* ಉಕ್ರೇನ್‌ನ ಹಲವು ಯುದ್ಧ ಟ್ಯಾಂಕರ್‌ಗಳು ರಷ್ಯಾ ದಾಳಿಗೆ ನಾಶ* ಪರಮಾಣು ಸ್ಥಾವರ ಸಮೀಪದಲ್ಲೇ ಬಿದ್ದ ಅನಾಹುತಕಾರಿ ಕ್ಷಿಪಣಿ* ವಿದೇಶಗಳು ಕ್ಷಿಪಣಿ ನೀಡಿದರೆ ಅದನ್ನೂ ದ್ವಂಸಗೊಳಿಸುವ ಬೆದರಿಕೆ
ಕೀವ್(ಜೂ.06): ಉಕ್ರೇನ್ ಮೇಲೆ ದಾಳಿ ಆರಂಭಿಸಿ 100 ದಿನ ಪೂರೈಸಿರುವ ರಷ್ಯಾ ಸೇನೆ, ಭಾನುವಾರ ಉಕ್ರೇನ್‌ನ ರಾಜಧಾನಿ ಕೀವ್‌ನ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿವೆ. ರೈಲ್ವೆ ಘಟಕ ಮತ್ತು ಟಿ-72 ಯುದ್ಧ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಸಾಕಷ್ಟುಹಾನಿ ಸಂಭವಿಸಿದೆ ಎನ್ನಲಾಗಿದೆ. ದಾಳಿಗೆ ತುತ್ತಾದ ಎಲ್ಲಾ ಶಸ್ತ್ರಾಸ್ತ್ರಗಳು ವಿದೇಶಗಳು ದೇಣಿಗೆಯಾಗಿ ನೀಡಿದ್ದಾಗಿವೆ.
5 ವಾರದ ಹಿಂದೆ ವಿಶ್ವಸಂಸ್ಥೆ ಪ್ರಧಾನಿ ಕಾರ್ಯದರ್ಶಿ ಆ್ಯಂಟಾನಿಯಾ ಗ್ಯುಟೆರ್ರೆಸ್ ಉಕ್ರೇನ್‌ಗೆ ಭೇಟಿಕೊಟ್ಟಬಳಿಕ, ರಾಜಧಾನಿ ಕೀವ್ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿರಲಿಲ್ಲ. ತನ್ನ ದಾಳಿಯನ್ನು ಕೇವಲ ಪೂರ್ವದ ಪ್ರದೇಶಗಳಿಗೆ ಸೀಮಿತಗೊಳಿಸಿತ್ತು.
ಆದರೆ ಇದೀಗ 5 ವಾರಗಳ ಬಳಿಕ ರಷ್ಯಾ ನಡೆಸಿರುವ ದಾಳಿಯು, ಈಗಲೂ ಯಾವುದೇ ಪ್ರದೇಶಗಳ ಮೇಲೆ ದಾಳಿ ನಡೆಸುವ ರಷ್ಯಾದ ಸಾಮರ್ಥ್ಯ ಮತ್ತು ಇಚ್ಛೆಯನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಭಾನುವಾರದ ದಾಳಿಯ ವೇಳೆ ಒಂದು ಕ್ಷಿಪಣಿ ಪಿವ್‌ಡೆನ್ನೋಕ್ರೇನ್ಸ್$್ಕ ಪರಮಾಣು ಸ್ಥಾವರದ ಸಮೀಪದ ಆತಂಕಕಾರಿ ರೀತಿಯಲ್ಲಿ ಬಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೀವ್ ಮಾತ್ರವಲ್ಲದೇ ದೇಶದ ಇತರೆ ಹಲವು ಪ್ರದೇಶಗಳ ಮೇಲೂ ರಷ್ಯಾ ಸೇನೆ ಭಾನುವಾರ ದಾಳಿ ನಡೆಸಿದೆ.
ಕ್ಷಿಪಣಿ ನೀಡಿದರೆ ತಕ್ಕ ಪ್ರತ್ಯುತ್ತರ: ವಿದೇಶಗಳಿಗೆ ಮತ್ತೆ ರಷ್ಯಾ ಎಚ್ಚರಿಕೆ
ಮಾಸ್ಕೋ: ಉಕ್ರೇನ್‌ಗೆ ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಭಾರೀ ಸಾಮರ್ಥ್ಯದ ಕ್ಷಿಪಣಿಗಳನ್ನು ನೀಡುವುದರ ಬಗ್ಗೆ ಎಚ್ಚರಿಕೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ವಿದೇಶಗಳು ಕ್ಷಿಪಣಿ ನೀಡಿದರೆ ಅದನ್ನೂ ದ್ವಂಸಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಭಾನುವಾರ ಮಾತನಾಡಿರುವ ಪುಟಿನ್, ‘ವಿದೇಶಗಳ ಕ್ಷಿಪಣಿ ರವಾನೆ ಪ್ರಯತ್ನಗಳು ಯುದ್ಧವನ್ನು ಇನ್ನಷ್ಟುವಿಸ್ತರಿಸಬಲ್ಲವು. ಒಂದು ವೇಳೆ ಈ ಎಚ್ಚರಿಕೆ ಹೊರತಾಗಿಯೂ ಉಕ್ರೇನ್‌ಗೆ ದೂರಸಾಗಬಲ್ಲ ಕ್ಷಿಪಣಿ ನೀಡಿದರೆ, ನಾವು ಇದುವರೆಗೂ ದಾಳಿ ನಡೆಸದ ಸ್ಥಳಗಳ ಮೇಲೂ ದಾಳಿ ನಡೆಸಬೇಕಾಗಿ ಬರಲಿದೆ. ನಾವು ವಿನಾಶಕಾರಿ ಅಸ್ತ್ರಗಳನ್ನು ಬಳಸಲಿದ್ದೇವೆ’ ಎಂದಿದ್ದಾರೆ.
ಆದರೆ ಪುಟಿನ್‌ರ ಈ ಹೇಳಿಕೆ ಉಕ್ರೇನ್‌ನಲ್ಲಿ ಇದುವರೆಗೂ ದಾಳಿ ನಡೆಸದ ಸ್ಥಳಗಳ ಮೇಲಿನ ದಾಳಿಯೋ ಅಥವಾ ಉಕ್ರೇನ್ ಬೆಂಬಲಿಸುವ ದೇಶಗಳ ಮೇಲೋ ಎಂಬುದು ಖಚಿತಪಟ್ಟಿಲ್ಲ.
