ಜನಸಂಖ್ಯೆ 70 ವರ್ಷದಲ್ಲೇ ಮೊದಲ ಬಾರಿ ಚೀನಾದಲ್ಲಿ ಇಳಿಕೆ
ಚೀನಾದಲ್ಲಿ ಕಳೆದ ಏಳು ದಶಕದಲ್ಲಿ ಇದೇ ಮೊದಲ ಬಾರಿ ಜನಸಂಖ್ಯೆ ಇಳಿಕೆಯಾಗಲು ಆರಂಭಿಸಿದೆ. ಅದರ ಜೊತೆಗೇ ಚೀನಾದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು, ಜನನ ದರ ಕಡಿಮೆಯಾಗುತ್ತಿದೆ.
ಬೀಜಿಂಗ್: ಇತ್ತ ಭಾರತವು ವಿಶ್ವದಲ್ಲೇ ನಂ.1 ಜನಸಂಖ್ಯೆಯ ರಾಷ್ಟ್ರವಾಗಲು ದಿನಗಣನೆ ಆರಂಭಿಸಿರುವ ಬೆನ್ನಲ್ಲೇ ಅತ್ತ ಚೀನಾದಲ್ಲಿ ಕಳೆದ ಏಳು ದಶಕದಲ್ಲಿ ಇದೇ ಮೊದಲ ಬಾರಿ ಜನಸಂಖ್ಯೆ ಇಳಿಕೆಯಾಗಲು ಆರಂಭಿಸಿದೆ. ಅದರ ಜೊತೆಗೇ ಚೀನಾದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು, ಜನನ ದರ ಕಡಿಮೆಯಾಗುತ್ತಿದೆ. ಇದು ಡ್ರ್ಯಾಗನ್ ರಾಷ್ಟ್ರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಈಗಲೂ ಜಗತ್ತಿನಲ್ಲಿ ಚೀನಾ ನಂ.1 ಜನಸಂಖ್ಯೆಯ ರಾಷ್ಟ್ರವಾಗಿದೆ. ಆದರೆ, ಇನ್ನು ಕೆಲವೇ ತಿಂಗಳಲ್ಲಿ ಭಾರತ ಆ ಸ್ಥಾನಕ್ಕೆ ಏರಲಿದ್ದು, ಚೀನಾ ನಂ.2 ಜನಸಂಖ್ಯೆಯ ರಾಷ್ಟ್ರವಾಗಲಿದೆ.
ಜನಸಂಖ್ಯೆ 85 ಲಕ್ಷ ಇಳಿಕೆ:
ಚೀನಾದ ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆಯು 2021ರ ಅಂತ್ಯದಲ್ಲಿದ್ದುದಕ್ಕಿಂತ 2022ರ ಅಂತ್ಯದಲ್ಲಿ ದೇಶದ ಜನಸಂಖ್ಯೆ(population) 8,50,000ದಷ್ಟುಕಡಿಮೆಯಾಗಿದೆ ಎಂದು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಅದರೊಂದಿಗೆ ಚೀನಾದ ಒಟ್ಟು ಜನಸಂಖ್ಯೆ ಈಗ 141 ಕೋಟಿ 75 ಲಕ್ಷವಾಗಿದೆ. ದೇಶದಲ್ಲಿ ಜನಿಸುವ ಪ್ರತಿ 95 ಲಕ್ಷ ಜನರಿಗೆ 1.4 ಕೋಟಿ ಜನರು ಮರಣ ಹೊಂದುತ್ತಿದ್ದಾರೆ. ಅಂದರೆ ಜನನ ದರಕ್ಕಿಂತ ಸಾವಿನ ದರ ಹೆಚ್ಚಿರುವುದರಿಂದ ಜನಸಂಖ್ಯೆ ಇನ್ನು ಇಳಿಮುಖದತ್ತ ಸಾಗಲಿದೆ.
ವೇಗವಾಗಿ ಬೆಳೆಯುತ್ತಿದೆ ವಿಶ್ವದ ಜನಸಂಖ್ಯೆ, ಎಷ್ಟು ಗೊತ್ತಾ?
ಮಹಿಳೆಯರ ಸಂಖ್ಯೆ ಕುಸಿತ:
ಚೀನಾದಲ್ಲೀಗ 72 ಕೋಟಿ ಪುರುಷರು ಹಾಗೂ 69 ಕೋಟಿ ಮಹಿಳೆಯರಿದ್ದಾರೆ. 1950ರ ದಶಕದ ನಂತರ ಚೀನಾದ (China) ಜನಸಂಖ್ಯೆ ಇದೇ ಮೊದಲ ಬಾರಿ ಇಳಿಕೆಯಾಗಿದೆ. ಜನಸಂಖ್ಯೆ ಸ್ಫೋಟಕ್ಕೆ ಕಡಿವಾಣ ಹಾಕಲು ದೇಶದಲ್ಲಿ ಈ ಹಿಂದೆ ಒಂದು ದಂಪತಿಗೆ ಒಂದೇ ಮಗು ಎಂಬ ಕಟ್ಟುನಿಟ್ಟಾದ ಕಾನೂನು (Law) ಜಾರಿಗೆ ತರಲಾಗಿತ್ತು. ಅದರ ಫಲವಾಗಿ ಜನಸಂಖ್ಯೆ ಇಳಿಕೆಯಾಗಿದೆ. ಆದರೆ, 2016ರಲ್ಲಿ ಈ ನೀತಿ ರದ್ದುಪಡಿಸಲಾಗಿದ್ದು, ದೇಶದಲ್ಲೀಗ ಹೆಚ್ಚು ಮಕ್ಕಳನ್ನು ಹೆರುವ ದಂಪತಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೂ 2ನೇ ಅಥವಾ 3ನೇ ಮಗುವನ್ನು ಹೆರುವ ದಂಪತಿಯ ಸಂಖ್ಯೆ ಅತ್ಯಲ್ಪ ಪ್ರಮಾಣದಲ್ಲಿದೆ. ದೇಶದ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಬೆಳೆಸುವ ಖರ್ಚು ದುಬಾರಿಯಾಗಿರುವುದರಿಂದ ಜನರು ಒಂದಕ್ಕಿಂತ ಹೆಚ್ಚು ಮಗು ಹೊಂದಲು ಮುಂದಾಗುತ್ತಿಲ್ಲ.
2023ರಲ್ಲಿ ಚೀನಾ ಹಿಂದಿಕ್ಕಿ ನಂ. 1 ಜನಸಂಖ್ಯಾ ದೇಶವಾಗಲಿದೆ ಭಾರತ..!
1950ರಲ್ಲಿ ಇಳಿಕೆಯಾಗಿತ್ತು:
ಕಳೆದ ಬಾರಿ ಚೀನಾದಲ್ಲಿ ಜನಸಂಖ್ಯೆ ಇಳಿಕೆಯಾಗಿದ್ದು 1950ರ ದಶಕದಲ್ಲಿ. ಆಗ ಅಧ್ಯಕ್ಷ ಮಾವೋ ಜೆಡಾಂಗ್ ಸಮೂಹ ಕೃಷಿ ಹಾಗೂ ಭಾರಿ ಪ್ರಮಾಣದ ಔದ್ಯೋಗೀಕರಣ ನೀತಿಯನ್ನು ಜಾರಿಗೆ ತಂದಿದ್ದರು. ಅದರಿಂದಾಗಿ ಭಾರಿ ಬರಗಾಲ ಉಂಟಾಗಿ ಕೋಟ್ಯಂತರ ಜನರು ಸಾವನ್ನಪ್ಪಿದ್ದರು. ಆಗ ಜನಸಂಖ್ಯೆ ಇಳಿಕೆಯಾಗಿತ್ತು. ನಂತರ ಜನಸಂಖ್ಯೆ ಸತತವಾಗಿ ಏರುತ್ತಿತ್ತು.