* ಪ್ರವಾದಿ ಅವಹೇಳನ: ಹೇಳಿಕೆ ಹಿಂಪಡೆದ ನೂಪುರ್‌* ಟೀವಿ ಚರ್ಚೆಗಳಲ್ಲಿ ಶಿವನಿಗೆ ಅವಮಾನ ಆಗಿತ್ತು* ಅವಮಾನ ಸಹಿಸದೇ ಕೆಲ ಮಾತು ಆಡಿದ್ದೆ* ನನ್ನ ಮಾತು ನೋವಾದರೆ ಹೇಳಿಕೆ ಹಿಂಪಡೆವೆ

ನವದೆಹಲಿ(ಜೂ.06): ಪ್ರವಾದಿ ಮೊಹಮ್ಮದರ ವಿರುದ್ಧ ಟೀವಿ ಚರ್ಚೆಯಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಮಾನತಾಗಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯುವುದಾಗಿ ಹೇಳಿದ್ದಾರೆ.

ಪಕ್ಷದಿಂದ ಅಮಾನತಾದ ಬಳಿಕ ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ನೂಪುರ್‌, ‘ಇತ್ತೀಚಿನ ದಿನಗಳಲ್ಲಿ ನಾನು ಭಾಗವಹಿಸಿದ ಹಲವು ಟೀವಿ ಚರ್ಚೆಗಳಲ್ಲಿ ಮಹಾದೇವನನ್ನು (ಶಿವನನ್ನು) ಸತತವಾಗಿ ಅವಮಾನಿಸಲಾಗಿತ್ತು. ಗ್ಯಾನವಾಪಿಯಲ್ಲಿ ಪತ್ತೆ ಆಗಿದ್ದ ಶಿವಲಿಂಗ ಉದ್ದೇಶಿಸಿ, ‘ಅದು ಶಿವಲಿಂಗವಲ್ಲ, ಬದಲಾಗಿ ನೀರಿನ ಕಾರಂಜಿ’ ಎಂದೆಲ್ಲಾ ಹೇಳಲಾಗಿತ್ತು. ಜೊತೆಗೆ ಶಿವಲಿಂಗವನ್ನು ದೆಹಲಿ ರಸ್ತೆಯ ಬದಿಯಲ್ಲಿ ಹಾಕಿರುವ ಕಂಬಗಳಿಗೂ ಹೋಲಿಸಲಾಗಿತ್ತು. ಇಂಥ ಅವಮಾನ ಸಲ್ಲಿಸಲಾಗದೇ, ಅದಕ್ಕೆ ಪ್ರತಿಯಾಗಿ ನಾನು ‘ಕೆಲವೊಂದು ಮಾತು’ಗಳನ್ನು ಆಡಿದ್ದೆ. ನನ್ನ ಮಾತುಗಳು ಯಾರ ಧಾರ್ಮಿಕ ನಂಬಿಕೆಗಳಿಗಾದರೂ ನೋವು ತಂದಿದ್ದರೆ, ನಾನು ನನ್ನ ಹೇಳಿಕೆಯನ್ನು ಬೇಷರತ್‌ ಹಿಂಪಡೆಯುತ್ತೇನೆ’ ಎಂದಿದ್ದಾರೆ.

ಪ್ರವಾದಿ ಮೊಹಮ್ಮದರನ್ನು ಉದ್ದೇಶಿಸಿ ಟೀವಿ ಚರ್ಚೆಯಲ್ಲಿ ನೂಪುರ್‌ ಹೇಳಿಕೆ ನೀಡುತ್ತಿದ್ದಂತೆಯೇ ಅವರ ವಿರುದ್ಧ ಪುಣೆ, ಹೈದರಾಬಾದ್‌, ಮುಂಬೈ ಹಾಗೂ ದೇಶದ ಇನ್ನೂ ಕೆಲವು ಕಡೆ ಪ್ರಕರಣ ದಾಖಲಾಗಿದ್ದವು. ಇದರ ನಡುವೆ, ‘ನನಗೆ ಜೀವ ಬೆದರಿಕೆ ಬರುತ್ತಿದೆ’ ಎಂದೂ ನೂಪುರ್‌ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ರಾಷ್ಟ್ರೀಯ ವಕ್ತಾರೆ ನೂಪುರ್‌ಗೆ ಅಮಾನತು ಶಿಕ್ಷೆ

ಟೀವಿ ಚರ್ಚೆಯೊಂದರ ವೇಳೆ ಪ್ರವಾದಿ ಮೊಹಮ್ಮದರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಭಾರತೀಯ ಜನತಾ ಪಕ್ಷದಿಂದ ಅಮಾನತು ಮಾಡಲಾಗಿದೆ. ಜೊತೆಗೆ ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದಲೇ ವಜಾ ಮಾಡಲಾಗಿದೆ.

ಇವರಿಬ್ಬರ ಹೇಳಿಕೆಗಳು ಉತ್ತರಪ್ರದೇಶದ ಲಖನೌ ಸೇರಿದಂತೆ ಹಲವೆಡೆ ಹಿಂಸಾಚಾರಕ್ಕೂ ಕಾರಣವಾಗಿತ್ತು. ಜೊತೆಗೆ ಅರಬ್‌ ರಾಷ್ಟ್ರಗಳಲ್ಲಿ ಭಾರತ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿದೇಶಗಳಲ್ಲಿ ಭಾರತದ ವಸ್ತುಗಳನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿದ್ದವು.

ಇದರ ಬೆನ್ನಲ್ಲೇ, ‘ಇಂಥ ಹೇಳಿಕೆಗಳು ಪಕ್ಷಕ್ಕೆ ಭಾರೀ ಮುಜುಗರ ತರುವ ಜೊತೆಗೆ, ಹೇಳಿಕೆ ಪಕ್ಷದ ನಂಬಿಕೆ ಮತ್ತು ಸಿದ್ಧಾಂತಕ್ಕೆ ಪೂರ್ಣ ವಿರುದ್ಧ’ ಎನ್ನುವ ಕಾರಣ ನೀಡಿ ಇಬ್ಬರ ವಿರುದ್ಧವೂ ಬಿಜೆಪಿ ಶಿಸ್ತುಕ್ರಮ ಕೈಗೊಂಡಿದೆ.

ಇದೇ ವೇಳೆ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯದ ಆಕ್ರೋಶ ತಣ್ಣಗಾಗಿಸುವ ಯತ್ನವನ್ನೂ ಮಾಡಿರುವ ಬಿಜೆಪಿ, ‘ಪಕ್ಷ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ನಾಯಕರ ಅವಹೇಳನವನ್ನು ಖಂಡಿಸುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣ ಹಿನ್ನೆಲೆ:

ಇತ್ತೀಚಿನ ಟೀವಿ ಚರ್ಚೆಯೊಂದರ ವೇಳೆ ಬಿಜೆಪಿ ವಕ್ತಾರೆ ನೂಪುರ ಶರ್ಮಾ ಅವರು, ಪ್ರವಾದಿ ಮೊಹಮ್ಮದರ ವಿರುದ್ಧ ಲೈಂಗಿಕ ಕಿರುಕುಳದಂಥ ಅವಹೇಳನಕಾರಿ ಮಾತುಗಳನ್ನು ಬಳಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೇಳಿಕೆ ವಿರುದ್ಧ ದೆಹಲಿ, ಮಹಾರಾಷ್ಟ್ರ ಮೊದಲಾದೆಡೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಹಿಂಸಾಚಾರಕ್ಕೂ ಪ್ರಚೋದನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ, ಹೇಳಿಕೆ ಕುರಿತು ಪರಿಶೀಲನೆ ನಡೆಸಿದ್ದ ಬಿಜೆಪಿಯ ಶಿಸ್ತು ಸಮಿತಿ, ‘ನೂಪುರ್‌ ಅವರ ಹೇಳಿಕೆಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷ ಹೊಂದಿರುವ ನಿಲುವುಗಳಿಗೆ ವಿರುದ್ಧವಾಗಿದೆ. ಇದು ಪಕ್ಷದ ಸಂವಿಧಾನದ ಸ್ಪಷ್ಟಉಲ್ಲಂಘನೆಯಾಗಿದೆ. ಹೀಗಾಗಿ ಈ ಕುರಿತು ತನಿಖೆ ನಡೆದು ವರದಿ ಬರುವವರೆಗೂ ಅವರಿಗೆ ವಹಿಸಿರುವ ಎಲ್ಲಾ ಹೊಣೆಗಳನ್ನೂ ಹಿಂದಕ್ಕೆ ಪಡೆದು, ಪಕ್ಷದಿಂದ ಅಮಾನತು ಮಾಡಲಾಗುತ್ತಿದೆ’ ಎಂದು ಪ್ರಕಟಿಸಿದೆ.

ಮತ್ತೊಂದೆಡೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಟ್ವೀಟ್‌ ಮಾಡಿ ಬಳಿಕ ಅದನ್ನು ಅಳಿಸಿಹಾಕಿದ್ದ ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದಲೇ ವಜಾ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಂದಾಲ್‌, ‘ನನ್ನ ಟ್ವೀಟ್‌ಗಳು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಗುರಿಯಾಗಿಸಿ ಮಾಡಿದ್ದಲ್ಲ. ಬದಲಾಗಿ ಹಿಂದೂ ದೇವತೆಗಳನ್ನು ಅವಮಾನಿಸುತ್ತಿರುವವರನ್ನು ಪ್ರಶ್ನಿಸಿ ಮಾಡಿದ್ದು’ ಎಂದಿದ್ದಾರೆ.

ಯಾವುದೇ ಧರ್ಮದ ಅವಹೇಳನಕ್ಕೆ ಬೆಂಬಲವಿಲ್ಲ- ಬಿಜೆಪಿ

ಈ ಶಿಸ್ತು ಕ್ರಮ ಘೋಷಣೆಗೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್‌, ‘ಯಾವುದೇ ಧರ್ಮ ಅಥವಾ ಪಂಗಡವನ್ನು ಕಡೆಗಣಿಸುವ, ಅವಹೇಳನ ಮಾಡುವ ಸಿದ್ಧಾಂತವನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಜೊತೆಗೆ ಅಂಥ ವ್ಯಕ್ತಿ ಅಥವಾ ತತ್ವಗಳನ್ನು ನಾವು ಉತ್ತೇಜಿಸುವುದೂ ಇಲ್ಲ’ ಎಂದಿದ್ದಾರೆ.

‘ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಪ್ರತಿಯೊಂದು ಧರ್ಮ ಕೂಡಾ ವಿಕಸನಗೊಂಡಿದೆ ಮತ್ತು ಪ್ರವರ್ಧಮಾನಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ. ಯಾವುದೇ ಧರ್ಮಕ್ಕೆ ಸಂಬಂಧಿಸಿದ ವ್ಯಕ್ತಿಯ ಅವಹೇಳನವನ್ನು ಪಕ್ಷ ಖಂಡಿಸುತ್ತದೆ’ ಎಂದಿದ್ದಾರೆ.

‘ ದೇಶದ ಸಂವಿಧಾನವು, ಆತ ಅಥವಾ ಆಕೆಗೆ ಅವರ ಧರ್ಮವನ್ನು ಪಾಲಿಸುವ ಹಕ್ಕನ್ನು ನೀಡಿದೆ. ದೇಶ ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ವೇಳೆ, ದೇಶದ ಏಕತೆ, ಸಮಗ್ರತೆಗೆ, ಎಲ್ಲರನ್ನೂ ಸಮಾನವಾಗಿ ನೋಡುವ ಮತ್ತು ಪ್ರತಿಯೊಬ್ಬರೂ ಗೌರವಯುತವಾಗಿ ಬಾಳುವಂಥ ಸಮಾಜ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ’ ಎನ್ನುವ ಮೂಲಕ ಪಕ್ಷದ ವಿರುದ್ಧ ಮುಸ್ಲಿಮರು ಹೊಂದಿರುವ ಅಕ್ರೋಶವನ್ನು ತಣ್ಣಗಾಗಿಸುವ ಯತ್ನವನ್ನು ಬಿಜೆಪಿ ಮಾಡಿದ್ದಾರೆ.