- ಕೀವ್‌, ಚೆರ್ನಿಹಿವ್‌ ಮೇಲಿನ ದಾಳಿ ಕಡಿತಕ್ಕೆ ರಷ್ಯಾ ಸಮ್ಮತಿ- ರಷ್ಯಾ-ಉಕ್ರೇನ್‌ ನಡುವಿನ ಮಾತುಕತೆ ಭಾಗಶಃ ಯಶಸ್ವಿ- ನ್ಯಾಟೋ ಸೇರದೇ ತಟಸ್ಥ ಧೋರಣೆಯಿಂದ ದಾಳಿ ಕಡಿತ

ಇಸ್ತಾಂಬುಲ್‌(ಮಾ.30): ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದ 34 ದಿನಗಳ ನಂತರ ಮೊದಲ ಬಾರಿಗೆ ತನ್ನ ಕಾರ್ಯಾಚರಣೆಯನ್ನು 2 ಪ್ರಮುಖ ನಗರಗಳಲ್ಲಿ ಕಡಿತಗೊಳಿಸಲು ರಷ್ಯಾ ಒಪ್ಪಿಕೊಂಡಿದೆ. ದಾಳಿ ಆರಂಭದ ನಂತರ ರಷ್ಯಾ ನೀಡಿದ ಪ್ರಮುಖ ಪ್ರತಿಕ್ರಿಯೆ ಇದಾಗಿದ್ದು, ಯುದ್ಧ ಮುಂದಿನ ದಿನಗಳಲ್ಲಿ ಕೊನೆಯಾಗಬಹುದು ಎಂಬ ಆಶಾಭಾವನೆ ಮೂಡಿದೆ.

ಮಂಗಳವಾರ ಟರ್ಕಿ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ನಡುವೆ ನಡೆದ ಸಂಧಾನ ಮಾತುಕತೆಯಲ್ಲಿ ರಾಜಧಾನಿ ಕೀವ್‌ ಮತ್ತು ಚೆರ್ನಿಹಿವ್‌ ನಗರಗಳ ಮೇಲಿನ ದಾಳಿಯನ್ನು ಕಡಿಮೆ ಮಾಡುವುದಾಗಿ ರಷ್ಯಾ ಹೇಳಿದೆ. ಅಲ್ಲದೇ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನಡುವೆ ನೇರ ಮಾತುಕತೆಯ ಸಾಧ್ಯತೆಗಳಿವೆ ಎಂದೂ ಸಹ ಉಕ್ರೇನಿ ಸಂಧಾನಕಾರರು ತಿಳಿಸಿದ್ದಾರೆ. ಇದರಿಂದಾಗಿ ಈ ಮಾತುಕತೆ ಭಾಗಶಃ ಯಶಸ್ವಿಯಾದಂತಾಗಿದೆ.

ಪತಿಗೆ ಗುಂಡಿಕ್ಕಿ, ಪುತ್ರನ ಎದುರೇ ಅತ್ಯಾಚಾರ, ರಷ್ಯಾ ಸೈನಿಕರ ಕರಾಳ ಮುಖ ಅನಾವರಣ ಮಾಡಿದ ಮಹಿಳೆ!

ಮಾತುಕತೆಯಲ್ಲಿ ಭಾಗಿಯಾಗಿದ್ದ ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್‌ ಫೋಮಿನ್‌ ಅವರು ಹೋರಾಟಗಳನ್ನು ಕೊನೆಗೊಳಿಸುವ ಮಾತುಕತೆಗಳಲ್ಲಿನ ನಂಬಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೀವ್‌ ಮತ್ತು ಚೆರ್ನಿಹಿವ್‌ನಿಂದ ಸೇನಾ ಬಲವನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಉಕ್ರೇನಿ ಸಂಧಾನಕಾರರು, ‘ನಮ್ಮ ದೇಶ ಯಾವುದೇ ಕೂಟ (ನ್ಯಾಟೋ) ಸೇರದೇ ತಟಸ್ಥ ಧೋರಣೆ ತಾಳಲಿದೆ’ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಖಾರ್ಕೀವ್‌ ಅಣು ಕೇಂದ್ರದ ಮೇಲೆ ರಷ್ಯಾ ಮತ್ತೆ ದಾಳಿ

ಪುಟಿನ್‌-ಜೆಲೆನ್‌ಸ್ಕಿ ನೇರ ಮಾತುಕತೆ ಸಾಧ್ಯತೆ:
ಈ ನಡುವೆ, ‘ಇಂದು ನಡೆದ ಮಾತುಕತೆ ಫಲಿತಾಂಶ ಉಭಯ ದೇಶಗಳ ನಾಯಕರು (ಪುಟಿನ್‌ ಹಾಗೂ ಜೆಲೆನ್‌ಸ್ಕಿ) ಪರಸ್ಪರ ಸಭೆ ನಡೆಸಲು ಸಾಕಾಗುತ್ತದೆ ಎಂದು ಉಕ್ರೇನ್‌ ಪ್ರಮುಖ ಸಂಧಾನಕಾರ ಡೇವಿಡ್‌ ಅರಾಕಮಿಯಾ ಹೇಳಿದ್ದಾರೆ. ಇದರಿಂದ ಪುಟಿನ್‌ ಹಾಗೂ ಜೆಲೆನ್‌ಸ್ಕಿ ನೇರ ಮಾತುಕತೆಯ ಸುಳುಹು ಲಭಿಸಿದೆ.

ಆದರೆ ಯುದ್ಧ ಆರಂಭವಾದಾಗಿನಿಂದಲೂ ರಷ್ಯಾದ ಪಡೆಗಳು ಉಕ್ರೇನ್‌ನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವಲ್ಲಿ ಸೋತಿವೆ. ಈ ಮಾತುಕತೆಗೂ ಮೊದಲು ಮಾತನಾಡಿದ ಉಕ್ರೇನ್‌ ಅಧ್ಯಕ್ಷ ಜೆಲೆನ್‌ ಸ್ಕೀ ಉಕ್ರೇನ್‌ ತಟಸ್ಥತೆ ಘೋಷಿಸಲು ಸಿದ್ಧವಾಗಿದೆ. ಪೂರ್ವದಲ್ಲಿರುವ ವಿವಾದಿತ ಪ್ರದೇಶಗಳ ಕುರಿತಾಗಿ ರಾಜಿ ಮಾಡಿಕೊಳ್ಳಲು ಸಿದ್ದವಾಗಿದೆ ಎಂದು ಹೇಳಿದ್ದರು. ಈ ಮಾತುಕತೆಯ ಸಮಯದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಪಶ್ಚಿಮ ಉಕ್ರೇನ್‌ನಲ್ಲಿರುವ ತೈಲ ಡಿಪೋ ನಾಶಗೊಂಡಿದ್ದು, ದಕ್ಷಿಣದಲ್ಲಿ ಕಟ್ಟಡಗಳು ನೆಲಕ್ಕುರುಳಿವೆ. ಇದರಲ್ಲಿ ಹಲವರು ಗಾಯಗೊಂಡಿದ್ದಾರೆ.

ಪುಟಿನ್‌- ಜೆಲೆನ್‌ಸ್ಕಿ ನೇರ ಚರ್ಚೆಗೆ ರಷ್ಯಾ ಷರತ್ತು
ಬಿಕ್ಕಟ್ಟು ಇತ್ಯರ್ಥಕ್ಕೆ ರಷ್ಯಾ- ಉಕ್ರೇನ್‌ ಅಧ್ಯಕ್ಷರ ನೇರ ಚರ್ಚೆ ಅತ್ಯಗತ್ಯ ಎಂಬ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಮನವಿಗೆ ಸ್ಪಂದಿಸಿರುವ ರಷ್ಯಾ, ಇಂಥದ್ದೊಂದು ಮಾತುಕತೆಗೆ ಮುನ್ನ ಕೆಲ ವಿಷಯಗಳು ಇತ್ಯರ್ಥವಾಗಬೇಕು ಎಂದು ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್‌ ಲಾವ್ರೋವ್‌, ‘ಕೆಲವೊಂದು ಮಹತ್ವದ ವಿಷಯಗಳ ಕುರಿತು ನಮಗೆ ಸ್ಪಷ್ಟನೆ ಸಿಕ್ಕ ಬಳಿಕವಷ್ಟೇ ಉಭಯ ದೇಶಗಳ ಅಧ್ಯಕ್ಷ ಮಾತುಕತೆ ನಡೆಯಬಹುದು. ಮೊದಲು ಆ ಕುರಿತು ನಿರ್ಧಾರವಾಗಬೇಕು’ ಎಂದು ಹೇಳಿದ್ದಾರೆ. ಪುಟಿನ್‌ ಜೊತೆ ಸಭೆಗೆ ಜೆಲೆನ್‌ಸ್ಕಿ ಆಗ್ರಹದ ಬೆನ್ನಲ್ಲೇ ರಷ್ಯಾ ಈ ಪ್ರತಿಕ್ರಿಯೆ ನೀಡಿದೆ.

ಉಕ್ರೇನ್‌ಗೆ ಮತ್ತಷ್ಟುಶಸ್ತ್ರಾಸ್ತ್ರ ಒದಗಿಸಿ: ಜೆಲೆನ್‌ಸ್ಕಿ
ರಷ್ಯಾ ಆಕ್ರಮಣದಿಂದ ಉಕ್ರೇನನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಷ್ಯಾವನ್ನು ವಿರೋಧಿಸುವ ಧೈರ್ಯವಿಲ್ಲ ಎಂದು ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಆರೋಪಿಸಿದ್ದಾರೆ. ಜೊತೆಗೆ ರಷ್ಯಾ ದಾಳಿಯನ್ನು ಸಮರ್ಪಕವಾಗಿ ಎದುರಿಸಲು ಉಕ್ರೇನ್‌ಗೆ ಮತ್ತಷ್ಟುಫೈಟರ್‌ ಜೆಟ್‌ಗಳು ಮತ್ತು ಟ್ಯಾಂಕರ್‌ಗಳ ಅವಶ್ಯಕತೆ ಇದೆ. ಹಾಗಾಗಿ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.