Asianet Suvarna News Asianet Suvarna News

ಫ್ರಾನ್ಸ್‌ನಲ್ಲಿ ಸತತ 6ನೇ ದಿನವೂ ಭಾರಿ ಹಿಂಸಾಚಾರ: 300ಕ್ಕೂ ಹೆಚ್ಚು ವಾಹನ, 35ಕ್ಕೂ ಹೆಚ್ಚು ಕಟ್ಟಡಗಳಿಗೆ ಬೆಂಕಿ

ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೆ 157 ಜನರನ್ನು ಬಂಧಿಸಲಾಗಿದೆ. ಇದರೊಂದಿಗೆ ಕಳೆದ 6 ದಿನಗಳಲ್ಲಿ ಬಂಧಿತರ ಸಂಖ್ಯೆ 3,354ಕ್ಕೆ ತಲುಪಿದೆ. ಆದರೆ ಶನಿವಾರಕ್ಕೆ ಹೋಲಿಸಿದರೆ ಹಿಂಸಾಚಾರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

riots in france continue for 6th day more than 300 vehicles 35 buildings burnt ash
Author
First Published Jul 4, 2023, 8:15 AM IST

ಪ್ಯಾರಿಸ್‌ (ಜುಲೈ 4, 2023): ಅಲ್ಜೀರಿಯಾ ಮೂಲದ 17 ವರ್ಷದ ಮುಸ್ಲಿಂ ಯುವಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾದ ಬಳಿಕ ಫ್ರಾನ್ಸ್‌ನಲ್ಲಿ ವಲಸಿಗರಿಂದ ಆರಂಭವಾಗಿರುವ ಹಿಂಸಾಚಾರ ಸತತ 6ನೇ ದಿನವಾದ ಭಾನುವಾರವೂ ಮುಂದುವರೆದಿದೆ. ದೇಶದ 220ಕ್ಕೂ ಹೆಚ್ಚು ನಗರಗಳಲ್ಲಿ ದಾಂಧಲೆ ನಡೆಸುತ್ತಿರುವ ಪ್ರತಿಭಟನಾಕಾರರು ಮತ್ತೆ 300ಕ್ಕೂ ಹೆಚ್ಚು ವಾಹನಗಳಿಗೆ ಮತ್ತು 35ಕ್ಕೂ ಹೆಚ್ಚು ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.

ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೆ 157 ಜನರನ್ನು ಬಂಧಿಸಲಾಗಿದೆ. ಇದರೊಂದಿಗೆ ಕಳೆದ 6 ದಿನಗಳಲ್ಲಿ ಬಂಧಿತರ ಸಂಖ್ಯೆ 3,354ಕ್ಕೆ ತಲುಪಿದೆ. ಆದರೆ ಶನಿವಾರಕ್ಕೆ ಹೋಲಿಸಿದರೆ ಹಿಂಸಾಚಾರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಶನಿವಾರ ಕೂಡಾ ನೂರಾರು ವಾಹನ ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚಿ, ಬೈಕ್‌, ಕಾರು, ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಬಟ್ಟೆ, ಶಾಪಿಂಗ್‌ ಮಾಲ್‌ಗಳನ್ನು ದೋಚುವ ಘಟನೆಗಳು ಎಗ್ಗಿಲ್ಲದೇ ನಡೆದಿದ್ದವು. ಈ ನಡುವೆ ಪ್ಯಾರಿಸ್‌ನಲ್ಲಿ ಬೆಂಕಿ ಬಿದ್ದ ಕಟ್ಟಡವೊಂದರಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇದನ್ನು ಓದಿ: ಸ್ವಿಜರ್ಲೆಂಡ್‌ಗೂ ಹಬ್ಬಿದ ಹಿಂಸಾಜ್ವಾಲೆ: ಫ್ರಾನ್ಸ್‌ನಲ್ಲಿ ನಿಲ್ಲದ ಕಿಚ್ಚು, ಸಾಮಾಜಿಕ ಜಾಲತಾಣ ಮೂಲಕ ಹೋರಾಟದ ಬೆಂಕಿಗೆ ತುಪ್ಪ

ಇದೇ ವೇಳೆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣಗಳೇ ಕಾರಣ ಎಂದು ಆರೋಪಿಸಿರುವ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರಾನ್‌, ಹಿಂಸಾನಿರತ ಮಕ್ಕಳ ಮಕ್ಕಳ ಹೊಣೆಯನ್ನು ನೀವೇ ಹೊರಬೇಕು ಎಂದು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ತಮ್ಮ ಹೊಣೆಯನ್ನು ಮರೆತ ಪೋಷಕರು ವಿಚಾರಣೆ ಎದುರಿಸಬೇಕಾಗಲಿದೆ ಎಂದು ಫ್ರಾನ್ಸ್‌ನ ಕಾನೂನು ಖಾತೆ ಸಚಿವ ಎರಿಕ್‌ ಡ್ಯುಪಾಂಡ್‌ ಹೇಳಿದ್ದಾರೆ.

ಮತ್ತೊಂದೆಡೆ ಶನಿವಾರ ಬೆಂಕಿ ಹಚ್ಚಿದ ಕಾರನ್ನು ದುಷ್ಕರ್ಮಿಗಳು ಮನೆಗೆ ನುಗ್ಗಿಸಿ ನಡೆಸಿದ ಹಿಂಸಾಚಾರದಲ್ಲಿ ತಮ್ಮ ಪತ್ನಿ ಮತ್ತು ಮಕ್ಕಳು ಗಾಯಗೊಂಡಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಕೇವಲ ಜಾಲತಾಣಗಳನ್ನು ದೂಷಿಸಿ ಕುಳಿತುಕೊಂಡಿದೆ ಎಂದು ಪ್ಯಾರಿಸ್‌ನ ಮೇಯರ್‌ ವಿನ್ಸೆಂಟ್‌ ಜೀನ್‌ ಬ್ರನ್‌ ದೂಷಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಯುವಕನ ಶೂಟೌಟ್‌ ಬಳಿಕ ಫ್ರಾನ್ಸ್‌ ಧಗಧಗ: 4 ದಿನಗಳಿಂದ ಗಲಭೆ; 2500 ಕಾರು, ಕಟ್ಟಡಕ್ಕೆ ಬೆಂಕಿ, 2400 ಜನರ ಸೆರೆ

ಶಾಂತಿ ಕಾಪಾಡಿ:
ಈ ನಡುವೆ ಹತ್ಯೆಗೀಡಾದ ಯುವಕನ ಅಜ್ಜಿ ನಾಡಿಯಾ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದು, ಗುಂಡಿನ ದಾಳಿ ನಡೆಸಿದ ಪೊಲೀಸ್‌ ಬಗ್ಗೆ ತನಗೆ ಆಕ್ರೋಶವಿದೆ. ಆದರೆ ಇಡೀ ಪೊಲೀಸ್‌ ವ್ಯವಸ್ಥೆ ಮತ್ತು ನ್ಯಾಯಾಂಗದ ವ್ಯವಸ್ಥೆ ಬಗ್ಗೆ ಅಲ್ಲ. ಹೀಗಾಗಿ ಜನರು ಹಿಂಸಾಚಾರ ನಿಲ್ಲಿಸಿ ಸಹಜ ಸ್ಥಿತಿ ಮರುಸ್ಥಾಪನೆಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇದನ್ನೂ ಓದಿ: ಬಾಲಕನ ಹತ್ಯೆ ಖಂಡಿಸಿ ಫ್ರಾನ್ಸಲ್ಲಿ ಭಾರಿ ಹಿಂಸೆ: ನೂರಾರು ವಾಹನಕ್ಕೆ ಬೆಂಕಿ; 200 ಪೊಲೀಸರಿಗೆ ಗಾಯ, ನೂರಾರು ಜನ ಸೆರೆ

 ಯುವಕನ ಕೊಂದ ಪೊಲೀಸ್‌ಗೆ ಕೋಟಿ ಕೋಟಿ ದೇಣಿಗೆ

ಈ ಮದ್ಯೆ, ಆಫ್ರಿಕಾ ಮೂಲದ 17 ವರ್ಷದ ನಹೆಲ್ ಮೆರ್ಜೌಕ್‌ನನ್ನು ಕೊಂದ ಫ್ರೆಂಚ್ ಪೊಲೀಸ್‌ಗೆ ಕೋಟಿ ಕೋಟಿ ದೇಣಿಗೆ ದೊರೆತಿದೆ. ಯುವಕನ ಹತ್ಯೆಯಿಂದ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ಆದರೆ, ಇನ್ನೊಂದೆಡೆ,  ಬಲಪಂಥೀಯ ಮಾಧ್ಯಮ ನಿರೂಪಕರು ಈ ಪೊಲೀಸ್‌ಗೆ ದೇಣಿಗೆ ನೀಡಲು ಸಹಾಯ ಮಾಡಲು Gofundme ವೆಬ್‌ಸೈಟ್‌ನಲ್ಲಿ ಲಿಂಕ್‌ ರಚನೆ ಮಾಡಿದ್ದಾರೆ. ಈ ಪೇಜ್‌ ಮೂಲಕ 1.07 ಮಿಲಿಯನ್ ಡಾಲರ್‌  (₹8.7 ಕೋಟಿ) ದೇಣಿಗೆಯನ್ನು ಫ್ರೆಂಚ್‌ ಪೊಲಿಸ್‌ ಪಡೆದುಕೊಂಡಿದ್ದಾರೆ. 

ಇದಕ್ಕೆ ಹೋಲಿಸಿದರೆ, ಸೋಮವಾರದಂದು ನಹೆಲ್ ಅವರ ಕುಟುಂಬಕ್ಕೆ ಸಂಗ್ರಹಿಸಲಾದ ನಿಧಿಯು 206,383 ಡಾಲರ್‌ ತಲುಪಿದೆ. ಉತ್ತರ ಆಫ್ರಿಕಾ ಮೂಲದ ನಹೇಲ್ ಅವರನ್ನು ಜೂನ್ 27 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
 

Follow Us:
Download App:
  • android
  • ios