28 ಲಕ್ಷ ಜನರಿರುವ ರಾಜಧಾನಿ ಕೀವ್‌ ಮೇಲೆ ದಾಳಿ ಸಂಭವ ದಾಳಿ ನಡೆದರೆ ಭಾರೀ ಅನಾಹುತ ಖಚಿತ, ಇದಕ್ಕೆ ರಷ್ಯಾ ಹೊಣೆ ಹೊಸ ಉಪಗ್ರಹ ಚಿತ್ರದಲ್ಲಿ ರಷ್ಯಾ ಸೇನಾ ನಿಯೋಜನೆ ಮಾಹಿತಿ ಬಯಲು

ವಾಷಿಂಗ್ಟನ್‌(ಫೆ.20): ಉಕ್ರೇನ್‌ ಮೇಲೆ ರಷ್ಯಾ ದಾಳಿ(Russia Ukraine Crisis) ಖಚಿತ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(Joe Biden) ಪುನರುಚ್ಚರಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡೆನ್‌ ‘ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಯಲಿದೆ ಎಂಬುದು ನನಗೆ ಖಚಿತವಾಗಿದೆ ಮತ್ತು ಅದಕ್ಕೆ ಕಾರಣಗಳೂ ಇವೆ. 28 ಲಕ್ಷ ಅಮಾಯಕ ಜನರಿರುವ ರಾಜಧಾನಿ ಕೀವ್‌ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ದಾಳಿಗೆ ರಷ್ಯಾ ಯೋಜನೆ ರೂಪಿಸಿದೆ’ ಎಂದು ಹೇಳಿದ್ದಾರೆ.

‘ಉಕ್ರೇನ್‌ ಮೇಲಿನ ದಾಳಿ ಸಮರ್ಥಿಸಲು ರಷ್ಯಾ ಏನೆಲ್ಲಾ ಕಾರಣಗಳನ್ನು ನೀಡಬಹುದೋ ಅದನ್ನೆಲ್ಲಾ ನಿವಾರಿಸಲು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಏನೇನೋ ಸಾಧ್ಯವೋ ಅದನ್ನೆಲ್ಲಾ ಮಾಡುತ್ತಿದ್ದೇವೆ. ಆದರೂ ಮುಂಬರುವ ವಾರ, ದಿನಗಳಲ್ಲಿ ರಷ್ಯಾ ದಾಳಿ ನಡೆಸಲಿದೆ ಎಂಬುದು ನನಗೆ ಖಚಿತವಾಗಲಿದೆ. ಒಂದು ವೇಳೆ ದಾಳಿ ನಡೆದರೆ ಸಂಭವಿಸುವ ಭಾರೀ ಅನಾಹುತಕ್ಕೆ ರಷ್ಯಾ ನೇರ ಹೊಣೆಯಾಗಲಿದೆ. ಯುದ್ಧಕ್ಕೆ ನಾವು ನಮ್ಮ ಸೇನೆಯನ್ನು ಕಳುಹಿಸುವ ಸಾಧ್ಯತೆ ಇಲ್ಲವಾದರೂ, ಉಕ್ರೇನ್‌ ಬೆಂಬಲಕ್ಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳು ನಿಲ್ಲಲಿವೆ. ಜೊತೆಗೆ ರಷ್ಯಾದ ಮೇಲೆ ಮತ್ತಷ್ಟುನಿರ್ಬಂಧಗಳನ್ನು ಹೇರುವುದು ಖಚಿತ’ ಎಂದು ಬೈಡೆನ್‌ ಹೇಳಿದ್ದಾರೆ.

Russia Ukraine Crisis ಉಕ್ರೇನ್‌ನಿಂದ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲಾನ್, 3 ಏರ್‌ಇಂಡಿಯಾ ವಿಮಾನ ನಿಯೋಜನೆ!

ಉಕ್ರೇನ್‌ ಗಡಿಯಲ್ಲಿ ರಷ್ಯಾ ಯುದ್ಧ ವಿಮಾನಗಳ ದಂಡು
ಉಕ್ರೇನ್‌ ಮೇಲೆ ದಾಳಿ ಉದ್ದೇಶವಿಲ್ಲ, ಉಕ್ರೇನ್‌ ಗಡಿಯಿಂದ ಸಾಕಷ್ಟುಸೇನೆ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂಬ ರಷ್ಯಾ ಹೇಳಿಕೆಗಳು ಪೂರ್ಣ ಸುಳ್ಳು ಎಂದು ಸಾಬೀತುಪಡಿಸುವ ಹೊಸ ಸಾಕ್ಷ್ಯಗಳು ಶನಿವಾರ ಬಿಡುಗಡೆಯಾಗಿದೆ.

ಅಮೆರಿಕದ ಮ್ಯಾಕ್ಸರ್‌ ಸಂಸ್ಥೆಯ ಉಪಗ್ರಹವು ಕಳೆದ ಕೆಲ ದಿನಗಳಿಂದ ರಷ್ಯಾ-ಉಕ್ರೇನ್‌ ಗಡಿಭಾಗದ 5 ಪ್ರದೇಶಗಳಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಶನಿವಾರ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ ಉಕ್ರೇನ್‌ ಗಡಿಯಲ್ಲಿ ರಷ್ಯಾದ ಯುದ್ಧ ವಿಮಾನಗಳು ದೊಡ್ಡ ಪ್ರಮಾಣದಲ್ಲಿ ನಿಯೋಜನೆಯಾಗಿರುವುದು ಕಂಡುಬಂದಿದೆ.ಮುಖ್ಯವಾಗಿ ಬೆಲಾರಸ್‌, ಕ್ರಿಮಿಯಾ ಮತ್ತು ಪಶ್ಚಿಮ ರಷ್ಯಾ ವಲಯದಲ್ಲಿ ಈ ಯುದ್ಧ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದನ್ನು ಉಪಗ್ರಹ ಚಿತ್ರಗಳು ಖಚಿತಪಡಿಸಿವೆ.

Russia Ukraine Crisis ಯುದ್ಧದ ಭೀತಿ ಇದ್ದರೂ ನಾವೆಲ್ಲಾ ಕ್ಷೇಮ, ಭಾರತೀಯ ವಿದ್ಯಾರ್ಥಿಗಳ ಸಂದೇಶ!

ರಷ್ಯಾ ‘ಯುದ್ಧಕಾಲೇ ಶಸ್ತ್ರಾಭ್ಯಾಸ’!
ಉಕ್ರೇನ್‌ ಮೇಲೆ ದಾಳಿಗೆ ಸಜ್ಜಾಗುತ್ತಿರುವ ರಷ್ಯಾ, ಶನಿವಾರ ಅತ್ಯಾಧುನಿಕ ಕ್ಷಿಪಣಿ, ಸಬ್‌ಮರೀನ್‌, ಶಸ್ತಾ್ರಸ್ತ್ರಗಳ ಬೃಹತ್‌ ಪರೀಕ್ಷೆ ನಡೆಸಿದೆ. ಉಕ್ರೇನನ್ನು ನ್ಯಾಟೋ ಮಿತ್ರಕೂಟದಿಂದ ದೂರ ಇಡುವ ತನ್ನ ಬೇಡಿಕೆಗೆ ಅಮೆರಿಕ ಮತ್ತು ನ್ಯಾಟೋ ದೇಶಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದ ಬೆನ್ನಲ್ಲೇ, ರಷ್ಯಾ ನಡೆಸಿರುವ ಈ ಸೇನಾ ಕವಾಯತು, ಯುದ್ಧ ಭೀತಿಯನ್ನು ಮತ್ತಷ್ಟುಹೆಚ್ಚಿಸಿದೆ.

ಉಕ್ರೇನ್‌ಗೆ ಹೊಂದಿಕೊಂಡಂತೆ ಇರುವ ಗಡಿ ಪ್ರದೇಶದಲ್ಲಿ ರಷ್ಯಾ ಸೇನೆಯು ಶನಿವಾರ ಹೈಪರ್‌ಸಾನಿಕ್‌, ಅಣ್ವಸ್ತ್ರ ದಾಳಿ ನಡೆಸಬಲ್ಲ ಖಂಡಾಂತರ ಕ್ಷಿಪಣಿ, ಯುದ್ಧನೌಕೆ ಮತ್ತು ಸಬ್‌ಮರೀನ್‌ಗಳಿಂದ ಹಾರಿಸಬಹುದಾದ ಕ್ಷಿಪಣಿಗಳು, ಟಿಯು-95 ಬಾಂಬರ್‌ ಸೇರಿದಂತೆ ಅತ್ಯಾಧುನಿಕ ಮತ್ತು ಭಾರೀ ಸಾಮರ್ಥ್ಯದ ಶಸ್ತಾ್ರಸ್ತ್ರಗಳ ಪ್ರಯೋಗ ನಡೆಸಲಾಗಿದೆ.

ಎಲ್ಲಾ ಕ್ಷಿಪಣಿಗಳು ನಿಗದಿತ ಗುರಿಯನ್ನು ಮುಟ್ಟುವ ಮೂಲಕ ತಮ್ಮ ಉದ್ದೇಶಿತ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಸೇನಾ ಕವಾಯತಿನ ಉದ್ದೇಶವು ‘ನಮ್ಮ ವ್ಯೂಹಾತ್ಮಕ ದಾಳಿ ಪಡೆಗಳ ಅತ್ಯಂತ ನಿಖರ ಸಾಮ್ಯರ್ಥವನ್ನು ಒರೆಗೆ ಹಚ್ಚುವುದು ಮತ್ತು ನಮ್ಮ ಶತ್ರುಗಳ ಮೇಲೆ ದಾಳಿಯನ್ನು ಖಚಿತಪಡಿಸುವುದಾಗಿತ್ತು’ ಎಂದು ರಷ್ಯಾ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

ಇಡೀ ಕವಾಯತನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ರಷ್ಯಾದ ಮಿತ್ರ ದೇಶ ಬೈಲಾರಸ್‌ನ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆನ್ಕೊ ಒಟ್ಟಾಗಿ ಕುಳಿತು ಪರಿಶೀಲಿಸಿದರು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.