ವಾಷಿಂಗ್ಸನ್(ನ.05): ಅಮೆರಿಕ ಅಧ್ಯಕ್ಷರಾದವರು 4 ವರ್ಷಗಳ ಅವಧಿ ಮುಗಿಸಿ ಮತ್ತೊಂದು ಅವಧಿಗೆ ಪುನರಾಯ್ಕೆಯಾಗುವುದು ಸರ್ವೇಸಾಮಾನ್ಯ. ಒಂದು ವೇಳೆ ಟ್ರಂಪ್‌ ಅವರು ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡರೆ, 27 ವರ್ಷಗಳಲ್ಲಿ ಒಂದೇ ಅವಧಿಗೆ ಅಮೆರಿಕ ಅಧ್ಯಕ್ಷರಾದ ಮೊದಲಿಗ ಅವರಾಗುತ್ತಾರೆ. 1988ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಅವರದ್ದೇ ಪಕ್ಷದ ಜಾಜ್‌ರ್‍ ಎಚ್‌.ಡಬ್ಲ್ಯು. ಬುಷ್‌ (ಜಾಜ್‌ರ್‍ ಡಬ್ಲ್ಯು ಬುಷ್‌ ಅವರ ಅಪ್ಪ) ಅವರು 1992ರ ಚುನಾವಣೆಯಲ್ಲಿ ಡೆಮೊಕ್ರಟಿಕ್‌ ಅಭ್ಯರ್ಥಿ ಬಿಲ್‌ ಕ್ಲಿಂಟನ್‌ ಅವರ ಎದುರು ಪರಾಭವಗೊಂಡಿದ್ದರು. ಹೀಗಾಗಿ ಮತ್ತೊಂದು ಅವಧಿಗೆ ಪುನರಾಯ್ಕೆಯಾಗುವ ಅವರ ಕನಸು ಭಗ್ನವಾಗಿತ್ತು. ಅದಾದ ನಂತರ ಕ್ಲಿಂಟನ್‌, ಜಾಜ್‌ರ್‍ ಡಬ್ಲ್ಯು. ಬುಷ್‌, ಬರಾಕ್‌ ಒಬಾಮಾ ಅವರು ಎರಡು ಅವಧಿಗೆ ಅಮೆರಿಕ ಅಧ್ಯಕ್ಷರಾಗಿದ್ದರು.

"

ಸತತ 2 ಅವಧಿಗೆ ಒನ್‌ ಟೈಮ್‌ ಅಧ್ಯಕ್ಷರು?

2016ರಿಂದ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್‌ ಟ್ರಂಪ್‌ ಅವರು ಒಂದು ವೇಳೆ ಚುನಾವಣೆಯಲ್ಲಿ ಏನಾದರೂ ಪರಾಭವಗೊಂಡರೆ ಒಂದೇ ಅವಧಿಗೆ ಅವರ ಅಧಿಕಾರಾವಧಿ ಮುಗಿಯುತ್ತದೆ. ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷರಾಗುತ್ತಾರೆ. ಇನ್ನೊಂದು ತಿಂಗಳಲ್ಲಿ ಜೋ ಬೈಡನ್‌ 78ನೇ ವರ್ಷ ಪೂರ್ಣಗೊಳಿಸಲಿದ್ದಾರೆ. ವಯೋಸಹಜ ಕಾರಣದಿಂದ ಅವರು ಮತ್ತೊಂದು ಅವಧಿಗೆ ಸ್ಪರ್ಧಿಸುವ ಸಾಧ್ಯತೆ ಇರುವುದಿಲ್ಲ. ಹಾಗಾದಾಗ ಮತ್ತೊಂದು ಬಾರಿ ಒಂದೇ ಅವಧಿಯ ಅಧ್ಯಕ್ಷರನ್ನು ಅಮೆರಿಕ ಕಾಣಬೇಕಾಗುತ್ತದೆ ಎಂಬ ವಿಶ್ಲೇಷಣೆಗಳು ಇವೆ.

ಗೆದ್ದರೆ ಜೋ ಬೈಡನ್‌ ಅಮೆರಿಕದ ಹಿರಿಯ ಅಧ್ಯಕ್ಷ

ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಜೋ ಬೈಡನ್‌ ಅವರೇನಾದರೂ ಮಣಿಸಿದರೆ, ಟ್ರಂಪ್‌ ಹೆಸರಿನಲ್ಲಿರುವ ದಾಖಲೆಯೊಂದು ಭಗ್ನವಾಗಲಿದೆ. 70ನೇ ವಯಸ್ಸಿನಲ್ಲಿ ಅಮೆರಿಕ ಅಧ್ಯಕ್ಷರಾದ ಮೊದಲಿಗ ಟ್ರಂಪ್‌. ಆದರೆ ಬೈಡನ್‌ ಅವರಿಗೆ 77 ವರ್ಷ 11 ತಿಂಗಳು. ಜ.20ರಂದು ಪ್ರಮಾಣವಚನ ಸ್ವೀಕರಿಸುವಷ್ಟರಲ್ಲಿ ಅವರ ವಯಸ್ಸು 78 ವರ್ಷವಾಗಿರುತ್ತದೆ. ಹೀಗಾಗಿ ಅವರು ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ದಾಖಲೆ ಸ್ಥಾಪಿಸುತ್ತಾರೆ.