* ಬಂಡುಕೋರರ ಮೂಲಕ ಉಕ್ರೇನ್‌ ಮೇಲೆ ಸತತ ಶೆಲ್‌ ದಾಳಿ* ಮತ್ತಷ್ಟುಮುಂಚೂಣಿ ಗಡಿಗೆ ಸೇನೆ, ಶಸ್ತ್ರಾಸ್ತ್ರ ರವಾನಿಸಿದ ರಷ್ಯಾ* ಯಾವುದೇ ಸಮಯದಲ್ಲಿ ದಾಳಿ: ನ್ಯಾಟೋದಿಂದಲೂ ಎಚ್ಚರಿಕೆ* ಎಲ್ಲೆಡೆಯಿಂದ ಉಕ್ರೇನ್‌ ಸುತ್ತುವರೆಯುತ್ತಿರುವ ರಷ್ಯಾ ಸೇನೆ* ಭಾನುವಾರಕ್ಕೆ ಮುಗಿಯಬೇಕಾಗಿದ್ದ ಸೇನಾ ಕವಾಯತು ವಿಸ್ತರಣೆ

ಕೀವ್‌ (ಫೆ.21): ತನ್ನ ಎಚ್ಚರಿಕೆಗೆ ಮಣಿಯದ ಉಕ್ರೇನ್‌ (Ukrain) ಮೇಲೆ ದಾಳಿಗೆ ರಷ್ಯಾ (Russia) ತನ್ನ ಸಿದ್ಧತೆ ಅಂತಿಮಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಯುದ್ಧ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಭಾನುವಾರ ತನ್ನ ಬೆಂಬಲಿತ ಉಕ್ರೇನಿ ಬಂಡುಕೋರರ ಮೂಲಕ, ಉಕ್ರೇನ್‌ ಸೇನೆ ಮೇಲೆ ರಷ್ಯಾ ಭಾರೀ ಪ್ರಮಾಣದ ಶೆಲ್‌ ದಾಳಿ ನಡೆಸಿದೆ. ಮತ್ತೊಂದೆಡೆ ಬೆಲಾರಸ್‌ ಜೊತೆಗೂಡಿ ತಾನು ಎರಡು ದಿನದಿಂದ ನಡೆಸುತ್ತಿದ್ದ 2 ದಿನಗಳ ಬೃಹತ್‌ ಸಮರಾಭ್ಯಾಸವನ್ನು ರಷ್ಯಾ ವಿಸ್ತರಣೆ ಮಾಡಿದೆ.

ಈ ಎಲ್ಲಾ ಬೆಳವಣಿಗೆಗಳು ಉಕ್ರೇನ್‌ ಅನ್ನು ಎಲ್ಲಾ ದಿಕ್ಕಿನಿಂದಲೂ ಸುತ್ತುವರೆದು ದಾಳಿ ನಡೆಸಲು ರಷ್ಯಾ ನಡೆಸಿರುವ ಯೋಜಿತ ತಂತ್ರ ಎನ್ನಲಾಗಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ನ್ಯಾಟೋ ಕೂಡಾ ‘ಉಕ್ರೇನ್‌ ಗಡಿಯಲ್ಲಿ ರಷ್ಯಾ ಸಮರಾಭ್ಯಾಸ ವಿಸ್ತರಣೆ ಮಾಡಿರುವುದು ಅದು ಯಾವುದೇ ಸಮಯದಲ್ಲಿ ದಾಳಿಗೆ ಸಜ್ಜಾಗಿದೆ ಎಂಬುದರ ಸಂಕೇತ’ ಎಂದು ಹೇಳಿದೆ. ಒಂದೆಡೆ ದಾಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಾಗಿದ್ದರೆ, ಉಕ್ರೇನ್‌ ಬೆಂಬಲಕ್ಕೆ ನ್ಯಾಟೋ ಪಡೆಗಳು ನಿಂತಿವೆ. ಹೀಗಾಗಿ ಒಂದು ವೇಳೆ ಯುದ್ಧ ಆರಂಭವಾದರೆ ಭಾರೀ ಸಾವು-ನೋವಿನ ಆತಂಕ ಎದುರಾಗಿದೆ.

ಬಂಡುಕೋರರ ಮೂಲಕ ದಾಳಿ: ರಷ್ಯಾ ಮತ್ತು ಪೂರ್ವ ಉಕ್ರೇನ್‌ ಗಡಿ ಸಂಧಿಸುವ ಜಾಗದಲ್ಲಿ ಬರುವ ಆಯಕಟ್ಟಿನ ಪ್ರದೇಶಗಳು ಉಕ್ರೇನ್‌ ಬಂಡುಕೋರರ ವಶದಲ್ಲಿವೆ. ಈ ಪ್ರದೇಶದಲ್ಲಿ ಭಾನುವಾರ ಬಂಡುಕೋರರು ಮತ್ತು ಉಕ್ರೇನ್‌ ಸೇನೆ ನಡುವೆ ಭಾರೀ ಪ್ರಮಾಣ ಶೆಲ್‌ ಮತ್ತು ಗುಂಡಿನ ದಾಳಿ ನಡೆದಿದೆ. ಇದು ಉಕ್ರೇನ್‌ ವಿರುದ್ಧ ರಷ್ಯಾ ದಾಳಿಯ ಮುನ್ಸೂಚನೆ ಎಂದೇ ಬಣ್ಣಿಸಲಾಗಿದೆ.

Russia Ukraine Crisis ಉಕ್ರೇನ್‌ ಗಡಿಯಲ್ಲಿ ರಷ್ಯಾ ಯುದ್ಧ ವಿಮಾನಗಳ ದಂಡು, ದಾಳಿ ಖಚಿತ ಎಂದ ಜೋ ಬೈಡನ್

ವಿಸ್ತರಣೆ: ಈ ನಡುವೆ ರಷ್ಯಾ ಮತ್ತು ಬೆಲಾರಸ್‌ ಜಂಟಿಯಾಗಿ ನಡೆಸುತ್ತಿದ್ದ ಬೃಹತ್‌ ಸಮರಾಭ್ಯಾಸವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಉಕ್ರೇನ್‌ನ ಉತ್ತರ ಗಡಿಯಲ್ಲಿರುವ ಬೆಲಾರಸ್‌ ರಷ್ಯಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅಲ್ಲದೇ ಉಕ್ರೇನ್‌ ರಾಜಧಾನಿ ಕೀವ್‌ ಬೆಲಾರಸ್‌ ಗಡಿಗೆ ಹತ್ತಿರದಲ್ಲಿದೆ. ಹೀಗಾಗಿ ಕೀವ್‌ ಮೇಲೆ ದಾಳಿಗೆ ಬೆಲಾರಸ್‌ ಅನ್ನು ರಷ್ಯಾ ಬಳಸಿಕೊಳ್ಳಬಹುದು ಎಂಬ ಆತಂಕ ಎದುರಾಗಿದೆ.

ಮಾತುಕತೆಗೆ ಆಹ್ವಾನ: ಇದರ ನಡುವೆಯೇ, ಉಕ್ರೇನ್‌ ಪ್ರಧಾನಿ ವೊಲೊದಿಮಿರ್‌ ಝೆಲೆನ್ಸ್‌ಕಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಸಂಧಾನ ಮಾತುಕತೆಯ ಆಹ್ವಾನ ನೀಡಿದ್ದಾರೆ. ಮಾತುಕತೆಗೆ ಸ್ಥಳ ನಿಗದಿಪಡಿಸಿ. ಸಮಸ್ಯೆ ಬಗೆಹರಿಸಿಕೊಳ್ಳೋಣ. ಉಕ್ರೇನ್‌ ಕೇವಲ ಶಾಂತಿಯುತ ಇತ್ಯರ್ಥಕ್ಕೆ ರಾಜತಾಂತ್ರಿಕ ಮಾತ್ರ ಮಾರ್ಗ ಅನುಸರಿಸಲಿದೆ ಎಂದು ಕೋರಿದ್ದಾರೆ. ಆದರೆ ಇದಕ್ಕೆ ರಷ್ಯಾ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಅಮೆರಿಕ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಅವರು, ‘ದಾಳಿಗೆ ರಷ್ಯಾ ಯೋಧರು ತುದಿಗಾಲಿನಲ್ಲಿ ನಿಂತಿದ್ದಾರೆ’ ಎಂದಿದ್ದಾರೆ. ಇದೇ ವೇಳೆ ಗಡಿಯಲ್ಲಿರುವ ರಷ್ಯಾದ 1.50 ಲಕ್ಷ ಯೋಧರ ಪೈಕಿ, ಶೇ.40ರಿಂದ 50ರಷ್ಟುಯೋಧರು ಗಡಿಯಲ್ಲಿನ ‘ಅಟ್ಯಾಕ್‌ ಪೊಸಿಷನ್‌’ಗೆ (ದಾಳಿ ನಡೆಸಲು ನಿಯೋಜನೆಗೊಳ್ಳುವ ಸ್ಥಳ) ಧಾವಿಸಿದ್ದಾರೆ ಎಂದು ಅಮೆರಿಕದ ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಉಕ್ರೇನ್‌ ಬಿಡಲು ಸೂಚನೆ: ಉಕ್ರೇನ್‌ನಲ್ಲಿರುವ ಜರ್ಮನಿ ಹಾಗೂ ಆಸ್ಪ್ರೇಲಿಯಾ ನಾಗರಿಕರಿಗೆ ಉಕ್ರೇನ್‌ ತೊರೆದು ಸ್ವದೇಶಕ್ಕೆ ಬರುವಂತೆ ಆಯಾ ಸರ್ಕಾರಗಳು ಸೂಚಿಸಿವೆ. ಈ ನಡುವೆ, ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿನ ನ್ಯಾಟೋ ಕಚೇರಿಯನ್ನು ಬ್ರಸೆಲ್ಸ್‌ಗೆ ಸ್ಥಳಾಂತರಿಸಲಾಗಿದೆ.

Russia Ukraine Crisis: ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಆಪರೇಷನ್ ಝಡ್

ಸಂಧಾನಕ್ಕೆ ಯತ್ನ: ಇಷ್ಟೆಲ್ಲ ಆದರೂ ರಷ್ಯಾ ಹಾಗೂ ಪಾಶ್ಚಾತ್ಯ ದೇಶಗಳ ನಡುವೆ ಸಂಧಾನ ಮಾತುಕತೆಗೆ ಯತ್ನ ನಡೆಯುತ್ತಲೇ ಇದೆ. ಫ್ರೆಂಚ್‌ ಪ್ರಧಾನಿ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಹಾಗೂ ಪುಟಿನ್‌ ನಡುವೆ ಮಾತುಕತೆ ಏರ್ಪಾಟಾಗಿದೆ. ಮುಂದಿನ ವಾರ ರಷ್ಯಾ ಹಾಗೂ ಅಮೆರಿಕ ವಿದೇಶಾಂಗ ಸಚಿವರ ಭೇಟಿ ಕೂಡ ನಿಗದಿಯಾಗಿದೆ.