ನಮ್ಮ ಷರತ್ತುಗಳಿಗೆ ಒಪ್ಪಿದರೆ ಯುದ್ಧ ನಿಲ್ಲಿಸಲು ರೆಡಿ: ರಷ್ಯಾ ಅಧ್ಯಕ್ಷ ಪುಟಿನ್
ಯುದ್ಧ ನಿಲ್ಲಿಸಿ ಮಾತುಕತೆ ಆರಂಭಿಸಲು ನಾವು ಸಿದ್ಧರಿದ್ದೇವೆ. ಇದಕ್ಕಾಗಿ ಉಕ್ರೇನ್ ಅಣ್ವಸ್ತ್ರ ಸ್ಥಾನಮಾನ ಹೊಂದಬಾರದು. ತನ್ನ ಸೇನಾಪಡೆಗಳ ಮೇಲೆ ನಿರ್ಬಂಧ ಹೇರಿಕೊಳ್ಳಬೇಕು. ಉಕ್ರೇನ್‌ನಲ್ಲಿರುವ ರಷ್ಯಾ ಭಾಷಿಕ ಜನರ ಹಿತರಕ್ಷಣೆ ಕಾಪಾಡಬೇಕು. ಈ ಸಂಬಂಧ ಮೂಲಭೂತ ಅಂತಾರಾಷ್ಟ್ರೀಯ ಒಪ್ಪಂದವಾಗಬೇಕು. ರಷ್ಯಾ ಮೇಲೆ ಹೇರಲಾಗಿರುವ ಎಲ್ಲ ಪಾಶ್ಚಾತ್ಯ ನಿರ್ಬಂಧಗಳನ್ನು ತೆಗೆದು ಹಾಕಬೇಕು: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ಮಾಸ್ಕೋ(ಜೂ.15): ಉಕ್ರೇನ್ ಮೇಲೆ ಯುದ್ಧ ಸಾರಿದ ಎರಡೂವರೆ ವರ್ಷಗಳ ಬಳಿಕ ಆ ಸಮರವನ್ನು ನಿಲ್ಲಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರಸ್ತಾಪವಿಟ್ಟಿದ್ದಾರೆ. 2022ರ ಬಳಿಕ ತಾನು ಆಕ್ರಮಿಸಿಕೊಂಡಿರುವ ನಾಲ್ಕು ಭಾಗಗಳಿಂದ ಉಕ್ರೇನ್ ದೂರ ಸರಿಯಬೇಕು ಹಾಗೂ ನ್ಯಾಟೋ ಸೇರ್ಪಡೆಯಾಗುವ ಯೋಜನೆಯನ್ನು ತೊರೆಯಬೇಕು. ಇದಕ್ಕೆ ಒಪ್ಪಿದರೆ ತಕ್ಷಣವೇ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಣೆ ಮಾಡುವುದಾಗಿ ಅವರು ಆಫರ್ ನೀಡಿದ್ದಾರೆ.
ಇದಕ್ಕೆ ತಕ್ಷಣವೇ ಉಕ್ರೇನ್‌ನಿಂದ ಪ್ರತಿಕ್ರಿಯೆ ಬಂದಿಲ್ಲ. ಆದರೆ ನ್ಯಾಟೋ ಸೇರಲು ಆ ದೇಶ ಉದ್ದೇಶಿಸಿದೆ. ಜತೆಗೆ ತನ್ನ ಎಲ್ಲ ಭೂಭಾಗಗಳಿಂದಲೂ ರಷ್ಯಾ ಕಾಲ್ತೆಗೆಯಬೇಕು ಎಂದು ಹೇಳುತ್ತಲೇ ಬಂದಿದೆ. ಹೀಗಾಗಿ ಪುಟಿನ್ ಪ್ರಸ್ತಾವವನ್ನು ಉಕ್ರೇನ್ ತಿರಸ್ಕರಿಸಬಹುದು ಎಂದು ಹೇಳಲಾಗುತ್ತಿದೆ.
ಪುಟಿನ್ ಹೇಳುವುದೇನು?:
ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ವಿದೇಶಾಂಗ ಸಚಿವಾಲಯದಲ್ಲಿ ಮಾತನಾಡಿದ ಪುಟಿನ್ ಅವರು, ಯುದ್ಧ ನಿಲ್ಲಿಸಿ ಮಾತುಕತೆ ಆರಂಭಿಸಲು ನಾವು ಸಿದ್ಧರಿದ್ದೇವೆ. ಇದಕ್ಕಾಗಿ ಉಕ್ರೇನ್ ಅಣ್ವಸ್ತ್ರ ಸ್ಥಾನಮಾನ ಹೊಂದಬಾರದು. ತನ್ನ ಸೇನಾಪಡೆಗಳ ಮೇಲೆ ನಿರ್ಬಂಧ ಹೇರಿಕೊಳ್ಳಬೇಕು. ಉಕ್ರೇನ್‌ನಲ್ಲಿರುವ ರಷ್ಯಾ ಭಾಷಿಕ ಜನರ ಹಿತರಕ್ಷಣೆ ಕಾಪಾಡಬೇಕು. ಈ ಸಂಬಂಧ ಮೂಲಭೂತ ಅಂತಾರಾಷ್ಟ್ರೀಯ ಒಪ್ಪಂದವಾಗಬೇಕು. ರಷ್ಯಾ ಮೇಲೆ ಹೇರಲಾಗಿರುವ ಎಲ್ಲ ಪಾಶ್ಚಾತ್ಯ ನಿರ್ಬಂಧಗಳನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳಿಗೆ ಸೇರ್ಪಡೆಯಾಗಲು ಮುಂದಾದ ಉಕ್ರೇನ್ ನಿರ್ಧಾರ ಖಂಡಿಸಿ 2022ರ ಫೆಬ್ರವರಿಯಲ್ಲಿ ಆ ದೇಶದ ಮೇಲೆ ರಷ್ಯಾ ಯುದ್ಧ ಆರಂಭಿಸಿತ್ತು. ಈ ಯುದ್ಧದಲ್ಲಿ ಹತ್ತಾರು ಸಾವಿರ ಜನರು ಬಲಿಯಾಗಿದ್ದಾರೆ.