* ವಿವಾದಕ್ಕೆ ಕಾರಣವಾಯ್ತು ನೂಪುರ್ ಶರ್ಮಾ ಕೊಟ್ಟ ಹೇಳಿಕೆ* ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ* ಗಲ್ಫ್‌ ರಾಷ್ಟ್ರಗಳ ಕೋಪಕ್ಕೆ ಕಾರಣವಾದ ನೂಪುರ್ ಹೇಳಿಕೆ 

ನವದೆಹಲಿ(ಜೂ.06): ಪ್ರವಾದಿ ಮೊಹಮ್ಮದ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಗಲ್ಫ್ ರಾಷ್ಟ್ರಗಳ ಅಸಮಾಧಾನಕ್ಕೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಕೇಂದ್ರವನ್ನು ಗುರಿಯಾಗಿಸಿದ್ದಾರೆ. ‘ಬಿಜೆಪಿ ಮೂಲಭೂತವಾದಿಗಳ ದ್ವೇಷಪೂರಿತ ಭಾಷಣಗಳಿಗೆ’ ಒಂದು ದೇಶವಾಗಿ ಭಾರತ ಏಕೆ ಕ್ಷಮೆಯಾಚಿಸಬೇಕು ಎಂದು ಸಚಿವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು "ದಿನದಿಂದ ದಿನಕ್ಕೆ ದ್ವೇಷವನ್ನು ಹರಡುತ್ತಿದೆ. ಹೀಗಿರುವಾಗ ಭಾರತೀಯರೆಲ್ಲಾ ಯಾಕೆ ಕ್ಷಮೆಯಾಚಿಸಬೇಕು. ಈ ವಿಚಾರವಾಗಿ ಬಿಜೆಪಿ ಕ್ಷಮೆಯಾಚಿಸಬೇಕು, ಒಂದು ರಾಷ್ಟ್ರವಾಗಿ ಭಾರತವಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹತ್ಯೆಯ ಬಗ್ಗೆ ಮಾತನಾಡುವಾಗ ಪ್ರಧಾನಿ ಮೌನವಾಗಿರುವುದು ಆಘಾತಕಾರಿಯಾಗಿದೆ ಎಂದು ಸಚಿವರು ಹೇಳಿದರು. "ನೀವು ಅನುಮತಿಸುವುದನ್ನು ನೀವು ಪ್ರಚಾರ ಮಾಡುತ್ತೀರಿ ಎಂಬುದನ್ನು ನಾನು ನಿಮಗೆ ನೆನಪಿಸುತ್ತೇನೆ" ಎಂದು ಅವರು ಹೇಳಿದರು, "ಮೌನ ಸಮರ್ಥನೆ ಧರ್ಮಾಂಧತೆ ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ" ಎಂದು ಅವರು ಹೇಳಿದರು.

ಅದೇ ಸಮಯದಲ್ಲಿ, ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧ ಪಕ್ಷವು ತೆಗೆದುಕೊಂಡಿರುವ ಕ್ರಮದ ಕುರಿತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಮಾತನಾಡುತ್ತಾ, ಅಂತಹ ಟೀಕೆಗಳನ್ನು ಮಾಡಿದವರನ್ನು ಬಿಜೆಪಿ ಜೈಲಿಗೆ ಕಳುಹಿಸಬೇಕು. ‘ಯಾವುದೇ ಧರ್ಮಕ್ಕೆ ಅವಮಾನವಾಗುವಂತಹ ಭಾಷೆ ಬಳಸುವುದು ಸರಿಯಲ್ಲ, ಬಿಜೆಪಿಯವರು ಕೂಡ ಈ ವಿಚಾರದಲ್ಲಿ ತಮ್ಮ ಹಿಡಿತವನ್ನು ಬಿಗಿಗೊಳಿಸಬೇಕು, ಅವರನ್ನು ಅಮಾನತು ಮಾಡಿ ಹೊರ ಹಾಕುವುದರಿಂದ ಮಾತ್ರ ಕೆಲಸ ಆಗುವುದಿಲ್ಲ, ಕಠಿಣ ಕಾನೂನಿನಡಿ ಜೈಲಿಗೆ ಹಾಕಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ಈ ವಿಚಾರದಲ್ಲಿ ಸರ್ಕಾರವನ್ನು ಸುತ್ತುವರಿದು "ಭಾರತವು ಯಾವುದೇ ತಪ್ಪು ಮಾಡಿಲ್ಲ, ಯಾಕಾಗಿ ಕ್ಷಮೆಯಾಚಿಸಬೇಕು. ತಪ್ಪು ಮಾಡಿದ್ದು ಬಿಜೆಪಿ. ಇದಕ್ಕೆ ಇಡೀ ದೇಶವೇ ಯಾಕೆ ಹೊಣೆಗಾರ ಆಗಬೇಕು? ಎಂದು ಪ್ರಶ್ನಿಸಿದ್ದಾರೆ. 

 ಪ್ರವಾದಿ ಅವಹೇಳನ: ಹೇಳಿಕೆ ಹಿಂಪಡೆದ ನೂಪುರ್‌

ಪ್ರವಾದಿ ಮೊಹಮ್ಮದರ ವಿರುದ್ಧ ಟೀವಿ ಚರ್ಚೆಯಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಅಮಾನತಾಗಿರುವ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ, ತಮ್ಮ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆಯುವುದಾಗಿ ಹೇಳಿದ್ದಾರೆ.

ಪಕ್ಷದಿಂದ ಅಮಾನತಾದ ಬಳಿಕ ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ನೂಪುರ್‌, ‘ಇತ್ತೀಚಿನ ದಿನಗಳಲ್ಲಿ ನಾನು ಭಾಗವಹಿಸಿದ ಹಲವು ಟೀವಿ ಚರ್ಚೆಗಳಲ್ಲಿ ಮಹಾದೇವನನ್ನು (ಶಿವನನ್ನು) ಸತತವಾಗಿ ಅವಮಾನಿಸಲಾಗಿತ್ತು. ಗ್ಯಾನವಾಪಿಯಲ್ಲಿ ಪತ್ತೆ ಆಗಿದ್ದ ಶಿವಲಿಂಗ ಉದ್ದೇಶಿಸಿ, ‘ಅದು ಶಿವಲಿಂಗವಲ್ಲ, ಬದಲಾಗಿ ನೀರಿನ ಕಾರಂಜಿ’ ಎಂದೆಲ್ಲಾ ಹೇಳಲಾಗಿತ್ತು. ಜೊತೆಗೆ ಶಿವಲಿಂಗವನ್ನು ದೆಹಲಿ ರಸ್ತೆಯ ಬದಿಯಲ್ಲಿ ಹಾಕಿರುವ ಕಂಬಗಳಿಗೂ ಹೋಲಿಸಲಾಗಿತ್ತು. ಇಂಥ ಅವಮಾನ ಸಲ್ಲಿಸಲಾಗದೇ, ಅದಕ್ಕೆ ಪ್ರತಿಯಾಗಿ ನಾನು ‘ಕೆಲವೊಂದು ಮಾತು’ಗಳನ್ನು ಆಡಿದ್ದೆ. ನನ್ನ ಮಾತುಗಳು ಯಾರ ಧಾರ್ಮಿಕ ನಂಬಿಕೆಗಳಿಗಾದರೂ ನೋವು ತಂದಿದ್ದರೆ, ನಾನು ನನ್ನ ಹೇಳಿಕೆಯನ್ನು ಬೇಷರತ್‌ ಹಿಂಪಡೆಯುತ್ತೇನೆ’ ಎಂದಿದ್ದಾರೆ.

ಪ್ರವಾದಿ ಮೊಹಮ್ಮದರನ್ನು ಉದ್ದೇಶಿಸಿ ಟೀವಿ ಚರ್ಚೆಯಲ್ಲಿ ನೂಪುರ್‌ ಹೇಳಿಕೆ ನೀಡುತ್ತಿದ್ದಂತೆಯೇ ಅವರ ವಿರುದ್ಧ ಪುಣೆ, ಹೈದರಾಬಾದ್‌, ಮುಂಬೈ ಹಾಗೂ ದೇಶದ ಇನ್ನೂ ಕೆಲವು ಕಡೆ ಪ್ರಕರಣ ದಾಖಲಾಗಿದ್ದವು. ಇದರ ನಡುವೆ, ‘ನನಗೆ ಜೀವ ಬೆದರಿಕೆ ಬರುತ್ತಿದೆ’ ಎಂದೂ ನೂಪುರ್‌ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು.