ಮೊದಲು ಕೊರೋನಾ ಲಸಿಕೆ ಬಿಡುಗಡೆ : ರಷ್ಯಾದಿಂದ ಹಂಚಿಕೆಗೆ ತಡೆ
ಮೊಟ್ಟ ಮೊದಲ ಬಾರಿಗೆ ಕೊರೋನಾ ಲಸಿಕೆ ಬಿಡುಗಡೆ ಮಾಡಿದ್ದ ರಷ್ಯಾದಿಂದ ಇದೀಗ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ
ಮಾಸ್ಕೋ (ಅ.30): ವಿಶ್ವದಲ್ಲೇ ಮೊಟ್ಟಮೊದಲ ಕೊರೋನಾ ಲಸಿಕೆ ಬಿಡುಗಡೆ ಮಾಡಿ ಸುದ್ದಿಯಾಗಿದ್ದ ರಷ್ಯಾದಲ್ಲಿ ಆಗಲೇ ಸ್ಪುಟ್ನಿಕ್-5 ಲಸಿಕೆ ಕೊರತೆ ಕಾಣಿಸಿಕೊಂಡಿದೆಯಂತೆ.
ಪರಿಣಾಮ ಮೂರನೇ ಹಂತದ ಪರೀಕ್ಷೆಯನ್ನೇ ಸರ್ಕಾರ ಮುಂದೂಡಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-5 ಹೆಸರಿನ ಲಸಿಕೆ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳಲು ಪ್ರತೀನಿತ್ಯ ಸಾಗರೋಪಾದಿಯಲ್ಲಿ ಜನ ಸಮೂಹ ಹರಿದುಬರುತ್ತಿದೆ.
ಗುಡ್ ನ್ಯೂಸ್: ನೂರಕ್ಕಿಂತಲೂ ಕೆಳಗಿಳಿದ ಕೊರೋನಾ ಮರೆಯಾಗುವ ದಾರಿಯತ್ತ
ಆದರೆ, ಅಷ್ಟುಜನರಿಗೆ ಅಗತ್ಯವಿರುವಷ್ಟುಲಸಿಕೆಯನ್ನು ಸ್ಪುಟ್ನಿಕ್-5 ಲಸಿಕೆ ಉತ್ಪಾದಕ ಕಂಪನಿ ಮಾಸ್ಕೋದ ಗಾಮಲೆಯಾ ಸಂಸ್ಥೆ ಉತ್ಪಾದಿಸಿಲ್ಲ.
ಹೀಗಾಗಿ, ಸ್ವಯಂಪ್ರೇರಿತವಾಗಿ ಕೊರೋನಾ ಲಸಿಕೆಗೆ ಒಳಗಾಗಲು ಬರುತ್ತಿರುವವರಿಗೆ ಲಸಿಕೆಯ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೊಸಬರಿಗೆ ತಾತ್ಕಾಲಿಕವಾಗಿ ಲಸಿಕೆ ಪ್ರಯೋಗವನ್ನು ರಷ್ಯಾ ತಡೆ ಹಿಡಿಯಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ನವೆಂಬರ್ 10ರಿಂದ ಮತ್ತೆ ಲಸಿಕೆಯ ಪ್ರಯೋಗ ಆರಂಭವಾಗಲಿದೆ ಎಂದು ರಷ್ಯಾ ಆರೋಗ್ಯ ಇಲಾಖೆ ಹೇಳಿದೆ.