* ಕಾಬೂಲ್‌ ಅರಮನೆ ಸಮೀಪ ರಾಕೆಟ್‌ ದಾಳಿ* ರಾಜಧಾನಿಗೂ ತಾಲಿಬಾನ್‌ ಉಗ್ರರ ಪ್ರವೇಶ ಶಂಕೆ* ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ

ಕಾಬೂಲ್‌(ಜು.21): ತಾಲಿಬಾನ್‌ ಉಗ್ರರು ಆಷ್ಘಾನಿಸ್ತಾನವನ್ನು ಹಂತಹಂತವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ರಾಜಧಾನಿ ಕಾಬೂಲ್‌ನಲ್ಲಿರುವ ಅರಮನೆ ಸಮೀಪವೇ ಮಂಗಳವಾರ 3 ರಾಕೆಟ್‌ ದಾಳಿ ನಡೆಸಲಾಗಿದೆ. ಇದು ಸರ್ಕಾರ ಮತ್ತು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ.

ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲವಾದರೂ, ಇದರ ಹಿಂದೆ ತಾಲಿಬಾನ್‌ನ ಕೈವಾಡದ ಪ್ರಬಲ ಶಂಕೆ ವ್ಯಕ್ತವಾಗಿದೆ. ಮಂಗಳವಾರ ಅಧ್ಯಕ್ಷ ಅಶ್ರಫ್‌ ಘನಿ ಅವರ ಈದುಲ್‌ ಅಝ್ಹಾ ಭಾಷಣಕ್ಕೂ ಮುನ್ನ ಕಾಬೂಲ್‌ ಅರಮನೆಯ ಸಮೀಪ ರಾಕೆಟ್‌ ದಾಳಿ ಮಾಡಲಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

3 ರಾಕೆಟ್‌, ಅರಮನೆ ಸಮೀಪದಲ್ಲಿ ಬಿದ್ದಿದ್ದು, ಸ್ಥಳದಲ್ಲಿದ್ದ ಕಾರೊಂದು ನಾಶವಾಗಿದೆ. ದಾಳಿ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಅಶ್ರಫ್‌ ಘನಿ, ತಾಲಿಬಾನ್‌ ವಿರುದ್ಧ ಕಿಡಿಕಾರಿದ್ದು, ಶಾಂತಿ ಕಾಪಾಡುವ ಯಾವುದೇ ಉದ್ದೇಶ ಮತ್ತು ಇಚ್ಛೆ ತಾಲಿಬಾನ್‌ಗೆ ಇಲ್ಲ ಎಂದು ಹೇಳಿದ್ದಾರೆ.