ಔಷಧವನ್ನೇ 8-12ರ ವಯೋಮಾನದ ಮಕ್ಕಳ ಮೇಲೆ ಬಳಸಲಾಗಿದೆ. ಇಂಜೆಕ್ಷನ್‌ ಬದಲಿಗೆ ನಾಜಲ್‌ ಅನ್ನು ಇಟ್ಟು ಅದೇ ಲಸಿಕೆಯನ್ನು ಸ್ಪ್ರೇ ಮಾಡಲಾಗಿದೆ. ಈ ವೇಳೆ ಮಕ್ಕಳಲ್ಲಿ ದೇಹದ ಉಷ್ಣಾಂಶ ಹೆಚ್ಚಳ ಸೇರಿದಂತೆ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಸೆ.15ರ ವೇಳೆಗೆ ಸ್ಪುಟ್ನಿಕ್‌ ನಾಸಲ್‌ ಸ್ಪ್ರೇಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆ ನಡೆಸಲಾಗುತ್ತಿದೆ ಎಂದು ಲಸಿಕೆ ಅಭಿವೃದ್ಧಿಪಡಿಸಿರುವ ಗಮಲೇಯಾ ಕಂಪನಿ ಮುಖ್ಯಸ್ಥ ಅಲೆಕ್ಸಾಂಡರ್‌ ಗಿಂಟ್ಸ್‌ಬರ್ಗ್‌ ಮಾಹಿತಿ ನೀಡಿದ್ದಾರೆ.

ಚುಚ್ಚುಮದ್ದಿನ ಲಸಿಕೆ ನೀಡಿದರೆ ಸಿರಿಂಜ್‌, ಸೂಜಿಯ ತ್ಯಾಜ್ಯ ಹೆಚ್ಚಬಹುದು. ಹೀಗಾಗಿ ನೇಸಲ್‌ ಸ್ಪ್ರೇ ಲಸಿಕೆ ಬಳಕೆಗೆ ಬಂದರೆ ತ್ಯಾಜ್ಯ ಕಡಿಮೆ ಮಾಡಬಹುದು ಎಂದು ಈ ಹಿಂದೆ ತಜ್ಞರು ಹೇಳಿದ್ದು ಇಲ್ಲಿ ಗಮನಾರ್ಹ.

ಗಮಲೇಯಾ ಸಂಸ್ಥೆ ಈಗಾಗಲೇ ಡಬಲ್‌ ಡೋಸ್‌ ಮತ್ತು ಸಿಂಗಲ್‌ ಡೋಸ್‌ ಸ್ಪುಟ್ನಿಕ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ ಡಬಲ್‌ ಡೋಸ್‌ ಮಾದರಿಯ ಲಸಿಕೆಯ ಉತ್ಪಾದನೆಗೆ ಈಗಾಗಲೇ ಭಾರತದಲ್ಲಿ ಚಾಲನೆ ನೀಡಲಾಗಿದೆ. ಶೀಘ್ರವೇ ಸಿಂಗಲ್‌ ಡೋಸ್‌ ಮಾದರಿಗೆ ಕೂಡ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.