ತಾಲಿಬಾನ್ ಉಗ್ರರ ಭೀತಿ : ಸುಂದರ ಸ್ತ್ರೀಯರ ಫೋಟೋಗಳಿಗೆ ಮಸಿ!
- ಅಫ್ಘಾನಿಸ್ತಾನವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನ್ ಉಗ್ರರು
- ಬ್ಯೂಟಿಪಾರ್ಲರ್ ಸೇರಿ ವಿವಿಧ ಅಂಗಡಿಗಳ ಎದುರು ಅಳವಡಿಸಲಾಗಿದ್ದ ಮಹಿಳಾ ರೂಪದರ್ಶಿಗಳ ಫೋಟೋಗಳ ನಾಶ
ಕಾಬೂಲ್ (ಆ.20): ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ, ಬ್ಯೂಟಿಪಾರ್ಲರ್ ಸೇರಿ ವಿವಿಧ ಅಂಗಡಿಗಳ ಎದುರು ಅಳವಡಿಸಲಾಗಿದ್ದ ಮಹಿಳಾ ರೂಪದರ್ಶಿಗಳ ಫೋಟೋಗಳನ್ನು ನಾಶಪಡಿಸುತ್ತಿರುವ ಬೆಳವಣಿಗೆ ಕಂಡುಬರುತ್ತಿದೆ.
20 ವರ್ಷಗಳ ಹಿಂದೆ ತಾಲಿಬಾನ್ ಉಗ್ರರ ಕ್ರೂರ ಆಡಳಿತವನ್ನು ಕಂಡಿರುವ ಅಫ್ಘಾನಿಸ್ತಾನ ಜನರು, ಮತ್ತೆ ಅವರು ಮಹಿಳೆಯರ ವಿಚಾರದಲ್ಲಿ ಅದೇ ರೀತಿಯ ವರ್ತನೆ ತೋರಬಹುದು ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಹಲವು ಅಂಗಡಿಗಳ ಮುಂದಿದ್ದ ಮಹಿಳೆಯರ ಫೋಟೋಕ್ಕೆ ಅವರು ಖುದ್ದು ತಾವೇ ಕಪ್ಪು ಮಸಿ ಬಳಿಯಲು ಆರಂಭಿಸಿದ್ದಾರೆ. ಇನ್ನೂ ಕೆಲವೆಡೆ ಬಣ್ಣ ಬಳಿದು ಮಹಿಳೆಯರ ಫೋಟೋಗಳೇ ಕಾಣದಂತೆ ನಾಶಪಡಿಸಿದ್ದಾರೆ.
ತಾಲಿಬಾನಿಗಳಿಗೆ ಸಾಲು ಸಾಲು ಸವಾಲು : ಹಣವಿಲ್ಲ, ಅಹಾರ ದುಬಾರಿ
2001ರಲ್ಲಿ ಅಫ್ಘಾನಿಸ್ತಾನ ಮೇಲೆ ಅಮೆರಿಕ ಆಕ್ರಮಣ ಮಾಡಿದ ಬಳಿಕ ಕಾಬೂಲ್ ಸುತ್ತಮುತ್ತ ಸಾಕಷ್ಟುಬ್ಯೂಟಿಪಾರ್ಲರ್‌ಗಳು ತಲೆ ಎತ್ತಿದ್ದವು. ದೇಹದ ಒಂದಿಂಚೂ ಭಾಗ ಕಾಣದಂತೆ ಬುರ್ಖಾ ಧರಿಸಬೇಕು ಎಂಬ ತಾಲಿಬಾನ್ ಕಟ್ಟಪ್ಪಣೆ ಮುಗಿದ ಹಿನ್ನೆಲೆಯಲ್ಲಿ ಮಹಿಳೆಯರು ಸೌಂದರ್ಯ ವೃದ್ಧಿಗಾಗಿ ಬ್ಯೂಟಿಪಾರ್ಲರ್‌ಗಳಿಗೆ ಎಡತಾಕುತ್ತಿದ್ದರು. ಮಹಿಳೆಯರನ್ನು ಸೆಳೆಯಲು ಹಲವು ಅಂಗಡಿಗಳ ಮುಂದೆ ರೂಪದರ್ಶಿಗಳ ಫೋಟೋ ಅಳವಡಿಸಲಾಗಿತ್ತು.
ತಾಲಿಬಾನ್ ಉಗ್ರರು ಇದೀಗ ರಾಜಧಾನಿ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಾಗೂ ಜನರು ಹೆದರಿ ಹೋಗಿದ್ದಾರೆ. ಮಹಿಳೆಯರ ಫೋಟೋ ಇರುವ ಅಂಗಡಿಗಳಿಗೆ ಅದರ ಮಾಲೀಕರು ಹಾಗೂ ಜನರು ಕಪ್ಪು ಮಸಿ ಬಳಿಯುತ್ತಿದ್ದಾರೆ. ಬಣ್ಣ ಹೊಡೆಸಿ ಮಹಿಳೆಯರ ಫೋಟೋವನ್ನು ಮರೆಮಾಚುತ್ತಿರುವ ಬೆಳವಣಿಗೆಗಳು ಕಂಡುಬಂದಿವೆ.
1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಳ್ವಿಕೆ ನಡೆಸಿದ್ದ ತಾಲಿಬಾನ್‌ಗಳು ಬಾಲಕಿಯರು ಶಾಲೆಗೆ ಹೋಗುವಂತಿಲ್ಲ, ಪುರುಷರ ಸಂಪರ್ಕ ಬರುವಂತೆ ಮಹಿಳೆಯರು ಕೆಲಸ ಮಾಡುವಂತಿಲ್ಲ ಎಂಬ ನಿಯಮ ರೂಪಿಸಿದ್ದರು. ಅಕ್ರಮ ಸಂಬಂಧ ಹೊಂದಿದ ಮಹಿಳೆಯರನ್ನು ಕಲ್ಲು ಹೊಡೆದು ಕೊಲ್ಲುತ್ತಿದ್ದರು. ಆದರೆ ಇನ್ನು ಮುಂದೆ ಮಹಿಳೆಯರಿಗೆ ಗೌರವ ಕೊಡುತ್ತೇವೆ ಎಂದು ತಾಲಿಬಾನಿಗಳು ಹೇಳುತ್ತಿದ್ದರೂ ಅದನ್ನು ನಂಬುವ ಸ್ಥಿತಿಯಲ್ಲಿ ಸ್ಥಳೀಯ ಜನರೇ ಇಲ್ಲ.