Asianet Suvarna News Asianet Suvarna News

ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

* ಉಕ್ರೇನ್‌ ಯುದ್ಧದ ಯಾವುದೇ ಫಲಿತಾಂಶ ಪರಮಾಣು ದಾಳಿಗೆ ಕಾರಣವಾಗದು

* ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಪ್ರಯೋಗ: ರಷ್ಯಾ

Russia says it will use nuclear weapons only if country existence is threatened pod
Author
Bangalore, First Published Mar 30, 2022, 9:28 AM IST | Last Updated Mar 30, 2022, 9:28 AM IST

ಮಾಸ್ಕೋ(ಮಾ.30): ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಮಾತ್ರ ನಾವು ಪರಮಾಣು ಅಸ್ತ್ರ ಪ್ರಯೋಗ ಮಾಡಲಿದ್ದೇವೆ ಎಂದು ರಷ್ಯಾ ಪುನರುಚ್ಚರಿಸಿದೆ. ಈ ಮೂಲಕ ಉಕ್ರೇನ್‌ ಯುದ್ಧ, ರಷ್ಯಾ ಮತ್ತು ನ್ಯಾಟೋ ಪಡೆಗಳ ನಡುವೆ ಭೀಕರ ಅಣ್ವಸ್ತ್ರ ದಾಳಿಗೆ ವೇದಿಕೆಯಾಗಬಹುದು ಎಂಬ ಆತಂಕವನ್ನು ದೂರ ಮಾಡಿದೆ.

ಸಂದರ್ಶನವೊಂದರಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ‘ಒಂದು ದೇಶವಾಗಿ ನಮ್ಮ ಅಸ್ತಿತ್ವಕ್ಕೆ ಯಾರಾದರೂ ಬೆದರಿಕೆ ಹಾಕಿದರೆ, ನಾವು ನಮ್ಮ ಬೆದರಿಕೆಯನ್ನು ತೊಡೆದುಹಾಕಲು ಅಣ್ವಸ್ತ್ರ ಬಳಸುವ ಬಗ್ಗೆ ಸ್ಪಷ್ಟವಾದ ರಕ್ಷಣಾ ನೀತಿಯನ್ನು ಹೊಂದಿದ್ದೇವೆ. ಸದ್ಯ ಉಕ್ರೇನ್‌ ಮೇಲೆ ನಡೆಯುತ್ತಿರುವ ದಾಳಿಯ ಯಾವುದೇ ಪರಿಣಾಮವು ಪರಮಾಣು ದಾಳಿಗೆ ಕಾರಣವಾಗದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ ಮೇಲೆ ಫೆ.24ರಂದು ದಾಳಿ ನಡೆಸಿದ್ದ ರಷ್ಯಾ, ಫೆ.28ರಂದು ತನ್ನ ಅಣ್ವಸ್ತ್ರ ಪಡೆಗೆ ಸಜ್ಜಾಗಿರುವ ಸೂಚನೆ ನೀಡಿತ್ತು. ಹೀಗಾಗಿ ಉಕ್ರೇನ್‌- ರಷ್ಯಾ ಯುದ್ಧ ಮೂರನೇ ಮಹಾಯುದ್ಧಕ್ಕೆ ಕಾರಣವಾಗುವ ಜೊತೆಗೆ, ಇಡೀ ಮನುಕುಲದ ಪರಿಣಾಮ ಬೀರಬಹುದಾದ ಪರಮಾಣು ದಾಳಿಗೆ ಕಾರಣವಾಗಬಹುದು ಎಂಬ ಭೀತಿಗೆ ಕಾರಣವಾಗಿತ್ತು.

ಚಚ್ಚಿ ಹಾಕ್ತೀನಿ: ಉಕ್ರೇನ್‌ಗೆ ರಷ್ಯಾ ಅಧ್ಯಕ್ಷ ಪುಟಿನ್‌ ಎಚ್ಚರಿಕೆ

 

ಯುದ್ಧ ಕೊನೆಗೊಳಿಸಲು ಉಕ್ರೇನ್‌ ಇಟ್ಟಿದ್ದ ಷರತ್ತುಗಳನ್ನು ಕೆಂಡಾಮಂಡಲವಾದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಉಕ್ರೇನ್‌ನನ್ನು ಚಚ್ಚಿ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದ್ದ ವಿಷಯ ಬೆಳಕಿಗೆ ಬಂದಿದೆ.

ರಷ್ಯಾದ ತೈಲ ಉದ್ಯಮಿ ಮತ್ತು ಚೆಲ್ಸಿ ಫುಟ್ಬಾಲ್‌ ತಂಡದ ಮಾಲೀಕ ರೋಮನ್‌ ಅಬ್ರಮೋವಿಚ್‌, ಉಕ್ರೇನ್‌ ಕೋರಿಕೆಯಂತೆ ಉಭಯ ದೇಶಗಳ ನಡುವೆ ಹಿಂಬಾಗಿಲ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ. ಇಂಥದ್ದೊಂದು ಸಂಧಾನದ ಮಾತುಕತೆಯ ಭಾಗವಾಗಿ ಯುದ್ಧ ಕೊನೆಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವೊಂದು ಷರತ್ತುಗಳುಳ್ಳ ಪತ್ರವೊಂದನ್ನು ಸ್ವತಃ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಬರೆದು, ಅದನ್ನು ಅಬ್ರಮೋವಿಚ್‌ಗೆ ಹಸ್ತಾಂತರ ಮಾಡಿದ್ದರು.

ಇದನ್ನು ನೋಡಿ ಆಕ್ರೋಶಗೊಂಡ ಪುಟಿನ್‌, ‘ಚಚ್ಚಿ ಹಾಕ್ತೀನಿ ಎಂದು ಅವರಿಗೆ ತಿಳಿಸು’ ಎಂದು ಅಬ್ಬರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ರಿಟನ್‌ನ ದ ಟೈಮ್ಸ್‌ ದಿನಪತ್ರಿಕೆ ವರದಿ ಮಾಡಿದೆ.

ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್‌ ಶೀಘ್ರ ಭಾರತಕ್ಕೆ?

ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ಆರಂಭವಾಗಿ ಸುಮಾರು ಒಂದು ತಿಂಗಳು ಕಳೆದಿದ್ದು, ಉಕ್ರೇನ್‌ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ರಷ್ಯಾ ಪ್ರಸ್ತಾಪ ಮಂಡಿಸಿದಾದ ಭಾರತ ತಟಸ್ಥವಾಗಿರುವ ನಿರ್ಣಯ ಕೈಗೊಂಡಿತ್ತು. ಭಾರತದ ಈ ನಿರ್ಣಯದ ಹಿನ್ನೆಲೆಯಲ್ಲಿ ಪ್ರಸ್ತಾಪವು ಅಗತ್ಯ 9 ಮತಗಳನ್ನು ಪಡೆಯದೇ, ಅಂಗೀಕಾರವಾಗಲಿಲ್ಲ.

ಇದೇ ರೀತಿ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕ್ರಮವನ್ನು ಟೀಕಿಸುವ ಪಾಶ್ಚಿಮಾತ್ಯ ರಾಷ್ಟ್ರಗಳ ಪ್ರಸ್ತಾಪಗಳ ಮಂಡನೆಯ ಸಮಯದಲ್ಲೂ ಭಾರತ ತಟಸ್ಥ ನೀತಿಯನ್ನೇ ಅನುಸರಿಸಿ, ಮತ ಚಲಾಯಿಸಲಿಲ್ಲ. ಹೀಗಾಗಿ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್‌ ಹಾಗೂ ಮೆಕ್ಸಿಕೋ ದೇಶಗಳು ಮಂಡಿಸಿದ ರಷ್ಯಾವನ್ನು ಖಂಡಿಸುವ ಪ್ರಸ್ತಾಪವು ತನ್ನ ಪರ 140 ಮತಗಳನ್ನು, 5 ವಿರುದ್ಧ ಮತಗಳನ್ನು ಪಡೆಯಿತು. ಭಾರತ ಸೇರಿದಂತೆ 38 ರಾಷ್ಟ್ರಗಳು ತಟಸ್ಥವಾಗಿದ್ದು ಮತ ಚಲಾಯಿಸಲಿಲ್ಲ

. ಅದರೊಂದಿಗೆ ತನ್ನ ತಟಸ್ಥ ನೀತಿ ಕುರಿತು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಚೀನಾ, ಬೆಲಾರೂಸ್‌, ಸಿರಿಯಾ ಹಾಗೂ ಉತ್ತರ ಕೊರಿಯಾ ರಷ್ಯಾ ಪರ ಮತ ಚಲಾಯಿಸಿದವು. ಆದರೂ ಭಾರತ ತಟಸ್ಥ ನಿಲುವು ಮುಂದುವರೆಸಿ ಉಕ್ರೇನ್‌ ಬಿಕ್ಕಟ್ಟಿನ ವಿಚಾರದಲ್ಲಿ ಭಾರತವು ರಷ್ಯಾ ಪರವಾಗಿಯೂ ಇಲ್ಲ ಎಂಬುದನ್ನು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚರ್ಚಿಸಲು ರಷ್ಯಾದ ವಿದೇಶಾಂಗ ಸಚಿವರು ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios