* ಸೌದಿ, ಬಹ್ರೇನ್, ಅಫ್ಘನ್, ಪಾಕ್, ಓಮಾನ್, ಯುಎಇ, ಒಐಸಿ ಆಕ್ಷೇಪ* ನೂಪುರ್ ಶರ್ಮಾರ ವಿರುದ್ಧ ಕ್ರಮಕ್ಕೂ ಸೌದಿ, ಬ್ರಹ್ರೈನ್ ಸ್ವಾಗತ
ನವದೆಹಲಿ(ಜೂ.07): ಟೀವಿ ಚರ್ಚೆ ವೇಳೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದರ ಬಗ್ಗೆ ಹೇಳಿದ್ದಾರೆ ಎನ್ನಲಾದ ಮಾತುಗಳನ್ನು ಸೌದಿ ಅರೇಬಿಯಾ, ಓಮಾನ್, ಬಹ್ರೇನ್, ಅಷ್ಘಾನಿಸ್ತಾನ, ಯುಎಇ, ಪಾಕಿಸ್ತಾನ ಮತ್ತು ಇಸ್ಲಾಮಿಕ್ ದೇಶಗಳ ಸಂಘಟನೆ (ಐಒಸಿ) ಕಟುವಾಗಿ ಟೀಕಿಸಿವೆ.
ಇದೇ ವೇಳೆ ಹೇಳಿಕೆಯನ್ನು ಖಂಡಿಸಿ ನೂಪುರ್ ಶರ್ಮಾ ಅವರನ್ನು ಅಮಾನತು ಮಾಡಿದ ನಿರ್ಧಾರವನ್ನು ಕೂಡಾ ಸೌದಿ ಮತ್ತು ಬಹ್ರೈನ್ ದೇಶಗಳು ಸ್ವಾಗತಿಸಿವೆ.
'ಬಿಜೆಪಿಯ ದ್ವೇಷಪೂರಿತ ಭಾಷಣಗಳಿಗೆ ದೇಶ ಏಕೆ ಕ್ಷಮೆ ಕೇಳಬೇಕು?': ತೆಲಂಗಾಣ ಸಚಿವ ಕೆ.ಟಿ.ಆರ್
ಅರಬ್ ದೇಶಗಳು ಹೇಳಿದ್ದೇನು?:
ಬಿಜೆಪಿ ವಕ್ತಾರೆ ಹೇಳಿಕೆ ಖಂಡನೀಯ. ಯಾವುದೇ ಧಾರ್ಮಿಕ ವ್ಯಕ್ತಿ ಅಥವಾ ನಂಬಿಕೆ ಕುರಿತ ಪೂರ್ವಾಗ್ರಹಕ್ಕೆ ಕಾರಣವಾಗುವ ಅಂಶಗಳನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ‘ಪ್ರವಾದಿ ಮೊಹಮ್ಮದರ ಅವಮಾನಿಸುವ, ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಮತ್ತು ಧಾರ್ಮಿಕ ದ್ವೇಷಕ್ಕೆ ಚಿತಾವಣೆಯ ನೀಡುವ ನಡವಳಿಕೆಗಳು ಖಂಡನಾರ್ಹ. ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಇಂಥ ಯಾವುದೇ ಕೆಲಸಗಳಿಗೆ ಭಾರತ ಸರ್ಕಾರ ಅವಕಾಶ ನೀಡಬಾರದು. ‘ಧಾರ್ಮಿಕ ಸಂಕೇತಗಳನ್ನು ಗೌವರಿಸುವ ಅಗತ್ಯವಿದೆ. ಉಲ್ಲಂಘಿಸುವುದಲ್ಲ’ ಎಂದು ಸೌದಿ, ಬಹ್ರೇನ್, ಯುಎಇ, ಅಷ್ಘಾನಿಸ್ತಾನ, ಓಮಾನ್, ಪಾಕಿಸ್ತಾನ ಹಾಗೂ 57 ಇಸ್ಲಾಮಿಕ್ ದೇಶಗಳ ಸಂಘಟನೆ ‘ಐಒಸಿ’ ಹೇಳಿವೆ.
ಭಾನುವಾರ ಕುವೈತ್, ಇರಾನ್, ಕತಾರ್ ದೇಶಗಳು ಕೂಡಾ ಪೈಗಂಬರ್ ವಿರುದ್ಧದ ಹೇಳಿಕೆ ಖಂಡಿಸಿದ್ದವು
ಪಾಕ್, ಅರಬ್ ದೇಶಗಳಿಗೆ ಭಾರತ ತಿರುಗೇಟು
ನವದೆಹಲಿ: ಪಾಕಿಸ್ತಾನ ಮತ್ತು ಒಐಸಿ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ, ‘ಒಐಸಿ ಕಾರ್ಯದರ್ಶಿ ಹೇಳಿಕೆ ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು. ಕೆಲವು ವ್ಯಕ್ತಿಗಳು ನೀಡಿದ ಹೇಳಿಕೆ ಯಾವುದೇ ರೀತಿಯಲ್ಲಿ ಭಾರತ ಸರ್ಕಾರದ ನಿಲುವನ್ನು ಪ್ರತಿನಿಧಿಸುವುದಿಲ್ಲ. ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದೆ.
ಪ್ರವಾದಿ ಮೊಹಮ್ಮದರ ವಿರುದ್ಧ ಹೇಳಿಕೆ, ಬೇಷರತ್ತಾಗಿ ನನ್ನ ಹೇಳಿಕೆ ಹಿಂಪಡೆಯುವೆ: ನೂಪುರ್
ಇನ್ನು ಪಾಕ್ ಟೀಕೆ ಬಗ್ಗೆ ಬಗ್ಗೆ ಮಾತನಾಡಿರುವ ವಿದೇಶಾಂಗ ವಕ್ತಾರ ಅರಿಂದಮ್ ಬಗ್ಚಿ ‘ಅಲ್ಪಸಂಖ್ಯಾತರ ಹಕ್ಕುಗಳ ಸರಣಿ ಉಲ್ಲಂಘನೆ ಮಾಡುವ ದೇಶವೊಂದು ಮತ್ತೊಂದು ದೇಶದ ಬಗ್ಗೆ ಪ್ರತಿಕ್ರಿಯಿಸುವುದು ಅಸಂಬದ್ಧ. ಇಂಥ ಅಭಿಪ್ರಾಯಗಳಿಗೆ ಯಾವುದೇ ಮೌಲ್ಯಗಳೂ ಇಲ್ಲ. ಪಾಕಿಸ್ತಾನವು, ಹಿಂದೂ, ಸಿಖ್, ಕ್ರೈಸ್ತ ಮತ್ತು ಅಹಮದೀಯ ಅಲ್ಪಸಂಖ್ಯಾತರಿಗೆ ವ್ಯವಸ್ಥಿತವಾಗಿ ಕಿರುಕುಳ ನೀಡಿದ್ದಕ್ಕೆ ಇಡೀ ವಿಶ್ವ ಸಾಕ್ಷಿ’ ಎಂದಿದ್ದಾರೆ.
‘ಜೊತೆಗೆ ಭಾರತ ಸರ್ಕಾರವು, ಎಲ್ಲಾ ಧರ್ಮಗಳಿಗೂ ಅತ್ಯುನ್ನತ ಗೌರವವನ್ನು ಕಲ್ಪಿಸುತ್ತದೆ. ನಮ್ಮ ದೇಶ, ಮತಾಂಧರ ಗುಣಗಾನ ಮಾಡುವ ಮತ್ತು ಅವರ ಗೌರವಾರ್ಥ ಸ್ಮಾರಕ ನಿರ್ಮಿಸುವ ಪಾಕಿಸ್ತಾನದಂತೆ ಅಲ್ಲ’ ಎಂದು ತಿರುಗೇಟು ನೀಡಿದ್ದಾರೆ.
