ನಾಗರಿಕ ಸರ್ಕಾರವನ್ನು ಕೆಳಗಿಳಿಸಿ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್‌ ಉಗ್ರ ಸಂಘಟನೆಗೆ ಇದೀಗ ಸಾಲುಸಾಲು ಸವಾಲುಗಳು ಎದುರಾಗಿವೆ

ಕಾಬೂಲ್‌ (ಆ.20): ನಾಗರಿಕ ಸರ್ಕಾರವನ್ನು ಕೆಳಗಿಳಿಸಿ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್‌ ಉಗ್ರ ಸಂಘಟನೆಗೆ ಇದೀಗ ಸಾಲುಸಾಲು ಸವಾಲುಗಳು ಎದುರಾಗಿವೆ. ಅಫ್ಘಾನಿಸ್ತಾನ ಸ್ವಾತಂತ್ರ್ಯ ದಿನವನ್ನು ಉಗ್ರರು ಗುರುವಾರ ಆಚರಿಸಿದ್ದು, ಅಮೆರಿಕವನ್ನು ನಾವು ಮಣಿಸಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಅಫ್ಘಾನಿಸ್ತಾನದ ಮುಂದಿರುವ ಸವಾಲುಗಳು ತಾಲಿಬಾನ್‌ಗಳಿಗೆ ಸಮಸ್ಯೆಯಾಗಿದೆ.

ನಾಗರಿಕ ಸರ್ಕಾರ ಪತನ ನಂತರ ಎಟಿಎಂಗಳಲ್ಲಿ ಹಣ ಬರಿದಾಗಿದೆ. 3.8 ಕೋಟಿ ಜನರು ವಾಸಿಸುತ್ತಿರುವ ಈ ದೇಶ ಆಮದಿನ ಮೇಲೆ ಅವಲಂಬನೆಯಾಗಿದ್ದು, ಆಹಾರೋತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕಂಡುಬರುತ್ತಿದೆ. ಅಂತಾರಾಷ್ಟ್ರೀಯ ಅನುದಾನ ಪಡೆದು ಅಫ್ಘಾನಿಸ್ತಾನ ಸರ್ಕಾರ ನಡೆಯುತ್ತಿತ್ತು. ಆದರೆ ತಾಲಿಬಾನ್‌ಗಳಿಗೆ ಅಂತಹ ಹಣ ಹರಿದುಬರುವ ಸಾಧ್ಯತೆ ಇಲ್ಲ.

ಕರಾಳ ಮುಖ ತೋರಲು ಆರಂಭಿಸಿದ ತಾಲಿಬಾನಿಗಳು : ನಾಗರಿಕರ ಮೆಲೆ ಗುಂಡಿನ ಮಳೆ

ಮತ್ತೊಂದೆಡೆ, ಕರ್ತವ್ಯಕ್ಕೆ ಮರಳುವಂತೆ ನೌಕರರಿಗೆ ತಾಲಿಬಾನ್‌ ಕರೆ ಕೊಡುತ್ತಿದೆ. ಆದರೆ ಸರ್ಕಾರಿ ಅಧಿಕಾರಿಗಳು ಮನೆಯಲ್ಲಿ ಅಡಗಿದ್ದಾರೆ. ದೇಶವನ್ನೇ ತೊರೆಯಲು ಯತ್ನಿಸುತ್ತಿದ್ದಾರೆ.

ಇನ್ನೊಂದೆಡೆ ಕಾಬೂಲ್‌ನ ಉತ್ತರ ದಿಕ್ಕಿನಲ್ಲಿರುವ ಪಂಜಶೀರ್‌ ಕಣಿವೆ ಇನ್ನೂ ತಾಲಿಬಾನ್‌ ಕೈವಶವಾಗಿಲ್ಲ. ಉತ್ತರ ಬಂಡುಕೋರರ ಒಕ್ಕೂಟದಲ್ಲಿ ಆ ಪ್ರಾಂತ್ಯವಿದ್ದು, 2001ರಲ್ಲಿ ತಾಲಿಬಾನ್‌ ಸಂಹಾರಕ್ಕೆ ಅಮೆರಿಕ ಜತೆ ಈ ಬಂಡುಕೋರರು ಕೈಜೋಡಿಸಿದ್ದರು. ತಾಲಿಬಾನ್‌ ಹಿಡಿತದಿಂದ ದೂರ ಉಳಿದಿರುವ ಏಕೈಕ ಪ್ರಾಂತ್ಯ ಇದಾಗಿದ್ದು, ತಾಲಿಬಾನ್‌ ವಿರುದ್ಧ ಸಮರ ಸಾರಲು ಯತ್ನಿಸುತ್ತಿದೆ.

ಇದೇ ವೇಳೆ, ದೇಶದ ವಿವಿಧ ಭಾಗಗಳಲ್ಲಿ ತಾಲಿಬಾನ್‌ ವಿರುದ್ಧ ಸ್ಥಳೀಯ ಜನರೇ ದಂಗೆ ಏಳುತ್ತಿದ್ದಾರೆ. ಇವೆಲ್ಲಾ ತಾಲಿಬಾನಿಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ.